ಸುದ್ದಿಗಳು

[ಪೆಗಸಸ್‌] ನಿಲುವು ಸ್ಪಷ್ಟಪಡಿಸದ ಕೇಂದ್ರದ ನಡೆಗೆ ಸುಪ್ರೀಂ ಕೋರ್ಟ್ ಆಕ್ಷೇಪ; ರೋಚಕಗೊಳಿಸಲಾಗುತ್ತಿದೆ ಎಂದ ಎಸ್‌ಜಿ

Bar & Bench

ವಿವಾದಿತ ಪೆಗಸಸ್‌ ಬೇಹುತಂತ್ರಾಂಶದ ಬಳಕೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಾನು ಅದನ್ನು ಬಳಸಿದ್ದೇನೆಯೇ, ಇಲ್ಲವೇ ಎನ್ನುವ ಬಗ್ಗೆ ಯಾವುದೇ ಮಾಹಿತಿಯನ್ನು ನೀಡದ ಕೇಂದ್ರ ಸರ್ಕಾರದ ನಿಲುವನ್ನು ಸುಪ್ರೀಂ ಕೋರ್ಟ್‌ ಸೋಮವಾರದ ವಿಚಾರಣೆ ವೇಳೆ ಪ್ರಮುಖವಾಗಿ ಗಮನಿಸಿತು.

ಪೆಗಸಸ್‌ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ, ಎಸ್‌ಐಟಿ ತನಿಖೆ ನಡೆಸುವಂತೆ ಹಾಗೂ ಮುಂತಾದ ಕೋರಿಕೆಗಳನ್ನು ಮುಂದೆ ಮಾಡಿದ್ದ ವಿವಿಧ ಮನವಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಅನಿರುದ್ಧ ಬೋಸ್‌‌ ಅವರ ನೇತೃತ್ವದ ಪೀಠವು ನಡೆಸಿತು. ವಿಚಾರಣೆಯ ವೇಳೆ ಪೆಗಸಸ್‌ ತಂತ್ರಾಂಶದ ಕುರಿತಾದ ಮಾಹಿತಿಯನ್ನು ನೀಡುವ ಬಗ್ಗೆ ಕೇಂದ್ರ ಸರ್ಕಾರವು ಉತ್ಸಾಹ ತೋರದೆ ಇರುವುದನ್ನು ಪೀಠವು ಗಮನಿಸಿತು.

ಪೆಗಸಸ್‌ ಬಳಸಲಾಗಿದೆಯೇ, ಇಲ್ಲವೇ ಎನ್ನುವ ಬಗ್ಗೆ ಯಾವುದೇ ಮಾಹಿತಿ ನೀಡದ ಕೇಂದ್ರ ಸರ್ಕಾರದ ವಾದವನ್ನು ಆಲಿಸಿದ ಪೀಠವು ಒಂದು ಹಂತದಲ್ಲಿ, “ನೀವು ಏನನ್ನೇ ಹೇಳಬೇಕೆಂದಿದ್ದೀರೋ ಅ ಬಗ್ಗೆ ಅಫಿಡವಿಟ್‌ ಏಕೆ ಸಲ್ಲಿಸುತ್ತಿಲ್ಲ? ಹಾಗೆ ಮಾಡಿದರೆ, ನಮಗೂ ಒಂದು ಸ್ಪಷ್ಟ ಚಿತ್ರಣ ದೊರೆಯುತ್ತದೆ,” ಎಂದಿತು. ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ ಅವರು, “ಒಂದು ವೇಳೆ ನಾವು ಪೆಗಸಸ್‌ ಬಳಸಿಲ್ಲ ಎಂದು ಒಂದು ಪುಟದ ಅಫಿಡವಿಟ್‌ ಸಲ್ಲಿಸಿದರೆ ಅರ್ಜಿದಾರರು ಆಗ ಮನವಿಗಳನ್ನು ಹಿಂಪಡೆಯುತ್ತಾರೆಯೇ ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತೇನೆ. ಆದರೆ ಅದಕ್ಕೆ ಉತ್ತರ ‘ಹಿಂಪಡೆಯುವುದಿಲ್ಲ’ ಎನ್ನುವುದಾಗಿದೆ,” ಎಂದರು.

