ನಿವೃತ್ತ ನ್ಯಾಯಾಂಗ ಅಧಿಕಾರಿಯಾದ ತನ್ನ ಮೃತ ಪತಿ ಪರವಾಗಿ ಕುಟುಂಬ ಪಿಂಚಣಿ ನೀಡುವಂತೆ ಕೋರಿ 96 ವರ್ಷದ ವಿಧವೆ ಸಲ್ಲಿಸಿದ್ದ ಅರ್ಜಿಯನ್ನು ಪಾಟ್ನಾ ಹೈಕೋರ್ಟ್ ಇತ್ತೀಚೆಗೆ ತಿರಸ್ಕರಿಸಿದೆ [ರುದ್ರ ಮಾಯಾ ಸಿನ್ಹಾ ವಿರುದ್ಧ ರಿಜಿಸ್ಟ್ರಾರ್ ಜನರಲ್ ಮತ್ತು ಒಆರ್ಎಸ್].
ಪಿಂಚಣಿಗಾಗಿ ಅರ್ಜಿ ಸಲ್ಲಿಸಲು 30 ವರ್ಷಗಳಿಗಿಂತ ಹೆಚ್ಚು ವಿಳಂಬವಾದ ಕಾರಣ ಮತ್ತು ಆಕೆಯ ವೈವಾಹಿಕ ಸ್ಥಿತಿ ಮತ್ತು ಪತಿಯ ಸೇವಾ ಇತಿಹಾಸವನ್ನು ಸಾಬೀತುಪಡಿಸಲು ಅಗತ್ಯ ಪೂರಕ ಪುರಾವೆಗಳಿಲ್ಲದಿದ್ದರಿಂದ ಅರ್ಜಿ ವಜಾ ಮಾಡಲಾಗಿದೆ.
ಮುಖ್ಯ ನ್ಯಾಯಮೂರ್ತಿ ಕೆ.ವಿನೋದ್ ಚಂದ್ರನ್ ಮತ್ತು ನ್ಯಾಯಮೂರ್ತಿ ರಾಜೀವ್ ರಾಯ್ ಅವರ ಪೀಠವು, "ಅರ್ಜಿದಾರರ ಪ್ರಕಾರ, ಆಕೆಯ ಪತಿ ಮೊದಲು ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದರು, ಆ ಮದುವೆಯಿಂದ ಅವರಿಗೆ ಇಬ್ಬರು ಮಕ್ಕಳಿದ್ದರು. ಮೊದಲ ಹೆಂಡತಿ ತೀರಿಕೊಂಡಿದ್ದಾರೆಂದು ಹೇಳಲಾಗಿದ್ದರೂ ಮರಣದ ದಿನಾಂಕ ಅಥವಾ ಮರಣ ಪ್ರಮಾಣಪತ್ರ ಹಾಜರುಪಡಿಸಿಲ್ಲ. ಮೃತ ಉದ್ಯೋಗಿಯೊಂದಿಗೆ ಅರ್ಜಿದಾರರ ವಿವಾಹವೂ ದೃಢಪಟ್ಟಿಲ್ಲ" ಎಂದು ಹೇಳಿತು.
ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಆಗಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿದ ದಿವಂಗತ ರಾಮ್ ಕಿಶೋರ್ ಪ್ರಸಾದ್ ಸಿನ್ಹಾ ಅವರ ಪತ್ನಿ ತಾನಾಗಿದ್ದು ಪತಿಯ ಸೇವಾವಧಿಯನ್ನು ಅವರ ನಿವೃತ್ತಿಯ ನಂತರ ವಿಸ್ತರಣೆ ಮಾಡಲಾಗಿತ್ತು. ಅಂತಿಮವಾಗಿ ಅವರು ಮೇ 1963ರಲ್ಲಿ ನಿವೃತ್ತರಾದರು. ಪಿಂಚಣಿ ಪಡೆಯುತ್ತಿರುವಾಗಲೇ ಸಿನ್ಹಾ ಜೂನ್ 20, 1989ರಂದು ನಿಧನರಾದರು ಎಂದು ಅರ್ಜಿದಾರೆ ತಿಳಿಸಿದ್ದರು.
ಪತಿಯ ಮರಣದ ಬಹಳ ಸಮಯದ ನಂತರ ವಿತರಿಸಲಾದ ಪಾಸ್‌ಪೋರ್ಟ್ ಮತ್ತು ಆಧಾರ್ ಕಾರ್ಡ್ ಮೇಲೆ ಅರ್ಜಿದಾರರು ತಮ್ಮ ವಾದ ಅವಲಂಬಿಸಿರುವುದು ಅಪ್ರಸ್ತುತ. ಈ ದಾಖಲೆಗಳು ನ್ಯಾಯಾಂಗ ಕ್ಷೇತ್ರದಲ್ಲಿ ಅರ್ಜಿದಾರರ ಪತಿಯ ಸೇವೆಯನ್ನು ಸಾಬೀತುಪಡಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿತು.
ಪಿಂಚಣಿ ಪಡೆಯಬೇಕಿದ್ದ ಮೂವತ್ತು ವರ್ಷಗಳ ನಂತರ ಅದಕ್ಕಾಗಿ ಅರ್ಜಿ ಸಲ್ಲಿಸಿದ್ದು, ಇದು ಅತೀವ ವಿಳಂಬವಾಗಿದೆ ಎಂದ ನ್ಯಾಯಾಲಯ ಮನವಿಯನ್ನು ತಿರಸ್ಕರಿಸಿತು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]