CJI Ramana, Justices Surya Kant and Vineet Saran, Pegasus
CJI Ramana, Justices Surya Kant and Vineet Saran, Pegasus 
ಸುದ್ದಿಗಳು

[ಪೆಗಸಸ್] ನಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಸೂಕ್ತ ಚರ್ಚೆಯ ಮೂಲಕ ನ್ಯಾಯಾಲಯದೊಳಗೆ ನೀಡಿ, ಹೊರಗಲ್ಲ: ಸುಪ್ರೀಂ ಕೋರ್ಟ್‌

Bar & Bench

ಪೆಗಸಸ್‌ ಹಗರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಬೇಕೆ, ಬೇಡವೇ ಎನ್ನುವ ಬಗ್ಗೆ ಮುಂದಿನ ಸೋಮವಾರದ ವಿಚಾರಣೆ ವೇಳೆ ನಿರ್ಧರಿಸುವುದಾಗಿ ಸುಪ್ರೀಂ ಕೋರ್ಟ್‌ ಇಂದಿನ ವಿಚಾರಣೆ ವೇಳೆ ಹೇಳಿದೆ.

ಪ್ರಕರಣದ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ವಿನೀತ್‌ ಸರಣ್‌ ಮತ್ತು ಸೂರ್ಯ ಕಾಂತ್‌ ಅವರಿದ್ದ ಪೀಠವು ವಿವಿಧ ಅರ್ಜಿದಾರರನ್ನು ಪ್ರತಿನಿಧಿಸಿರುವ ವಕೀಲರಿಗೆ ನ್ಯಾಯಾಲಯದ ಘನತೆಗೆ ಬೆಲೆಗೊಟ್ಟು ನ್ಯಾಯಾಲಯದೊಳಗೆ ಚರ್ಚೆ ನಡೆಯುತ್ತಿರುವಾಗ ಹೊರಗೆ ಚರ್ಚಿಸದಂತೆ ತಿಳಿ ಹೇಳಿತು.

“ಪ್ರಕರಣದಲ್ಲಿ ಆಸಕ್ತಿ ಇರುವ ಹಾಗೂ ಪತ್ರಿಕೆಗಳಲ್ಲಿ ಈ ಕುರಿತು ಹೇಳುತ್ತಿರುವ ಪಕ್ಷಕಾರರಿಗೆ ನಾವು ಹೇಳುವುದೇನೆಂದರೆ, ನಮ್ಮ ಪ್ರಶ್ನೆಗಳಿಗೆ ಉತ್ತರವನ್ನು ನ್ಯಾಯಾಲಯದೊಳಗೆ ನೀಡಬೇಕೆಂದು ನಾವು ನಿರೀಕ್ಷಿಸುತ್ತೇವೆಯೋ ಹೊರತು ಹೊರಗಲ್ಲ… ನೀವು ಸಾಮಾಜಿಕ ಮಾಧ್ಯಮದಲ್ಲಿ, ಟ್ವಿಟರ್‌ನಲ್ಲಿ ಏನನ್ನಾದರೂ ಹೇಳಲು ಬಯಸಿದರೆ ಅದು ನಿಮ್ಮ ನಿರ್ಧಾರ. ಆದರೆ, ಇಲ್ಲಿ ಚರ್ಚೆಯ ನಡೆಯುತ್ತಿದೆ ಎಂದರೆ, ಇಲ್ಲಿಯೇ ಉತ್ತರಿಸಿ. ವ್ಯವಸ್ಥೆಯ ಬಗ್ಗೆ ಸ್ವಲ್ಪ ಗೌರವವಿರಿಸಿಕೊಳ್ಳಿ,” ಎಂದ ವಿಚಾರಣೆಯ ಸಂದರ್ಭದಲ್ಲಿ ಸಿಜೆಐ ಎನ್‌ ವಿ ರಮಣ ಅವರು ಪಕ್ಷಕಾರು ಹಾಗೂ ಅವರನ್ನು ಪ್ರತಿನಿದಿಸುತ್ತಿರುವ ವಕೀಲರಿಗೆ ಹೇಳಿದರು.

ಈ ಬಗ್ಗೆ ಸಮ್ಮತಿ ವ್ಯಕ್ತಪಡಿಸಿದ ಪಕ್ಷಕಾರರೊಬ್ಬರ ಪರವಾಗಿ ವಾದಿಸುತ್ತಿರುವ ಹಿರಿಯ ವಕೀಲ ಕಪಿಲ್‌ ಸಿಬಲ್ ಅವರು, “ಪ್ರಕರಣವು ಇಲ್ಲಿ ನಡೆಯುತ್ತಿರುವಾಗ ಹೊರಗೆ ಚರ್ಚೆ ಮಾಡಬಾರದು. ಇದಕ್ಕೆ ನಾನು ಸಮ್ಮತಿಸುತ್ತೇನೆ” ಎಂದರು.

ಪೆಗಸಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿರುವ, ವಿಶೇಷ ತನಿಖಾ ದಳದಿಂದ ವಿಚಾರಣೆ ನಡೆಸಬೇಕು ಎಂದು ಕೋರಿರುವ, ಪೆಗಸಸ್‌ ಬೇಹು ತಂತ್ರಾಂಶವನ್ನು ನಾಗರಿಕರ ಮೇಲೆ ಬಳಸಲಾಗಿದ್ದರೆ ಅದರ ಮಾಹಿತಿಯನ್ನು ಬಹಿರಂಗಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಮನವಿ ಮಾಡಿರುವ ವಿವಿಧ ಪ್ರತ್ಯೇಕ ಅರ್ಜಿಗಳ ಒಟ್ಟು ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ನಡೆಸಿತು.

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಅವರು ಪ್ರಕರಣಗಳ ಸಂಬಂಧ ಪ್ರತಿಕ್ರಿಯಿಸಲು ತಮಗೆ ಕಾಲಾವಕಾಶ ಬೇಕೆಂದು ಕೋರಿದರು. ಇದೇ ಶುಕ್ರವಾರದೊಳಗೆ ಪ್ರಕರಣವನ್ನು ಮತ್ತೆ ವಿಚಾರಣೆಗೆ ತೆಗೆದುಕೊಳ್ಳುವಂತೆ ಪೀಠಕ್ಕೆ ಮನವಿ ಮಾಡಿದರು. ಆದರೆ, ವೈಯಕ್ತಿಕ ಕಾರಣಗಳಿಂದಾಗಿ ತಾವು ಅಂದು ಪ್ರಕರಣವನ್ನು ಆಲಿಸಲು ಸಾಧ್ಯವಾಗದು ಎಂದು ಸಿಜೆಐ ರಮಣ ಹೇಳಿದರು.

ಪ್ರಕರಣದ ಸಂಬಂಧ ನೋಟಿಸ್‌ ಜಾರಿಗೊಳಿಸುವಂತೆ ಮತ್ತೊಬ್ಬ ಅರ್ಜಿದಾರರನ್ನು ಪ್ರತಿನಿದಿಸಿರುವ ಹಿರಿಯ ವಕೀಲ ಸಿ ಯು ಸಿಂಗ್ ಅವರು ಪೀಠವನ್ನು ಕೋರಿದರು. ಈ ಬಗ್ಗೆ ತಾನು ಸೋಮವಾರ ನಿರ್ಧರಿಸುವುದಾಗಿ ಸಿಜೆಐ ಅವರು ತಿಳಿಸಿದರು.

ಪ್ರಕರಣದ ವಿಚಾರಣೆಯನ್ನು ಆಗಸ್ಟ್‌ 16ಕ್ಕೆ ಮುಂದೂಡಲಾಗಿದೆ. ‌