Baba Ramdev, Patanjali and Supreme Court  
ಸುದ್ದಿಗಳು

ಪತಂಜಲಿ ಪ್ರಕರಣ: ಬಾಬಾ ರಾಮದೇವ್ ಬಳಿಕ ಸುಪ್ರೀಂ ಕೋರ್ಟ್ ಎದುರು ಉತ್ತರಾಖಂಡ ಪರವಾನಗಿ ಪ್ರಾಧಿಕಾರದ ಕ್ಷಮೆಯಾಚನೆ

Bar & Bench

ಆಧುನಿಕ ವೈದ್ಯ ಪದ್ಧತಿ ವಿರೋಧಿಸಿ, ದಾರಿ ತಪ್ಪಿಸುವ ಜಾಹೀರಾತು ನೀಡಿದ್ದ ಪತಂಜಲಿ ಆಯುರ್ವೇದ ಸಂಸ್ಥೆ ವಿರುದ್ಧ ತಾನು ಕೈಗೊಂಡ ಕ್ರಮ ತೃಪ್ತಿಕರವಾಗಿ ಇಲ್ಲದಿದ್ದ ಕಾರಣಕ್ಕೆ ಉತ್ತರಾಖಂಡ ರಾಜ್ಯ ಪರವಾನಗಿ ಪ್ರಾಧಿಕಾರ ಸುಪ್ರೀಂ ಕೋರ್ಟ್‌ ಕ್ಷಮೆ ಕೋರಿದೆ (ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮತ್ತಿತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ).

ಔಷಧ ಮತ್ತು ಮಾಂತ್ರಿಕ ಪರಿಹಾರ ಪ್ರಶ್ನಾರ್ಹ ಜಾಹೀರಾತು ಕಾಯಿದೆ ಉಲ್ಲಂಘಿಸಿದ್ದಕ್ಕಾಗಿ ಪತಂಜಲಿ ಆಯುರ್ವೇದ್ ಮತ್ತು ಅದರ ಸಂಸ್ಥಾಪಕರಾದ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಲಾಗಿದೆ ಎಂದು ಅದು ಶನಿವಾರ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದೆ. ವಕೀಲ ವಂಶಜಾ ಶುಕ್ಲಾ ಅವರ ಮೂಲಕ ಅಫಿಡವಿಟ್‌ ಸಲ್ಲಿಸಲಾಗಿದೆ.

ಪರವಾನಗಿ ಅಧಿಕಾರಿಯು ಸಲ್ಲಿಸಿರುವ ಅಫಿಡವಿಟ್‌ನ ಪ್ರಮುಖಾಂಶಗಳು

  • ಪರಿಸ್ಥಿತಿಯ ಮಹತ್ವ ಮತ್ತು ವಿಚಾರದ ಗಂಭೀರತೆ ಬಗ್ಗೆ ರಾಜ್ಯ ಪರವಾನಗಿ ಪ್ರಾಧಿಕಾರಿಗೆ ಸಂಪೂರ್ಣ ತಿಳಿದಿದ್ದು ಸದಾ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಅತ್ಯುತ್ತಮವಾಗಿ, ಕಾನೂನುನ ಪ್ರಕಾರ  ಕರ್ತವ್ಯ ನಿರ್ವಹಿಸಿದ್ದಾರೆ.

  • ಪತಂಜಲಿ ಆಯುರ್ವೇದ್ ಲಿಮಿಟೆಡ್ ವಿರುದ್ಧ ಎಲ್ಲಾ ಕ್ರಮ  ತೆಗೆದುಕೊಳ್ಳುವುದನ್ನು ಮುಂದುವರೆಸಲಾಗುತ್ತದೆ.

  •  ಯಾವುದೇ ಅಚಾತುರ್ಯ ಮತ್ತು ಉದ್ದೇಶಪೂರ್ವಕವಾಗಿ ಆದೇಶ ಪಾಲಿಸದೆ ಹೋಗಿದ್ದರೆ ಅದಕ್ಕಾಗಿ ಬೇಷರತ್‌ ಕ್ಷಮೆ ಯಾಚಿಸುವೆ.

  • ನ್ಯಾಯಾಲಯ ಅಥವಾ ಅದರ ಘನತೆಯನ್ನು ದುರ್ಬಲಗೊಳಿಸುವಂತಹ ಯಾವುದೇ ಉದ್ದೇಶ ಪೂರ್ವಕ ಚಟುವಟಿಕೆಯಲ್ಲಿ ತೊಡಗುವುದಿಲ್ಲ.

  •  ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ನಿಯಮಾವಳಿ 159(1)ರ ಅಡಿಯಲ್ಲಿ ಪತಂಜಲಿಯ 14 ಉತ್ಪನ್ನಗಳ ಉತ್ಪಾದನಾ ಪರವಾನಗಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ  

  • ಏಪ್ರಿಲ್ 24 ರಂದು ಪತಂಜಲಿ ಆಯುರ್ವೇದ್‌ ವಿರುದ್ಧ ತೆಗೆದುಕೊಂಡ ಕ್ರಮದ ಬಗ್ಗೆ ಕೇಂದ್ರ ಆಯುಷ್ ಸಚಿವಾಲಯಕ್ಕೆ ತಿಳಿಸಲಾಗಿದೆ.

ಕೋವಿಡ್‌ ಲಸಿಕೆ ಮತ್ತು ಆಧುನಿಕ ಔಷಧದ ವಿರುದ್ಧ ಅವಹೇಳನಕಾರಿ ಅಭಿಯಾನ ನಡೆಸಲಾಗುತ್ತಿದೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ಅಫಿಡವಿಟ್‌ ಸಲ್ಲಿಸಲಾಗಿದೆ.

ಪತಂಜಲಿ ಆಯುರ್ವೇದ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾದ ತಪ್ಪಿತಸ್ಥ ಪರವಾನಗಿ ಅಧಿಕಾರಿಗಳು ಸಂಸ್ಥೆಯೊಂದಿಗೆ ಶಾಮೀಲಾಗಿದ್ದಾರೆ  ಎಂದು ಉತ್ತರಾಖಂಡ ಸರ್ಕಾರ ಮತ್ತು ಪರವಾನಗಿ ಸಂಸ್ಥೆಯನ್ನು ಸುಪ್ರೀಂ ಕೋರ್ಟ್ ಈ ಹಿಂದೆ ತರಾಟೆಗೆ ತೆಗೆದುಕೊಂಡಿತ್ತು.