ಅರ್ಜಿದಾರರು ಎತ್ತಿರುವ ಪ್ರಶ್ನೆಗಳು ಸತ್ಯಾನ್ವೇಷಣೆಯ ಉದ್ದೇಶ ಹೊಂದಿದ್ದರೆ ಅದಕ್ಕೆ ನನ್ನ ಸಹಮತವಿದೆ. ಆದರೆ, ರೋಚಕಗೊಳಿಸುವ ಉದ್ದೇಶದಿಂದ ಇದು ನಡೆದಿದ್ದರೆ ಅದು ಸಂವಿಧಾನದ 32ನೇ ವಿಧಿಗೆ ಹೊರತಾಗಿದ್ದು ನನ್ನ ಬೆಂಬಲವಿಲ್ಲ.
ಎಸ್‌ಜಿ ತುಷಾರ್‌ ಮೆಹ್ತಾ

ಮುಂದುವರೆದು, “ಒಂದು ವೇಳೆ ಅರ್ಜಿದಾರರು ಎತ್ತಿರುವ ಪ್ರಶ್ನೆಗಳು ಸತ್ಯಾನ್ವೇಷಣೆಯ ಉದ್ದೇಶ ಹೊಂದಿದ್ದರೆ ಅದಕ್ಕೆ ನನ್ನ ಸಹಮತವಿದೆ. ಆದರೆ, ರೋಚಕಗೊಳಿಸುವ ಉದ್ದೇಶದಿಂದ ಇದು ನಡೆದಿದ್ದರೆ ಅದು ಸಂವಿಧಾನದ 32ನೇ ವಿಧಿಗೆ ಹೊರತಾಗಿದ್ದು ನನ್ನ ಬೆಂಬಲವಿಲ್ಲ. ನ್ಯಾಯಾಲಯಗಳು ನೋಡಬಯಸುವ ವಿಷಯವನ್ನು ಬಿಟ್ಟು ಮತ್ತೆಲ್ಲೋ ಅರ್ಜಿದಾರರು ದೃಷ್ಟಿ ನೆಟ್ಟಿರುವಂತಿದೆ,” ಎಂದು ಅವರು ವಾದಿಸಿದರು. ಸೂಕ್ಷ್ಮ ವಿಷಯವೊಂದನ್ನು ರೋಚಕಗೊಳಿಸುವ ಪ್ರಯತ್ನ ನಡೆದಿದೆ ಎನ್ನುವ ಇಂಗಿತ ವ್ಯಕ್ತಪಡಿಸಿದರು.

ತಮ್ಮ ವಾದದಲ್ಲಿ ಮೆಹ್ತಾ ಅವರು, “ಈ ವಿಷಯವನ್ನು ಮುಂದುವರೆಸಿದರೆ ಅದು ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಉಂಟುಮಾಡುತ್ತದೆ. ಅಫಿಡವಿಟ್‌ ಸಲ್ಲಿಸಿ, ಮತ್ತೊಂದು ಮಾಡಿ ಎನ್ನುವ ರೀತಿಯಲ್ಲಿ ಈ ಪ್ರಕರಣವನ್ನು ನಿಭಾಯಿಸಲು ಬರುವುದಿಲ್ಲ. ಈ ವಿಷಯದಲ್ಲಿ ಮುಂದಿರಿಸಲಾಗುವ ವಿಚಾರಗಳು ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಉಂಟುಮಾಡುವಂತಿರುತ್ತವೆ. ಇದಕ್ಕೆಲ್ಲಾ ಒಂದು ವ್ಯವಸ್ಥೆ ಎನ್ನುವುದಿದೆ,” ಎಂದರು.

