Marriage 
ಸುದ್ದಿಗಳು

ಗನ್‌ ತೋರಿಸಿ ಬೆದರಿಸಿ ಮದುವೆ ಮಾಡಲಾಗಿದೆ, ಸಪ್ತಪದಿ ತುಳಿದಿಲ್ಲ ಎಂದು ವಿವಾಹ ರದ್ದುಪಡಿಸಿದ ಪಟ್ನಾ ಹೈಕೋರ್ಟ್‌

ಸಾಂಪ್ರದಾಯಿಕ ಹಿಂದೂ ವಿವಾಹವು ಸಪ್ತಪದಿ ಮತ್ತು ದತ್ತ ಹೋಮ ನಡೆಸದೇ ಸಿಂಧುವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

Bar & Bench

ಮದುಮಗನಿಗೆ ಪಿಸ್ತೂಲಿನಿಂದ ಬೆದರಿಕೆಯೊಡ್ಡಿ ಬಲವಂತವಾಗಿ ಮದುವೆ ಮಾಡಿದ್ದು, ಹಿಂದೂ ವಿವಾಹ ಕಾಯಿದೆ 1955ರ ಅಡಿಯಂತೆ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿಯಲಾಗಿಲ್ಲ ಎಂದು ಪಟ್ನಾ ಹೈಕೋರ್ಟ್‌ ಇತ್ತೀಚೆಗೆ ಮದುವೆಯೊಂದನ್ನು ರದ್ದುಪಡಿಸಿದೆ.

ಮದು ಮಕ್ಕಳು ಸಪ್ತಪದಿ ತುಳಿಯದೇ ಹಿಂದೂ ವಿವಾಹ ಪೂರ್ಣಗೊಳ್ಳುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಪಿ ಬಿ ಭಜಂತ್ರಿ ಮತ್ತು ಅರುಣ್‌ ಕುಮಾರ್‌ ಝಾ ಅವರ ನೇತೃತ್ವದ ವಿಭಾಗೀಯ ಹೇಳಿದೆ.

“ಹಿಂದೂ ವಿವಾಹ ಕಾಯಿದೆ ನಿಬಂಧನೆಯ ಪ್ರಕಾರ ಸಪ್ತಪದಿ ಸೇರಿದಂತೆ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ನಡೆಸದಿದ್ದರೆ ಮದುವೆ ಪೂರ್ಣಗೊಳ್ಳುವುದಿಲ್ಲ. ಏಳು ಹೆಜ್ಜೆಗಳನ್ನು ಇರಿಸದಿದ್ದರೆ ಮದುವೆ ಪೂರ್ಣವಾಗದು. ಸಪ್ತಪದಿ ಪೂರ್ಣಗೊಳ್ಳದಿದ್ದರೆ ಮದುವೆ ಪೂರ್ಣಗೊಂಡಿದೆ ಎನ್ನಲಾಗದು” ಎಂದು ಪೀಠ ಹೇಳಿದೆ.

ಸಪ್ತಪದಿ ಮತ್ತು ದತ್ತ ಹೋಮ (ಪವಿತ್ರ ಅಗ್ನಿಗೆ ತುಪ್ಪ ಹಾಕುವುದು) ನಡೆಯದೇ ಸಾಂಪ್ರದಾಯಿಕ ಹಿಂದೂ ವಿವಾಹ ಪೂರ್ಣಗೊಳ್ಳುವುದಿಲ್ಲ ಎಂದು 2001ರಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಹೈಕೋರ್ಟ್‌ ಆಧರಿಸಿದೆ.

ಸೇನೆಯಲ್ಲಿ ಸಿಗ್ನಲ್‌ಮ್ಯಾನ್‌ ಆಗಿದ್ದ ಅರ್ಜಿದಾರರರ ತನ್ನನ್ನು ಮದುವೆಯಾಗುವಂತೆ ಬಲವಂತ ಮಾಡಲಾಗಿದೆ. ತನ್ನ ಚಿಕ್ಕಪ್ಪನನ್ನು ಅಹರಿಸುವ ಮೂಲಕ ತನ್ನ ಮೇಲೆ ಒತ್ತಡ ಹೇರಿ ಗನ್‌ ತೋರಿಸಿ ಬೆದರಿಸಿ ಮದುವೆ ಮಾಡಿಸಲಾಗಿದೆ ಎಂದು ಆರೋಪಿಸಿದ್ದರು.

ಅದೇ ದಿನ ಮದುಮಗಳ ಹಣೆಗೆ ಸಿಂಧೂರ ಹಾಕಿ ಹಸಮಣೆ ಹೇರುವಂತೆ ಮಾಡಲಾಗಿತ್ತು. ಆದರೆ, ಇತರೆ ಯಾವುದೇ ಸಾಂಪ್ರದಾಯಿಕ ಆಚರಣೆ ನಡೆಸಿರಲಾಗಿಲ್ಲ ಎಂದು ಅರ್ಜಿದಾರರು ಹೇಳಿದ್ದರು.

ಅರ್ಜಿದಾರರ ಚಿಕ್ಕಪ್ಪ ಪೊಲೀಸರಿಗೆ ದೂರು ನೀಡಲು ಸಾಕಷ್ಟು ಪ್ರಯತ್ನಿಸಿದ್ದರು. ಆದರೆ, ಸಮಸ್ಯೆಯನ್ನು ಪರಿಹರಿಸಲು ಪೊಲೀಸರು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಬಿಹಾರದ ಲಾಖಿಸರಾಯ್‌ ಮ್ಯಾಜಿಸ್ಟ್ರೇಟ್‌ ಮುಂದೆ ಕ್ರಿಮಿನಲ್‌ ದೂರು ದಾಖಲಿಸಿದ್ದರು.

ಕ್ರಿಮಿನಲ್‌ ದೂರು ದಾಖಲಿಸುವುದರೊಂದಿಗೆ ಮದುವೆ ಅಸಿಂಧುಗೊಳಿಸುವಂತೆ ಅರ್ಜಿದಾರರು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, 2020ರ ಜನವರಿ 27ರಂದು ಅವರ ಅರ್ಜಿಯನ್ನು ವಜಾ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.