Karnataka High Court
Karnataka High Court 
ಸುದ್ದಿಗಳು

ಅಧಿಕ ಪಿಂಚಣಿ ಪಾವತಿ ಪ್ರಕರಣ; ಪಿಂಚಣಿದಾರರ ಖಾತೆಯಿಂದ ಒಮ್ಮೆಲೇ ಹೆಚ್ಚುವರಿ ಹಣ ಕಡಿತ ಮಾಡದಂತೆ ಸೂಚಿಸಿದ ಹೈಕೋರ್ಟ್‌

Siddesh M S

“ಪಿಂಚಣಿ ಎಂಬುದು ಸಹಜವಾಗಿದ್ದು, ಅದು ಪಿಂಚಣಿದಾರರು ಅಥವಾ ಪಿಂಚಣಿದಾರರ ಪತ್ನಿಗೆ ಬ್ಯಾಂಕ್‌ ತನ್ನ ಇಚ್ಛಾನುಸಾರ ನೀಡುವ ಉಡುಗೊರೆಯಾಗಲಿ, ಕೊಡುಗೆಯಾಗಲಿ ಅಲ್ಲ” ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ ಹೇಳಿದೆ. ಅಲ್ಲದೇ, ಪತಿಯ ಪಿಂಚಣಿ ಖಾತೆಗೆ ಹೆಚ್ಚುವರಿಯಾಗಿ ಪಿಂಚಣಿ ಹಣ ಪಾವತಿಸಲಾಗಿದೆ ಎಂದು ಪತ್ನಿಯ ಕುಟುಂಬ ಪಿಂಚಣಿ ಖಾತೆಯಿಂದ ಕಡಿತ ಮಾಡಿದ್ದ ₹6,40,329 ಅನ್ನು ಎರಡು ವಾರಗಳಲ್ಲಿ ಪುನರ್‌ ಪಾವತಿ ಮಾಡುವಂತೆ ಕೆನರಾ ಬ್ಯಾಂಕ್‌ಗೆ ಈಚೆಗೆ ಹೈಕೋರ್ಟ್‌ ಆದೇಶಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ತೆರನಾದ ಕಡಿತ ಮಾಡದೇ ಸೂಕ್ತ ಪಿಂಚಣಿಯನ್ನೂ ಪಾವತಿಸುವಂತೆ ನಿರ್ದೇಶಿಸಿದೆ.

ಅರ್ಜಿದಾರೆ ಬೆಂಗಳೂರಿನ ವಿಮಲಾ ರಮಾನಾಥ್‌ ಪವಾರ್‌ ಅವರ ಕುಟುಂಬದ ಪಿಂಚಣಿ ಖಾತೆಯಿಂದ ಸಹನೂಭೂತಿಯಿಲ್ಲದೇ ಕೆನರಾ ಬ್ಯಾಂಕ್‌ ₹6,40,329 ಯನ್ನು ಕಡಿತ ಮಾಡಿರುವುದನ್ನು ಮತ್ತೆ ಪಾವತಿಸಲು ಆದೇಶಿಸುವಂತೆ ಕೋರಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

