High Court of Karnataka, Dharwad Bench 
ಸುದ್ದಿಗಳು

ಸ್ವಾತಂತ್ರ್ಯ ಹೋರಾಟಗಾರರ ಪತ್ನಿಯ ಪಿಂಚಣಿ ಕೋರಿಕೆ ಪುರಸ್ಕರಿಸಿದ್ದ ಏಕಸದಸ್ಯ ಪೀಠದ ಆದೇಶ ಬದಿಗೆ ಸರಿಸಿದ ವಿಭಾಗೀಯ ಪೀಠ

ಪತಿ ಬಸಪ್ಪ ಮರಣದ 12 ವರ್ಷದ ಬಳಿಕ ಅವರ ಪತ್ನಿ ಸಾವಂತ್ರವ್ವ ಪಿಂಚಣಿ ಕೋರಿದ್ದರು. ಸರ್ಕಾರವು ಆಕೆಯ ಮನವಿಯನ್ನು ಕೂಲಂಕಷವಾಗಿ ಪರಿಶೀಲಿಸಿ ನಿಯಮದಲ್ಲಿ ಅವಕಾಶವಿಲ್ಲದ ಕಾರಣ ಪಿಂಚಣಿ ನಿರಾಕರಿಸಿದೆ ಎಂದಿರುವ ನ್ಯಾಯಾಲಯ.

Bar & Bench

ಮೃತ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ವೃದ್ಧ ಪತ್ನಿಗೆ ಪಿಂಚಣಿ ಮತ್ತು ಹಿಂಬಾಕಿ ಪಾವತಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ಕರ್ನಾಟಕ ಹೈಕೋರ್ಟ್‌ನ ಏಕ ಸದಸ್ಯ ಪೀಠ ಹೊರಡಿಸಿದ್ದ ಆದೇಶವನ್ನು ಧಾರವಾಡದ ವಿಭಾಗೀಯ ಪೀಠವು ಈಚೆಗೆ ರದ್ದುಪಡಿಸಿದೆ.

ಏಕ ಸದಸ್ಯಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಆರ್ ದೇವದಾಸ್ ಮತ್ತು ಕೆ ರಾಜೇಶ್‌ ರೈ ಅವರ ನೇತೃತ್ವದ ವಿಭಾಗೀಯ ಪೀಠವು ಪುರಸ್ಕರಿಸಿದೆ.

ಕೇಂದ್ರ ಸರ್ಕಾರಿ ಸನ್ಮಾನ್ ಪಿಂಚಣಿ ಯೋಜನೆಯ ವಿತರಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು 2014ರಲ್ಲಿ ಮಾರ್ಗಸೂಚಿ ಪ್ರಕಟಿಸಿದೆ. ಅದನ್ನು ರಾಜ್ಯ ಸರ್ಕಾರ ಸಹ ಪಾಲಿಸುತ್ತಿದೆ. ಆ ಮಾರ್ಗಸೂಚಿ ಪ್ರಕಾರ ಸ್ವಾತಂತ್ರ್ಯ ಹೋರಾಟಗಾರ ಅಥವಾ ಹೋರಾಟಗಾರ್ತಿ ಸಾವನ್ನಪ್ಪಿದ ನಂತರ ಅವರ ಹೆಸರಿನಲ್ಲಿ ಪಿಂಚಣಿ ವಿತರಿಸುವಂತಿಲ್ಲ. ಜೊತೆಗೆ, ಹೋರಾಟಗಾರ ಮತ್ತು ಹೋರಾಟಗಾರ್ತಿ ವಿಷಯವು ಪರಿಶೀಲನೆಯಲ್ಲಿದ್ದರೂ ಸಹ ಪಿಂಚಣಿ ಪಾವತಿಸುವಂತಿಲ್ಲ. ಅದರಂತೆ ರಾಜ್ಯ ಸರ್ಕಾರವು ಪ್ರಕರಣದಲ್ಲಿ ಮೃತ ಸ್ವಾತಂತ್ರ್ಯ ಹೋರಾಟಗಾರನ ವೃದ್ಧ ಪತ್ನಿಯಾದ ಬೆಳಗಾವಿಯ ನಿವಾಸಿ ಸಾವಂತ್ರವ್ವ (89) ಅವರಿಗೆ ಪಿಂಚಣಿ ನಿರಾಕರಿಸಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶ ಸೂಕ್ತವಾಗಿದೆ ಎಂದು ವಿಭಾಗೀಯ ಪೀಠ ಆದೇಶದಲ್ಲಿ ತಿಳಿಸಿದೆ.