ಅಲ್ಲದೆ, “ಎಲ್ಲ ಆರೋಪಗಳನ್ನು ನಾವು ಇದಾಗಲೇ ಅಲ್ಲಗಳೆದಿದ್ದೇವೆ. ಸಂಸತ್‌ ಆರಂಭಕ್ಕೂ ಮುನ್ನ ವೆಬ್‌ ತಾಣವೊಂದು ರೋಚಕ ವರದಿಯನ್ನು ಪ್ರಕಟಿಸಿದೆ ಎಂದು ಸಚಿವರ ಹೇಳಿದ್ದಾರೆ. ಇದರಲ್ಲಿ ಮುಚ್ಚಿಡುವುಂಥದ್ದಾಗಲಿ ಅಥವಾ ಪರೀಕ್ಷೆಗೊಳಪಡಿಸುವಂಥದ್ದಾಗಲಿ ಏನೂ ಇಲ್ಲ” ಎಂದರು.

ಸರ್ಕಾರದ ನಿಲುವನ್ನು ತೀವ್ರವಾಗಿ ವಿರೋಧಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು “ನಾವು ಎತ್ತಿರುವ ಪ್ರಶ್ನೆಗಳಿಗೆ ಈ ಅಫಿಡವಿಟ್‌ ಉತ್ತರಿಸುತ್ತಿಲ್ಲ” ಎಂದರು. ಪೆಗಸಸ್‌ ಬೇಹು ತಂತ್ರಾಂಶವನ್ನು ಬಳಸಿರಬಹುದಾದ ಸರ್ಕಾರವೇ ಸಮಿತಿಯೊಂದನ್ನು ನೇಮಿಸುವುದನ್ನು ನಾವು ಬಯಸುವುದಿಲ್ಲ ಎಂದರು.

ಫ್ರಾನ್ಸ್‌ ಸರ್ಕಾರವು ಪೆಗಸಸ್‌ ವಿಚಾರವಾಗಿ ರಾಷ್ಟ್ರೀಯ ತನಿಖೆಯೊಂದನ್ನು ಆರಂಭಿಸಿದೆ. ಇಸ್ರೇಲ್‌ ಕೂಡ ತನಿಖೆ ನಡೆಸುತ್ತಿದೆ. ಆದರೆ, ಭಾರತ ಸರ್ಕಾರ ಮಾತ್ರ ಎಲ್ಲವೂ ಸರಿ ಇದೆ ಎನ್ನುತ್ತಿದೆ
- ಹಿರಿಯ ವಕೀಲ ಕಪಿಲ್‌ ಸಿಬಲ್‌

“ಸರ್ಕಾರವು ಬೇಹುತಂತ್ರಾಂಶವೊಂದು ವಾಟ್ಸಪ್‌ಗೆ ಸೋಂಕಿರುವ ಬಗ್ಗೆ ಒಪ್ಪಿಕೊಂಡಿದೆ. ಭಾರತದ 119 ಮಂದಿ ಈ ತಂತ್ರಾಂಶಕ್ಕೆ ಈಡಾಗಿರುವ ಬಗ್ಗೆಯೂ ಒಪ್ಪಿಕೊಂಡಿದೆ,” ಎಂದ ಅವರು, “ಇಸ್ರೇಲ್‌ ಜೊತೆಗೆ ಸರ್ಕಾರ (ಈ ವಿಚಾರವಾಗಿ) ಕೈಜೋಡಿಸಿದೆಯೇ? ಇದೇ ಕಾರಣಕ್ಕೆ ವಾಸ್ತವಾಂಶಗಳ ಬಗ್ಗೆ ಅದು ಪ್ರತಿಕ್ರಿಯಿಸುತ್ತಿಲ್ಲವೆನಿಸುತ್ತದೆ,”ಎಂದರು.

ಫ್ರಾನ್ಸ್‌ ಸರ್ಕಾರವು ಪೆಗಸಸ್‌ ವಿಚಾರವಾಗಿ ರಾಷ್ಟ್ರೀಯ ತನಿಖೆಯೊಂದನ್ನು ಆರಂಭಿಸಿದೆ. ಇಸ್ರೇಲ್‌ ಕೂಡ ತನಿಖೆ ನಡೆಸುತ್ತಿದೆ. ಆದರೆ, ಭಾರತ ಸರ್ಕಾರ ಮಾತ್ರ ಎಲ್ಲವೂ ಸರಿ ಇದೆ ಎನ್ನುತ್ತಿದೆ ಎಂದು ಸಿಬಲ್‌ ಆರೋಪಿಸಿದರು.