“ಅರ್ಜಿದಾರೆಯ ಪತಿಯ ಖಾತೆಗೆ ಹೆಚ್ಚುವರಿಯಾಗಿ ಪಾವತಿಸಿರುವ ಹಣವನ್ನು ಅರ್ಜಿದಾರೆಯ ಕುಟುಂಬ ಪಿಂಚಣಿಯಿಂದ ಪ್ರತಿ ತಿಂಗಳು ₹4,000 ಪಡೆದುಕೊಂಡು ತೀರಿಸಿಕೊಳ್ಳಲು ಬ್ಯಾಂಕ್‌ಗೆ ಸ್ವಾತಂತ್ರ್ಯ ಕಲ್ಪಿಸಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ಪಿಂಚಣಿದಾರರ ಮರಣ ಅಥವಾ ಪಿಂಚಣಿ ನಿಲ್ಲುವುದರಿಂದ ಹೆಚ್ಚುವರಿ ಹಣವನ್ನು ಮರಳಿ ಪಡೆದುಕೊಳ್ಳಲಾಗದಿದ್ದರೆ ಯೋಜನೆಯಡಿ ಪಿಂಚಣಿದಾರರು ಒಪ್ಪಿಗೆ ನೀಡಿರುವ ಪ್ರಕಾರ ಕ್ರಮಕೈಗೊಳ್ಳಬೇಕು. ಮಾಸ್ಟರ್‌ ಸುತ್ತೋಲೆಯ ಪ್ರಕಾರ ಹೆಚ್ಚುವರಿ ಹಣವನ್ನು ಮರಳಿ ಪಡೆಯಬಹುದಾಗಿದ್ದು, ಏಕರೂಪದಲ್ಲಿ ತಪ್ಪಾಗಿ ಹಾಕಲಾಗಿರುವ ಹಣ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ. ಹಾಗೆಂದು ಹೆಚ್ಚುವರಿಯಾಗಿ ಪಾವತಿಸಲಾಗಿರುವ ಹಣವನ್ನು ಪಿಂಚಣಿ ಆಧರಿಸಿರುವ, 73 ವರ್ಷ ವಯಸ್ಸಾಗಿರುವ ಸಮಸ್ಯೆಗಳಿಂದ ಬಳಲುತ್ತಿರುವ ವಿಧವೆಯಿಂದ ಒಂದೇ ಬಾರಿಗೆ ಮರಳಿ ಪಡೆಯಬೇಕು ಎಂದಲ್ಲ. ನಿರ್ಲಕ್ಷ್ಯದಿಂದ ಹೆಚ್ಚುವರಿಯಾಗಿ ಹಣವನ್ನು ಅರ್ಜಿದಾರೆಯ ಪತಿಯ ಖಾತೆಗೆ ಹಾಕಿರುವ ಬ್ಯಾಂಕ್‌ ಅಧಿಕಾರಿಯನ್ನು ಹೊಣೆಗಾರರನ್ನಾಗಿಸಬೇಕು. ಹೊಣೆಗಾರಿಕೆ ನಿಗದಿಪಡಿಸುವ ನಿಟ್ಟಿನಲ್ಲಿ ಬ್ಯಾಂಕ್‌ ತಪ್ಪೆಸಗಿರುವ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳಬೇಕು” ಎಂದು ನ್ಯಾಯಾಲಯ ಹೇಳಿದೆ.