“1992ರಿಂದ ಬಸಪ್ಪಗೆ ಮಂಜೂರಾಗಿದ್ದ ಪಿಂಚಣಿ ಆದೇಶವನ್ನು ಅಗತ್ಯ ದಾಖಲೆಗಳ ಕೊರತೆಯಿಂದ 2000ರಲ್ಲಿ ರದ್ದುಪಡಿಸಲಾಗಿತ್ತು. ಬಸಪ್ಪ ಮರಣ ನಂತರದ 12 ವರ್ಷ ಬಳಿಕ ಸಾವಂತ್ರವ್ವ ಪಿಂಚಣಿ ಕೋರಿದ್ದರು. ಸರ್ಕಾರವು ಆಕೆಯ ಮನವಿಯನ್ನು ಕೂಲಂಕಷವಾಗಿ ಪರಿಶೀಲಿಸಿ ನಿಯಮದಲ್ಲಿ ಅವಕಾಶವಿಲ್ಲದ ಕಾರಣ ಪಿಂಚಣಿ ನಿರಾಕರಿಸಿದೆ. ಹೀಗಿದ್ದರೂ, ಏಕ ಸದಸ್ಯ ಪೀಠವು ಸಾವಂತ್ರವ್ವಗೆ ಪಿಂಚಣಿ ನೀಡಲು ನಿರ್ದೇಶಿಸಿರುವುದು ಸರಿಯಲ್ಲ” ಎಂದು ನ್ಯಾಯಾಲಯ ಹೇಳಿದೆ.

ಬ್ರಿಟಿಷರನ್ನು ಭಾರತದಿಂದ ಓಡಿಸಲು ಆಗ್ರಹಿಸಿ 1942ರಲ್ಲಿ ನಡೆದಿದ್ದ ‘ಕ್ವಿಟ್ ಇಂಡಿಯಾ’ ಚಳುವಳಿಯಲ್ಲಿ ಸಾವಂತ್ರವ್ವ ಪತಿ ಬಸಪ್ಪ ಹಿತ್ತಲಮನಿ ಭಾಗವಹಿಸಿದ್ದರು. 1969ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಪಿಂಚಣಿ ಯೋಜನೆ ರೂಪಿಸಲಾಗಿತ್ತು. ಪಿಂಚಣಿ ಕೋರಿ ಅಗತ್ಯ ದಾಖಲೆಗಳೊಂದಿಗೆ ಬಸಪ್ಪ ರಾಜ್ಯ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. 1992ರ ಸೆಪ್ಟೆಂಬರ್‌ 10ರಂದು ಬಸಪ್ಪಗೆ ಪಿಂಚಣಿ ನೀಡಲು ಸರ್ಕಾರ ಆದೇಶಿಸಿತ್ತು. ಆದರೆ, ಮರುಪರಿಶೀಲನೆಯ ವೇಳೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಬಸಪ್ಪ ಅವರು ವಿಫಲರಾದ ಹಿನ್ನೆಲೆಯಲ್ಲಿ ಪಿಂಚಣಿ ಆದೇಶವನ್ನು 2000ರಲ್ಲಿ ಸರ್ಕಾರ ಸ್ಥಗಿತಗೊಳಿಸಿತ್ತು.

ಆ ಕ್ರಮ ಪ್ರಶ್ನಿಸಿ ಬಸಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಬಸಪ್ಪ ಮನವಿ ಪರಿಗಣಿಸಲು ಹೈಕೋರ್ಟ್ ಸೂಚಿಸಿದ್ದರೂ ಸಹ 2002ರಲ್ಲಿ ಸರ್ಕಾರ ಮತ್ತೆ ಪಿಂಚಣಿ ನಿರಾಕರಿಸಿತ್ತು. ಈ ನಡುವೆ 2003ರಲ್ಲಿ ಬಸಪ್ಪ ಸಾವನ್ನಪ್ಪಿದ್ದರು. ಇದಾದ 12 ವರ್ಷ ಬಳಿಕ ಅಂದರೆ 2014ರಲ್ಲಿ ಬಸಪ್ಪ ಪತ್ನಿ ಸಾವಂತ್ರವ್ವ ಪಿಂಚಣಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರೆಯು ಸಲ್ಲಿಸಿದ್ದ ಸಹಖೈದಿಗಳ ಪ್ರಮಾಣಪತ್ರವು ಸಹ ಆ ಸಹಕೈದಿಗಳ ಹೆಸರನ್ನು ಇದಾಗಲೇ ಕೇಂದ್ರ ಸರ್ಕಾರವು ಕಪ್ಪು ಪಟ್ಟಿಗೆ ಸೇರಿಸಿರುವುದರಿಂದ ಮಾನ್ಯವಾಗಲಿಲ್ಲ. ಹೀಗಾಗಿ ಹಲವು ಸುತ್ತಿನ ವ್ಯಾಜ್ಯಗಳ ಬಳಿಕ ಅಂತಿಮವಾಗಿ ಸಾವಂತ್ರವ್ವಗೆ ಪಿಂಚಣಿ ಮತ್ತು ಹಿಂಬಾಕಿ ಪಾವತಿಸುವಂತೆ 2021ರ ಸೆಪ್ಟೆಂಬರ್‌ 14ರಂದು ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿತ್ತು. ಅದನ್ನು ಸರ್ಕಾರ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿತ್ತು. ಇದೀಗ ವಿಭಾಗೀಯ ಪೀಠವು ಪಿಂಚಣಿ ರದ್ದು ಮಾಡಿದ್ದ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದೆ.

State of Karnataka Vs Savantrewwa.pdf
Preview