Supreme Court, Pegasus snoopgate

 
ಸುದ್ದಿಗಳು

[ಪೆಗಸಸ್‌ ಹಗರಣ] ತಜ್ಞ ಸಮಿತಿಯಿಂದ ವರದಿ ಸಲ್ಲಿಕೆ; ಫೆ. 25ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

ಲಭ್ಯವಿರುವ ಮಾಹಿತಿಯಂತೆ ತಜ್ಞ ಸಮಿತಿಯು ಸಲ್ಲಿಸಿರುವ ವರದಿಯನ್ನು ಸಿಜೆಐ ಎನ್‌ ವಿ ರಮಣ ಅವರ ನೇತೃತ್ವದ ನ್ಯಾ. ಸೂರ್ಯಕಾಂತ್ ಹಾಗೂ ನ್ಯಾ. ಹಿಮಾ ಕೋಹ್ಲಿ ಅವರನ್ನು ಒಳಗೊಂಡ ಪೀಠವು ಫೆಬ್ರವರಿ 23, 2022ರಂದು ಸ್ವೀಕರಿಸಲಿದೆ

Bar & Bench

ಪೆಗಸಸ್‌ ಬೇಹುಗಾರಿಕೆ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ ನೇಮಿಸಿದ್ದ ಮೂವರು ಸದಸ್ಯರ ತಜ್ಞ ಸಮಿತಿಯು ತನ್ನ ಮಧ್ಯಂತರ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ [ಮನೋಹರ್‌ ಲಾಲ್‌ ಶರ್ಮಾ ವರ್ಸಸ್‌ ಭಾರತ ಸರ್ಕಾರ].

ಸುಪ್ರೀಂ ಕೋರ್ಟ್‌ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯಂತೆ ತಜ್ಞ ಸಮಿತಿಯು ಸಲ್ಲಿಸಿರುವ ವರದಿಯನ್ನು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರ ನೇತೃತ್ವದ ನ್ಯಾ. ಸೂರ್ಯಕಾಂತ್ ಹಾಗೂ ನ್ಯಾ. ಹಿಮಾ ಕೋಹ್ಲಿ ಅವರನ್ನು ಒಳಗೊಂಡ ಪೀಠವು ಫೆಬ್ರವರಿ 25, 2022ರಂದು ಪರಿಗಣಿಸಲಿದೆ. ಈ ಮುಂಚಿನ ವಿಚಾರಣಾ ಪಟ್ಟಿಯಂತೆ ಫೆ.23ರಂದು ಪ್ರಕರಣದ ವಿಚಾರಣೆಯನ್ನು ಪೀಠವು ನಡೆಸಬೇಕಿತ್ತು. ಆದರೆ, ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ತಾವು ಪಿಎಂಎಲ್‌ಎ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಬೇಕಿರುವ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಲು ಕೋರಿದ ಹಿನ್ನೆಲೆಯಲ್ಲಿ ಶುಕ್ರವಾರಕ್ಕೆ ಪೀಠವು ವಿಚಾರಣೆಯನ್ನು ಪಟ್ಟಿ ಮಾಡಿದೆ.

ಪೆಗಸಸ್‌ ಬೇಹುಗಾರಿಕಾ ಹಗರಣದ ತನಿಖೆಗಾಗಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಆರ್‌ ವಿ ರವೀಂದ್ರನ್‌ ನೇತೃತ್ವದಲ್ಲಿ ಮೂವರು ತಜ್ಞರ ಸಮಿತಿಯನ್ನು ರಚಿಸಿ ಸರ್ವೋಚ್ಚ ನ್ಯಾಯಾಲಯವು ಕಳೆದ ವರ್ಷ ಅಕ್ಟೋಬರ್ 27ರಂದು ರಚಿಸಿತ್ತು.

1976ನೇ ಶ್ರೇಣಿಯ ನಿವೃತ್ತ ಐಪಿಎಸ್‌ ಅಧಿಕಾರಿ ಅಲೋಕ್‌ ಜೋಷಿ, ಇಂಟರ್‌ನ್ಯಾಷನಲ್‌ ಆರ್ಗನೈಸೇಷನ್‌ ಆಫ್‌ ಸ್ಟಾಂಡರ್ಡೈಸೇಷನ್‌/ಇಂಟರ್‌ನ್ಯಾಷನಲ್‌ ಎಲೆಕ್ಟ್ರೊ-ಟೆಕ್ನಿಕಲ್‌ ಕಮಿಷನ್‌/ಜಾಯಿಂಟ್‌ ಟೆಕ್ನಿಕಲ್ ಉಪ ಸಮಿತಿಯ ಅಧ್ಯಕ್ಷ ಡಾ. ಸಂದೀಪ್‌ ಓಬೆರಾಯ್‌ ಸಮಿತಿಯ ಇತರೆ ಸದಸ್ಯರಾಗಿದ್ದಾರೆ

ಈ ವರ್ಷ ಜನವರಿಯಲ್ಲಿ ಸುಪ್ರೀಂ ಕೋರ್ಟ್‌ ರಚಿಸಿದ ತಜ್ಞ ಸಮಿತಿಯು ಸಾರ್ವಜನಿಕ ಅಧಿಸೂಚನೆಯೊಂದನ್ನು ಹೊರಡಿಸಿ ಯಾವುದೇ ನಾಗರಿಕರು ತಮ್ಮ ಉಪಕರಣಗಳು ಪೆಗಸಸ್‌ ಬೇಹುತಂತ್ರಾಂಶದ ದಾಳಿಗೀಡಾಗಿವೆ ಎನ್ನುವ ಗಣನೀಯ ಶಂಕೆ ಹೊಂದಿದ್ದರೆ ಅಂತಹವರು ತಮ್ಮ ಮಾಹಿತಿಯನ್ನು ನೀಡುವಂತೆ ಸೂಚಿಸಿತ್ತು.

ಈವರೆಗೆ ಪತ್ರಕರ್ತರಾದ ಎನ್‌ ರಾಮ್‌, ಸಿದ್ಧಾರ್ಥ್‌ ವರದರಾಜನ್‌ ಮತ್ತು ಪ್ರಾಂಜಯ್‌ ಗುಹಾ ತಾಕುರ್ತಾ ಸೇರಿದಂತೆ ಸುಮಾರು ಹದಿಮೂರು ಮಂದಿ ತಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬೇಹುತಂತ್ರಾಂಶ ದಾಳಿಗೆ ಒಳಗಾಗಿರಬಹುದು ಎನ್ನುವ ಶಂಕೆಯ ಹಿನ್ನೆಲೆಯಲ್ಲಿ ಸಮಿತಿಯ ಮುಂದೆ ಇರಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಅರೋಪಿಗಳಾಗಿರುವ ಏಳು ಮಂದಿಯು ತಮ್ಮ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಪೆಗಸಸ್‌ ತಜ್ಞ ತನಿಖಾ ಸಮಿತಿಗೆ ಒಪ್ಪಿಸಲು ಎನ್‌ಐಎ ವಿಶೇಷ ನ್ಯಾಯಾಲಯ ಅನುಮತಿಸಿತ್ತು.