ಸುದ್ದಿಗಳು

ಪೆಗಸಸ್ ಹಗರಣದ ತನಿಖೆ ಕೋರಿ ಸುಪ್ರೀಂಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ

Bar & Bench

ಪೆಗಸಸ್ ಬೇಹು- ತಂತ್ರಾಂಶ ಹಗರಣದ ತನಿಖೆ ನಡೆಸುವಂತೆ ಕೋರಿ ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದಾರೆ.

ವಕೀಲ ಅಭಿಮನ್ಯು ತಿವಾರಿ ಅವರ ಮೂಲಕ ಸಲ್ಲಿಸಲಾದ ಮನವಿಯಲ್ಲಿ ಕೇಂದ್ರ ಸರ್ಕಾರ ತನ್ನ ನಾಗರಿಕರ ವಿರುದ್ಧ ವಿದೇಶಿ ಮೂಲದ ಪ್ರಮಾಣೀಕೃತ ಮಿಲಿಟರಿ ದರ್ಜೆಯ ಬೇಹು- ತಂತ್ರಾಂಶ ಬಳಸಿದೆಯೇ ಅಥವಾ ವಿದೇಶವೊಂದು ಭಾರತದ ನಾಗರಿಕರ ಮೇಲೆ ಗೂಢಚರ್ಯೆ ನಡೆಸಿದೆಯೇ ಎಂದು ಪತ್ತೆಹಚ್ಚುವಂತೆ ಕೋರಿದೆ.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ಪೀಠದ ಎದುರು ಅರ್ಜಿಯನ್ನು ಉಲ್ಲೇಖಿಸಲಾಗಿದೆ. ಕೇಂದ್ರ ಸರ್ಕಾರಕ್ಕೆ ತಮ್ಮ ಮನವಿಯ ಪ್ರತಿಗಳನ್ನು ಸಲ್ಲಿಸುವಂತೆ ಪ್ರಕರಣದ ಎಲ್ಲಾ ಅರ್ಜಿದಾರರಿಗೆ (ಯಶವಂತ್‌ ಸಿನ್ಹಾ ಅವರಲ್ಲದೆ ಇನ್ನೂ ಒಂಬತ್ತು ಮಂದಿ ಪೆಗಸಸ್‌ ಹಗರಣ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ) ತಿಳಿಸಲಾಗಿದೆ.

ಸಿನ್ಹಾ ಅರ್ಜಿಯ ಪ್ರಮುಖಾಂಶಗಳು…

  • ಬೇರೆ ದೇಶ ಅಥವಾ ಭಾರತೀಯ ಏಜೆನ್ಸಿಗಳು ತಮ್ಮ ವೈಯಕ್ತಿಕ ಮಾಹಿತಿಯನ್ನು ಬಳಸುತ್ತಿವೆಯೇ ಎಂಬುದನ್ನು ತಿಳಿಯುವ ಹಕ್ಕು ದೇಶದ ನಾಗರಿಕರಿಗೆ ಇದೆ.

  • ನಾಯಾಲಯದ ಮೇಲ್ವಿಚಾರಣೆಯಲ್ಲಿ ಪೆಗಸಸ್ ಬೇಹು- ತಂತ್ರಾಂಶದ ಅಕ್ರಮ ಬಳಕೆ ಕುರಿತು ತನಿಖೆ ನಡೆಸಬೇಕು.

  • ಯಾವುದೇ ಸಚಿವಾಲಯ ಅಥವಾ ಸರ್ಕಾರಿ ಏಜೆನ್ಸಿಯಿಂದ ಮಾಡಿದ ಯಾವುದೇ ಕಣ್ಗಾವಲಿಗೆ ಸಂಬಂಧಿಸಿದ ಅರ್ಜಿಗಳನ್ನು ನಿರ್ವಹಿಸಲು ಮೇಲ್ವಿಚಾರಣಾ ಕಾರ್ಯವಿಧಾನವೊಂದನ್ನು ರೂಪಿಸುವಂತೆ ನಿರ್ದೇಶಿಸಬೇಕು.

  • ಪೆಗಸಸ್ ಬೇಹು- ತಂತ್ರಾಂಶವನ್ನು ದೇಶಾದ್ಯಂತ ಹಲವಾರು ಪತ್ರಕರ್ತರ ಮೇಲೆ ಕಣ್ಣಿಡಲು ಅಥವಾ ಬೇಹುಗಾರಿಕೆ ಮಾಡಲು ಬಳಸಲಾಗಿದೆ. ಇದು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭದ ಮೇಲೆ ನಡೆದ ನೇರ ದಾಳಿಯಾಗಿದ್ದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಅತ್ಯಗತ್ಯ ಅಂಶವಾಗಿರುವ ಪತ್ರಿಕಾ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಇದು ಉಲ್ಲಂಘಿಸುತ್ತದೆ. ಅಲ್ಲದೆ ಅರಿವಿನ ಹಕ್ಕನ್ನು ಗಂಭೀರ ರೀತಿಯಲ್ಲಿ ಮೊಟಕುಗೊಳಿಸುತ್ತದೆ.

  • ಈ ರೀತಿಯ ಕಣ್ಗಾವಲು ಮುಂದುವರಿದರೆ, ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಮತ್ತು ವಾಕ್‌ ಸ್ವಾತಂತ್ರ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ. ಇದು ಸಂವಿಧಾನದ 19 ಮತ್ತು 21ನೇ ವಿಧಿ ಅಡಿಯಲ್ಲಿ ನೀಡಲಾಗಿರುವ ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುವಂತಿದೆ.

  • ಕಣ್ಗಾವಲು ನಡೆಸಲು ಪೆಗಸಸ್‌ನಿಂದ ಪರವಾನಗಿ ಪಡೆದಿರುವುದನ್ನು ಪ್ರತಿವಾದಿ ಸರ್ಕಾರ ಸ್ಪಷ್ಟವಾಗಿ ತಳ್ಳಿಹಾಕಿಲ್ಲ. ಅತ್ಯಂತ ಗಂಭೀರ ಆರೋಪಗಳ ಬಗ್ಗೆ ವಿಶ್ವಾಸಾರ್ಹ ಮತ್ತು ಸ್ವತಂತ್ರ ತನಿಖೆ ನಡೆಸಲು ಯಾವುದೇ ಕ್ರಮ ಕೈಗೊಂಡಿಲ್ಲ.

  • ಭಾರತ ಸರ್ಕಾರ ಇಸ್ರೇಲ್‌ನ ಎನ್‌ಎಸ್‌ಒ ಸಂಸ್ಥೆಯಿಂದ ಪೆಗಸಸ್ ಸಾಫ್ಟ್‌ವೇರ್ ಖರೀದಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರು ಪದೇ ಪದೇ ನಿರಾಕರಿಸಿದ್ದಾರೆ.