Supreme Court
Supreme Court  
ಸುದ್ದಿಗಳು

ಪತಂಜಲಿ ಪ್ರಕರಣ: ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿನ ಅನೈತಿಕ ಅಭ್ಯಾಸಗಳಿಗೆ ಐಎಂಎ ಕಡಿವಾಣ ಹಾಕಬೇಕು ಎಂದ ಸುಪ್ರೀಂ

Bar & Bench

ಆಧುನಿಕ ವೈದ್ಯಕೀಯ ಪದ್ಧತಿ ಅನುಸರಿಸುವ ಆಸ್ಪತ್ರೆಗಳಲ್ಲಿ ಅನಗತ್ಯ ಮತ್ತು ದುಬಾರಿ ಔಷಧ ಶಿಫಾರಸು ಮಾಡುವ ಅನೈತಿಕ ಅಭ್ಯಾಸಗಳಿಗೆ ಕಡಿವಾಣ ಹಾಕುವ ಮೂಲಕ ಭಾರತೀಯ ವೈದ್ಯಕೀಯ ಸಂಘವು (ಐಎಂಎ) ತನ್ನ ಮನೆಯನ್ನು ಒಪ್ಪವಾಗಿ ಇರಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಐಎಂಗೆ ಕಿವಿ ಹಿಂಡಿದೆ [ಐಎಂಎ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಕೋವಿಡ್‌ ಲಸಿಕೆ ಮತ್ತು ಆಧುನಿಕ ಔಷಧದ ವಿರುದ್ಧ ಅವಹೇಳನಕಾರಿ ಅಭಿಯಾನ ನಡೆಸಲಾಗುತ್ತಿದೆ ಎಂದು ಆರೋಪಿಸಿ ಬಾಬಾ ರಾಮದೇವ್‌ ಅವರು ಪ್ರವರ್ತಕರಾಗಿರುವ ಪತಂಜಲಿ ಸಂಸ್ಥೆ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ಹೂಡಿದ್ದ ಮೊಕದ್ದಮೆಯ ವಿಚಾರಣೆ ವೇಳೆಯೇ ಸುಪ್ರೀಂ ಕೋರ್ಟ್‌ ಐಎಂಎಗೆ ಬುದ್ಧಿವಾದ ಹೇಳಿದೆ.

ಅನಗತ್ಯ ಮತ್ತು ದುಬಾರಿ ಔಷಧಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಇದೇ ವೇಳೆ ತನ್ನ ವಿಚಾರಣೆಯ ವ್ಯಾಪ್ತಿಯನ್ನು ಫಾಸ್ಟ್‌ ಮೂವಿಂಗ್‌ ಕನ್ಸ್ಯೂಮರ್‌ ಗೂಡ್ಸ್‌ (ಎಫ್‌ಎಂಸಿಜಿ) ಸಂಸ್ಥೆಗಳಿಗೂ ಅನ್ವಯಿಸುವುದಾಗಿ ತಿಳಿಸಿದೆ.

ಮಾಂತ್ರಿಕ ಪರಿಹಾರ (ಆಕ್ಷೇಪಾರ್ಹ ಜಾಹೀರಾತು) ಕಾಯಿದೆ ಜಾರಿಗೆ ಸಂಬಂಧಿಸಿದ ಸಮಸ್ಯೆಗಳ ಕೂಲಂಕಷ ಪರಿಶೀಲನೆಯ ಅಗತ್ಯವಿದೆ ಎಂದ ನ್ಯಾಯಾಲಯ ಫಾಸ್ಟ್‌ ಮೂವಿಂಗ್‌ ಕನ್ಸ್ಯೂಮರ್‌ ಗೂಡ್ಸ್‌ (ಎಫ್‌ಎಂಸಿಜಿ) ಸಂಸ್ಥೆಗಳು ಅನೇಕ ಬಾರಿ ಮೋಸಗೊಳಿಸುವ ಮತ್ತು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ನೀಡುತ್ತಿರುವುದು ಕಂಡುಬರುತ್ತಿರುವುದರಿಂದ ವಿಚಾರಣೆಯ ವ್ಯಾಪ್ತಿಯನ್ನು ಪ್ರತಿವಾದಿಗಳನ್ನು ಮೀರಿ ವಿಸ್ತರಿಸುವುದಾಗಿ ನ್ಯಾಯಾಲಯ ತಿಳಿಸಿದೆ.

ಹಾದಿ ತಪ್ಪಿಸುವ ಜಾಹೀರಾತುಗಳು ಶಿಶುಗಳು, ಮಕ್ಕಳು ಹಾಗೂ ವೃದ್ಧರ ಆರೋಗ್ಯದ ಮೇಲೆ ಪರಿಣಾಮ ಬೀರಲಿದ್ದು ಈ ಸಂಬಂಧ ಗ್ರಾಹಕ ವ್ಯವಹಾರಗಳ ಸಚಿವಾಲಯ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವನ್ನು ಪಕ್ಷಕಾರರನ್ನಾಗಿ ಮಾಡಿಕೊಳ್ಳುವ ಅಗತ್ಯವಿದೆ ಎಂದು ನುಡಿದಿದೆ.