Supreme Court, Pegasus snoopgate 
ಸುದ್ದಿಗಳು

ಪೆಗಸಸ್: ತಜ್ಞರ ಸಮಿತಿಯಿಂದ ತನಿಖೆ ನಡೆಸಲು ಚಿಂತನೆ, ಮುಂದಿನ ವಾರ ಆದೇಶ ನೀಡುವುದಾಗಿ ತಿಳಿಸಿದ ಸಿಜೆಐ ಎನ್ ವಿ ರಮಣ

ಕೆಲವು ತಜ್ಞರು ವೈಯಕ್ತಿಕ ಕಾರಣಗಳಿಂದ ಸಮಿತಿಯ ಭಾಗವಾಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂಬುದಾಗಿ ಕೂಡ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮಾಹಿತಿ ನೀಡಿದರು.

Bar & Bench

ಪೆಗಸಸ್‌ ಗೂಢಚರ್ಯೆ ಹಗರಣದ ತನಿಖೆಗಾಗಿ ತಜ್ಞ ಸಮಿತಿ ರಚಿಸಲು ಸುಪ್ರೀಂ ಕೋರ್ಟ್ ಮುಂದಾಗಿದೆ ಎಂದು ಸಿಜೆಐ ಎನ್‌ ವಿ ರಮಣ ಗುರುವಾರ ಮುಕ್ತ ನ್ಯಾಯಾಲಯದಲ್ಲಿ ತಿಳಿಸಿದ್ದಾರೆ.

ಇದೇ ವೇಳೆ ಕೆಲವು ತಜ್ಞರು ವೈಯಕ್ತಿಕ ಕಾರಣಗಳಿಂದ ಸಮಿತಿಯ ಭಾಗವಾಗಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ. ಇದರಿಂದಾಗಿ ನ್ಯಾಯಾಲಯ ತನ್ನ ಆದೇಶ ನೀಡಲು ವಿಳಂಬವಾಗುತ್ತಿದೆ ಎಂಬುದಾಗಿ ಅವರು ಮಾಹಿತಿ ನೀಡಿದರು. ಆದರೆ ಮುಂದಿನ ವಾರ ಆದೇಶ ನೀಡುವ ಸಾಧ್ಯತೆ ಇದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 13 ರಂದು ತನ್ನ ಮಧ್ಯಂತರ ಆದೇಶವನ್ನು ಕಾಯ್ದಿರಿಸಿತ್ತು.

ಇಸ್ರೇಲ್‌ ಮೂಲದ ಬೇಹು ತಂತ್ರಾಂಶ ಸಂಸ್ಥೆ ಎನ್‌ಎಸ್‌ಒ ತನ್ನ ಪೆಗಸಸ್‌ ಸ್ಪೈವೇರ್‌ಗೆ ಹೆಸರುವಾಸಿಯಾಗಿದ್ದು ಪರಿಶೀಲಿಸಿದ ಸರ್ಕಾರಗಳಿಗೆ ಮಾತ್ರ ಇದನ್ನು ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿತ್ತು. ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡುವುದಿಲ್ಲ ಎಂದು ಹೇಳಿಕೊಂಡಿತ್ತು. ಆದರೂ ಇದು ಯಾವ ಸರ್ಕಾರಗಳಿಗೆ ತನ್ನ ವಿವಾದಿತ ಉತ್ಪನ್ನವನ್ನು ಮಾರಾಟ ಮಾಡಿದೆ ಎಂಬುದನ್ನು ಬಹಿರಂಗಪಡಿಸಿಲ್ಲ.

ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ವಕೀಲರು, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಸಾಂವಿಧಾನಿಕ ಹುದ್ದೆಗಳಲ್ಲಿರುವವರ ಮೇಲೆ ನಿಗಾ ಇಡಲು ಭಾರತ ಸರ್ಕಾರ ಸೇರಿದಂತೆ ಜಗತ್ತಿನಾದ್ಯಂತ ವಿವಿಧ ಸರ್ಕಾರಗಳು ಪೆಗಸಸ್‌ ಸಾಫ್ಟ್‌ವೇರ್‌ ನೆರವು ಪಡೆದಿವೆ ಎಂದು ಭಾರತದ ʼದಿ ವೈರ್‌ʼ ಸೇರಿದಂತೆ ವಿಶ್ವದ ಹದಿನಾರು ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳ ಒಕ್ಕೂಟ ತನಿಖಾ ವರದಿ ಪ್ರಕಟಿಸಿವೆ.

ಆಯ್ದ ಮೊಬೈಲ್‌ ಸಂಖ್ಯೆಗಳ ಮೇಲೆ ನಿರ್ದಿಷ್ಟವಾಗಿ ಗುರಿ ಇರಿಸಲಾಗಿತ್ತು. ಕೆಲವು ನಂಬರ್‌ಗಳಿಗೆ ಪೆಗಸಸ್‌ ದಾಳಿ ಇಟ್ಟಿದ್ದು, ಮತ್ತೆ ಕೆಲವು ನಂಬರ್‌ಗಳ ಮೇಲೆ ದಾಳಿ ಯತ್ನ ನಡೆದಿದೆ ಎಂದು ಅದರ ವಿಶ್ಲೇಷಣೆ ನಡೆಸಿದ್ದ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ತಂಡ ಹೇಳಿತ್ತು.

ಆರೋಪಗಳ ಕುರಿತು ತನಿಖೆ ನಡೆಸುವಂತೆ ಕೋರಿ ಹಲವು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ. ವಿವಾದಕ್ಕೆ ಸಂಬಂಧಿಸಿದ ವಿವರಗಳನ್ನು ತಜ್ಞರ ಸಮಿತಿಗೆ ನೀಡಲು ತಾನು ಸಿದ್ಧ. ಆದರೆ ರಾಷ್ಟ್ರೀಯ ಭದ್ರತೆ ಕಾರಣಕ್ಕಾಗಿ ಈ ಮಾಹಿತಿಯನ್ನು ನ್ಯಾಯಾಲಯದಲ್ಲಿ ಬಹಿರಂಗಪಡಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದ ಬಳಿಕ ಆಗಸ್ಟ್ 17 ರಂದು, ನ್ಯಾಯಾಲಯ ಕೇಂದ್ರಕ್ಕೆ ನೋಟಿಸ್‌ ನೀಡಿತ್ತು. ಆದರೆ ಹಾಗೆ ಮಾಡುವಾಗ ನ್ಯಾಯಾಲಯದ ಮುಂದೆ ಸಲ್ಲಿಸಲಾದ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ವಿವರವಾದ ಅಫಿಡವಿಟ್ ಅನ್ನು ಏಕೆ ಸಲ್ಲಿಸಲಾಗುವುದಿಲ್ಲ ಎಂದು ಅದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು. ನ್ಯಾಯಾಲಯವು ಅಂತಿಮವಾಗಿ ತನ್ನ ಆದೇಶವನ್ನು ಕಾಯ್ದಿರಿಸಿದ್ದು, ಕೇಂದ್ರದ ಪ್ರಮಾಣಪತ್ರವಿಲ್ಲದೆ ಆದೇಶಗಳನ್ನು ನೀಡುವುದಾಗಿ ಹೇಳಿತ್ತು.