Pegasus Spyware, Supreme Court 
ಸುದ್ದಿಗಳು

ಪೆಗಸಸ್‌: 29 ಮೊಬೈಲ್‌ ಉಪಕರಣಗಳನ್ನು ಪರಿಶೀಲಿಸುತ್ತಿರುವ ತಜ್ಞರ ಸಮಿತಿ; ವರದಿ ಸಲ್ಲಿಕೆ ಗಡುವು ವಿಸ್ತರಿಸಿದ ಸುಪ್ರೀಂ

ಪೆಗಸಸ್‌ ಹಗರಣದ ಕುರಿತಾದ ತನಿಖೆಯನ್ನು ನಡೆಸಲು ಮೂವರು ಸದಸ್ಯರ ಪರಿಣತ ಸಮಿತಿಯನ್ನು ಕಳೆದ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ ರಚಿಸಿತ್ತು.

Bar & Bench

ಪೆಗಸಸ್‌ ತಂತ್ರಾಂಶ ಬಳಸಿ ದೇಶದ ಆಯ್ದ ನಾಗರಿಕರ ವಿರುದ್ಧ ಕೇಂದ್ರ ಸರ್ಕಾರವು ಗೂಢಚಾರಿಕೆ ನಡೆಸಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಬೈಲ್‌ ಉಪಕರಣಗಳನ್ನು ಪರಿಶೀಲಿಸುತ್ತಿರುವ ಮೂವರು ತಜ್ಞರ ಸಮಿತಿಯು ತನ್ನ ಅಂತಿಮ ವರದಿಯನ್ನು ಸಲ್ಲಿಸಲು ಸುಪ್ರೀಂ ಕೋರ್ಟ್‌ ಶುಕ್ರವಾರ ಹೆಚ್ಚುವರಿ ಸಮಯ ನೀಡಿದೆ.

ಸಮಿತಿಯು ಕನಿಷ್ಠ 29 ಮೊಬೈಲ್‌ ಉಪಕರಣಗಳನ್ನು ಪರಿಶೀಲಿಸುತ್ತಿದ್ದು, ಈ ಕಾರ್ಯವನ್ನು ಪೂರ್ಣಗೊಳಿಸಲು ಹೆಚ್ಚುವರಿ ಸಮಯವನ್ನು ಕೋರಿರುವುದನ್ನು ಪ್ರಕರಣದ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಮತ್ತು ನ್ಯಾ. ಹಿಮಾಕೋಹ್ಲಿ ಅವರು ಗಮನಿಸಿದರು.

“29 ಮೊಬೈಲ್‌ ಉಪಕರಣಗಳನ್ನು ಪರಿಶೀಲಿಸುತ್ತಿದ್ದು, ಆಕ್ಷೇಪಣೆ ಸಲ್ಲಿಸಲು ಆಹ್ವಾನ ನೀಡಲಾಗಿದೆ. ಮೊಬೈಲ್‌ ಉಪಕರಣಗಳನ್ನೂ ಪರಿಶೀಲನೆ ಮಾಡಲಾಗುತ್ತಿದೆ. ತಾಂತ್ರಿಕ ಸಮಿತಿಯು 29 ಉಪಕರಣಗಳನ್ನು ವಶಕ್ಕೆ ಪಡೆದಿದ್ದು, ಕೆಲವನ್ನು ಮಾತ್ರ ಪರಿಶೀಲಿಸಿದೆ. ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಅವರಿಗೆ ತಾಂತ್ರಿಕ ಸಮಿತಿಯು ವರದಿ ಸಲ್ಲಿಸಿದ ಬಳಿಕ ನ್ಯಾಯಮೂರ್ತಿಗಳೂ ತಮ್ಮ ಅಭಿಪ್ರಾಯವನ್ನು ವರದಿಗೆ ಸೇರಿಸಲಿದ್ದಾರೆ. ಹೀಗಾಗಿ, ಸಮಿತಿಗೆ ವರದಿ ಸಲ್ಲಿಸಲು ಕಾಲಾವಕಾಶ ನೀಡುವುದು ಸೂಕ್ತ ಎಂದು ನಮಗನ್ನಿಸಿದೆ. ಉಪಕರಣಗಳ ಪರಿಶೀಲನೆಯನ್ನು ತುರ್ತಾಗಿ ನಡೆಸಲು ತಾಂತ್ರಿಕ ಸಮಿತಿಗೆ ನಿರ್ದೇಶನ ನೀಡಲಾಗುತ್ತಿದೆ” ಎಂದು ಪೀಠವು ತನ್ನ ಆದೇಶದಲ್ಲಿ ವಿವರಿಸಿದೆ.

ತಾಂತ್ರಿಕ ಸಮಿತಿಯ ಪ್ರಕ್ರಿಯೆಯು ನಾಲ್ಕು ವಾರಗಳಲ್ಲಿ ಮುಗಿಯಬೇಕು. ಆ ಬಳಿಕ ಅದನ್ನು ಮೇಲ್ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಿಗೆ ತಿಳಿಸಬೇಕು ಎಂದು ಪೀಠ ಹೇಳಿದ್ದು, ವಿಚಾರಣೆಯನ್ನು ಜುಲೈಗೆ ಮುಂದೂಡಿದೆ.