“ಅರ್ಜಿದಾರೆಯ ಪತಿಯು ಬ್ಯಾಂಕ್‌ನ ಉದ್ಯೋಗಿಯಲ್ಲ. ಅವರು ತಮ್ಮ ಖಾತೆಯನ್ನು ಬ್ಯಾಂಕ್‌ನಲ್ಲಿ ಹೊಂದಿದ್ದಾರೆ. ಕೇಂದ್ರೀಕೃತ ಪಿಂಚಣಿ ರವಾನೆ ಕೇಂದ್ರ (ಸಿಪಿಪಿಸಿ)ದಲ್ಲಿ ಪಿಂಚಣಿ ಹಣವನ್ನು ಠೇವಣಿ ಇಡಲಾಗಿದೆ. ಅರ್ಜಿದಾರೆಯ ಪತಿಗೆ ರಾಜ್ಯ ಸರ್ಕಾರವು ಹೆಚ್ಚುವರಿ ಪಿಂಚಣಿ ಪಾವತಿಸಿಲ್ಲ. ಬ್ಯಾಂಕ್‌ ಅಧಿಕಾರಿಯ ಬೇಜವಾಬ್ದಾರಿಯು ಹೆಚ್ಚುವರಿ ಹಣ ಪಾವತಿಗೆ ಕಾರಣವಾಗಿದೆ. ಅರ್ಜಿದಾರೆಯ ಪತಿಯ ಖಾತೆಗೆ ವರ್ಗಾವಣೆಯಾಗಿರುವ ಹಣವು ಅವರಿಗೆ ಸೇರಿದ್ದಲ್ಲ ಅಥವಾ ಅದು ನಿರ್ಲಕ್ಷ್ಯ ತೋರಿರುವ ಅಧಿಕಾರಿಗೆ ಸೇರಿದ್ದಲ್ಲ. ಅದು ಸಾರ್ವಜನಿಕರ ಹಣವಾಗಿದೆ. ಹೀಗಾಗಿ, ಆ ಹಣವನ್ನು ಪ್ರತಿ ತಿಂಗಳು ₹4,000ಯಂತೆ ಅರ್ಜಿದಾರೆಯ ಖಾತೆಯಿಂದ ಮರು ಪಡೆದುಕೊಳ್ಳಬಹುದಾಗಿದೆ” ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಅರ್ಜಿದಾರೆ ಪ್ರತಿನಿಧಿಸಿದ್ದ ವಕೀಲರಾದ ಯೋಗೇಶ್‌ ನಾಯಕ್‌ ಮತ್ತು ಬಿ ಒ ಅನಿಲ್‌ ಕುಮಾರ್‌ ಅವರು “ಕುಟುಂಬ ಪಿಂಚಣೆ ಖಾತೆಯಿಂದ ಯಾವುದೇ ಸೂಚನೆ ನೀಡದೇ ಐದು ಲಕ್ಷ ರೂಪಾಯಿಗಳನ್ನು ಪ್ರತ್ಯೇಕಿಸಲಾಗಿದೆ. ಪತಿ ಮಾಡಿದ ತಪ್ಪಿಗೆ ಮಾನಸಿಕ ಯಾತನೆ ನೀಡಲಾಗಿದೆ. ಪತಿಯಿಂದಾದ ಪ್ರಮಾದಕ್ಕೆ ತನ್ನಿಂದ ಹಣ ವಸೂಲು ಮಾಡಿದರೆ ತನ್ನ ಜೀವನ ನಿರ್ವಹಿಸಲು ಸಾಕಷ್ಟು ಸಮಸ್ಯೆಯಾಗಲಿದೆ. ಕುಟುಂಬ ಪಿಂಚಣಿಯು ಕೇವಲ ₹13,055ಯಾಗಿದ್ದು, ಅದನ್ನು ಇದುವರೆಗೂ ಪಡೆಯಲು ಅವಕಾಶ ನೀಡಲಾಗಿಲ್ಲ. ಯಾವುದೇ ಸೂಚನೆ ನೀಡದೇ ಅನಧಿಕೃತವಾಗಿ ಬ್ಯಾಂಕ್‌ ₹2,00,000 ಕಡಿತ ಮಾಡಿದೆ. ಈ ಮೂಲಕ ಪತಿ ಸಾವನ್ನಪ್ಪಿದ ಏಳು ತಿಂಗಳಿಂದ ಬ್ಯಾಂಕ್‌ ತನಗೆ ಕಿರುಕುಳ ನೀಡುತ್ತಿದೆ. ಬ್ಯಾಂಕ್‌ ಅಧಿಕಾರಿಗಳ ತಪ್ಪಿನಿಂದಾಗಿ 73 ವರ್ಷ ಮಹಿಳೆಯನ್ನು ಕೇವಲ ₹13,055 ಪಿಂಚಣಿ ಪಡೆಯಲು ಅಲೆದಾಡಿಸಲಾಗುತ್ತಿದೆ. ಅಲ್ಲದೇ, ಕಾನೂನುಬಾಹಿರವಾಗಿ ₹6,40,000ಯನ್ನು ಖಾತೆಯಿಂದ ಕಡಿತ ಮಾಡಿಕೊಳ್ಳಲು ಅರ್ಜಿದಾರೆಯನ್ನು ಕೇಳುತ್ತಿದೆ. ಆದರೆ, ಇತ್ತ ದೈನಂದಿನ ಜೀವನ ನಿರ್ವಹಣೆ ಕಷ್ಟವಾಗಿದೆ. ಇದನ್ನು ಕೇಳಿಸಿಕೊಳ್ಳದ ಬ್ಯಾಂಕ್‌ ಅನಧಿಕೃತವಾಗಿ ಹಣ ಕಡಿತ ಮಾಡುತ್ತಿದೆ” ಎಂದು ವಾದಿಸಿದ್ದರು.

