PC George
PC George Facebook
ಸುದ್ದಿಗಳು

ದ್ವೇಷ ಭಾಷಣ: ಪಿ ಸಿ ಜಾರ್ಜ್‌ಗೆ ಜಾಮೀನು ಮಂಜೂರು ಮಾಡಿದ ಕೇರಳ ಹೈಕೋರ್ಟ್‌

Bar & Bench

ಮುಸ್ಲಿಮ್‌ ಸಮುದಾಯವನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣ ಮಾಡಿದ ಹಿನ್ನೆಲೆಯಲ್ಲಿ ದಾಖಲಾಗಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾಜಿ ಶಾಸಕ ಪಿ ಸಿ ಜಾರ್ಜ್‌ ಅವರಿಗೆ ಕೇರಳ ಹೈಕೋರ್ಟ್‌ ಶುಕ್ರವಾರ ಜಾಮೀನು ಮಂಜೂರು ಮಾಡಿದೆ (ಪಿ ಸಿ ಜಾರ್ಜ್‌ ವರ್ಸಸ್‌ ಕೇರಳ ರಾಜ್ಯ).

ಜಾರ್ಜ್‌ ಅವರಿಗೆ ಒಂದು ಪ್ರಕರಣದಲ್ಲಿ ಜಾಮೀನು ಮತ್ತೊಂದು ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನನ್ನು ನ್ಯಾಯಮೂರ್ತಿ ಗೋಪಿನಾಥ್‌ ಪಿ ನೇತೃತ್ವದ ಏಕಸದಸ್ಯ ಪೀಠವು ಮಂಜೂರು ಮಾಡಿದೆ.

ಷರತ್ತುಬದ್ಧ ಜಾಮೀನು ನೀಡಿದ ನ್ಯಾಯಾಲಯವು “ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 153ಎ ಅಥವಾ 295ಎ ಅಡಿ ಅಪರಾಧವಾಗುವ ರೀತಿಯಲ್ಲಿ ಅರ್ಜಿದಾರರು ಯಾವುದೇ ಭಾಷಣ ಅಥವಾ ಹೇಳಿಕೆಯನ್ನು ನೀಡಬಾರದು. ಷರತ್ತುಗಳನ್ನು ಉಲ್ಲಂಘಿಸಿದರೆ ಅವರ ಜಾಮೀನು ವಜಾ ಮಾಡುವಂತೆ ಪ್ರಾಸಿಕ್ಯೂಷನ್‌ ಮನವಿ ಸಲ್ಲಿಸಬಹುದು” ಎಂದು ನಿರ್ದೇಶಿಸಿತು.

ಏಪ್ರಿಲ್‌ 29ರಂದು ಅನಂತಪುರಿ ಹಿಂದೂ ಮಹಾ ಸಮ್ಮೇಳನದಲ್ಲಿ ದ್ವೇಷ ಭಾಷಣ ಮಾಡಿದ್ದಕ್ಕಾಗಿ ಜಾರ್ಜ್‌ ಅವರನ್ನು ಮೇ 1ರಂದು ಪೊಲೀಸರು ಬಂಧಿಸಿದ್ದರು. ಆ ಪ್ರಕರಣದಲ್ಲಿ ಜಾರ್ಜ್‌ ಅವರಿಗೆ ತಿರುವನಂತಪುರಂ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿತ್ತು. ಮೇ 8ರಂದು ವೆನ್ನಾಲದಲ್ಲಿ ಕೋಮು ಭಾವನೆ ಪ್ರಚೋದಿತ ಭಾಷಣ ಮಾಡಿದ್ದಕ್ಕಾಗಿ ಕೊಚ್ಚಿಯ ಪಲರಿವಟ್ಟೋಮ್‌ ಪೊಲೀಸರು ಮೇ 10ರಂದು ಸ್ವಯಂಪ್ರೇರಿತವಾಗಿ ಜಾರ್ಜ್‌ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಜ್‌ ಕೋರಿದ್ದ ನಿರೀಕ್ಷಣಾ ಜಾಮೀನು ಸ್ಥಳೀಯ ನ್ಯಾಯಾಲಯದಲ್ಲಿ ತಿರಸ್ಕರಿಸಲ್ಪಟ್ಟಿತ್ತು. ಹೈಕೋರ್ಟ್ ಮೆಟ್ಟಿಲೇರಿದ್ದ ಜಾರ್ಜ್‌ ಮಧ್ಯಂತರ ಜಾಮೀನು ಪಡೆಯಲು ಯಶಸ್ವಿಯಾಗಿದ್ದರು.

ಆದರೆ, ಮೊದಲನೆಯ ಪ್ರಕರಣದಲ್ಲಿನ ಜಾಮೀನು ಷರತ್ತು ಉಲ್ಲಂಘಿಸಿ ದ್ವೇಷ ಭಾಷಣ ಮಾಡಿದ್ದ ಕಾರಣ ಅವರಿಗೆ ಮೊದಲನೆಯ ಪ್ರಕರಣದಲ್ಲಿ ನೀಡಲಾಗಿದ್ದ ಜಾಮೀನನ್ನು ತಿರುವನಂತಪುರಂ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ರದ್ದುಪಡಿಸಿತು. ಜಾರ್ಜ್‌ ಅವರನ್ನು ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು. ಇದರಿಂದಾಗಿ ಜಾರ್ಜ್‌ ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.