ಬ್ಯಾಂಕ್‌ ಪ್ರತಿನಿಧಿಸಿದ್ದ ವಕೀಲ ವಕೀಲ ಟಿ ಪಿ ಮುತ್ತಣ್ಣ ಅವರು “ಸರ್ಕಾರಿ ಪಿಂಚಣಿ ಹಂಚಿಕೆ ಮಾಸ್ಟರ್‌ ಸುತ್ತೋಲೆ ಪ್ರಕಾರ ಹೆಚ್ಚುವರಿ ಹಣ ಮರುಪಾವತಿಗೆ ಕಲಂ 13ರಲ್ಲಿ ಅವಕಾಶವಿದೆ” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಅರ್ಜಿದಾರೆಯ ಪತಿ ಓರ್ವ ಪಿಂಚಣಿದಾರರಾಗಿದ್ದು 2019ರ ಮಾರ್ಚ್‌ನಿಂದ 2021ರ ಫೆಬ್ರವರಿ 6ರವರೆಗೆ ಅಂದರೆ ಅರ್ಜಿದಾರೆಯ ಪತಿ ಸಾವನ್ನಪ್ಪುವವರೆಗೆ ಪ್ರತಿ ತಿಂಗಳು ಅವರಿಗೆ ನಿಗದಿಯಾಗಿದ್ದ ₹38,604 ಪಿಂಚಣಿ ಪಾವತಿಸುವ ಬದಲಿಗೆ ₹96,998 ಪಿಂಚಣಿ ಪಾವತಿಸಲಾಗಿದೆ. 2021ರ ಫೆಬ್ರವರಿ 6ರಂದು ಪತಿ ಸಾವನ್ನಪ್ಪಿದ ಬಳಿಕ ಪತ್ನಿಗೆ ತಕ್ಷಣ ಪಿಂಚಣಿ ನೀಡುವುದನ್ನು ಆರಂಭಿಸಿರಲಿಲ್ಲ. ಬದಲಿಗೆ ತಮ್ಮ ಪತಿಗೆ ಹೆಚ್ಚುವರಿಯಾಗಿ ಪಿಂಚಣಿ ಪಾವತಿಸಲಾಗಿದ್ದು, ₹13,40,261 ಮರುಪಾವತಿಸಲು ಆದೇಶಿಸಲಾಗಿತ್ತು. ಪತಿಯ ಖಾತೆಗೆ ಹಣ ಪಾವತಿ ಮಾಡಿರುವುದು ಗೊತ್ತಿಲ್ಲ. ತನಗೆ 73 ವರ್ಷಗಳಾಗಿದ್ದು, ಸಾಂಕ್ರಾಮಿಕತೆಯ ಈ ಸಂದರ್ಭದಲ್ಲಿ ಬ್ಯಾಂಕ್‌ಗೆ ಬರಲು ಸಾಧ್ಯವಿಲ್ಲ. ಹೀಗಾಗಿ, ಪಿಂಚಣಿ ನೀಡಲು ವ್ಯವಸ್ಥೆ ಮಾಡಬೇಕು ಎಂದು ಕೋರಿದ್ದರು.

ಆದರೆ, ಪಿಂಚಣಿದಾರನ ಪತ್ನಿಗೆ ಯಾವುದೇ ಸೂಚನೆ ನೀಡದೆ ಅವರ ಕುಟುಂಬ ಪಿಂಚಣಿ ಯೋಜನೆಯಲ್ಲಿನ ₹6,40,000ಯನ್ನು ಕಡಿತ ಮಾಡಲಾಗಿತ್ತು. ಯಾವುದೇ ಅನುಮತಿ ಪಡೆಯದೇ ತಮ್ಮ ಖಾತೆಯಿಂದ ಕೆನರಾ ಬ್ಯಾಂಕ್‌ ಹಣ ಕಡಿತ ಮಾಡಲಾಗಿದೆ ಎಂದು ಬ್ಯಾಂಕ್‌ಗೆ ತಿಳಿಸಿದ್ದ ಅರ್ಜಿದಾರೆಯು ಹಣ ಮರುಪಾವತಿ ಮಾಡಲು ಆದೇಶಿಸುವಂತೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇದನ್ನು ನ್ಯಾಯಾಲಯ ಮಾನ್ಯ ಮಾಡಿದೆ.