Justice NV Ramana
Justice NV Ramana 
ಸುದ್ದಿಗಳು

ನ್ಯಾಯಾಲಯಗಳಲ್ಲಿ ಹಲವು ವರ್ಷಗಳ ನಂತರವಷ್ಟೇ ನ್ಯಾಯ ದೊರೆಯುತ್ತದೆ ಎನ್ನುವ ಭಾವನೆ ಜನರಲ್ಲಿದೆ: ಸಿಜೆಐ ಎನ್‌ ವಿ ರಮಣ

Bar & Bench

ಸಾರ್ವಜನಿಕರಿಗೆ ನ್ಯಾಯಾಂಗದ ಮೇಲಿನ ನಂಬಿಕೆ ಕುಸಿಯದಿರಲು ಆದ್ಯತೆಯ ಮೇಲೆ ನ್ಯಾಯಾಧೀಶರ ನೇಮಕಾತಿಯನ್ನು ಕೈಗೊಳ್ಳಬೇಕಾದ ಅಗತ್ಯವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರು ಶುಕ್ರವಾರ ಒತ್ತಿ ಹೇಳಿದರು.

ಹೆಚ್ಚಿನ ಪ್ರಮಾಣದಲ್ಲಿ ಪ್ರಕರಣಗಳ ಬಾಕಿ ಉಳಿಕೆ ಹಾಗೂ ನ್ಯಾಯಾಧೀಶರ ಸಂಖ್ಯೆ ಕಡಿಮೆ ಇರುವುದರಿಂದ ಪ್ರಕರಣದ ದಾಖಲಿಸಿದ ಹಲವು ವರ್ಷಗಳ ನಂತರವಷ್ಟೇ ದಾವೆದಾರರು ನ್ಯಾಯದಾನ ಪಡೆಯಬಹುದು ಎನ್ನುವ ಅಭಿಪ್ರಾಯವಿದೆ ಎಂದು ಅವರು ಹೇಳಿದರು.

ತೆಲಂಗಾಣ ರಾಜ್ಯದ ಹೈದರಾಬಾದ್‌ನ ಗಛಿಬೊವ್ಲಿಯಲ್ಲಿ ನ್ಯಾಯಾಂಗ ಅಧಿಕಾರಿಗಳ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

"ಪ್ರಕರಣಗಳ ಬಾಕಿ ಸಂಖ್ಯೆಯು ಹೆಚ್ಚಿರುವುದು ಗೊತ್ತಿರುವ ಸಂಗತಿ. ಇದಕ್ಕೆ ಕಾರಣಗಳು ಹಲವು. ಒಮ್ಮೆ ನ್ಯಾಯಾಲಯಕ್ಕೆ ಹೋದರೆ ಅದರ ಫಲಿತಾಂಶ ದೊರೆಯಲು ಎಷ್ಟು ವರ್ಷ ಬೇಕಾದೀತೋ ಎನ್ನುವ ಭಾವನೆ ಇದೆ. ಎಲ್ಲಿಗೇ ಹೊದರೂ ಮೊದಲು ಕೇಳುವ ಪ್ರಶ್ನೆಯೇ 'ಪ್ರಕರಣವೊಂದನ್ನು ನಿರ್ಧರಿಸಲು ಎಷ್ಟು ದಿನ ಬೇಕಾಗುತ್ತದೆ?' ಎಂದು. ಇನ್ನು ಪ್ರಕರಣದ ಇತ್ಯರ್ಥದ ನಂತರ ಮೇಲ್ಮನವಿ ಸಲ್ಲಿಕೆಗೆ ಶ್ರೇಣೀಕೃತ ವ್ಯವಸ್ಥೆ ಇರುವುದರಿಂದ ಇದಕ್ಕೆ ಮತ್ತಷ್ಟು ಸಮಯ ತಗಲುತ್ತದೆ," ಎಂದು ಅವರು ವಿವರಿಸಿದರು.

ಎಲ್ಲಿಗೇ ಹೊದರೂ ಜನರು ಮೊದಲು ಕೇಳುವ ಪ್ರಶ್ನೆಯೇ 'ಪ್ರಕರಣವೊಂದನ್ನು ನಿರ್ಧರಿಸಲು ಎಷ್ಟು ದಿನ ಬೇಕಾಗುತ್ತದೆ?' ಎಂದು...
- ಸಿಜೆಐ ಎನ್‌ ವಿ ರಮಣ

"ಹೀಗಾಗಿ, ನಾವು ಎಷ್ಟು ಸಾಧ್ಯವೋ ಅಷ್ಟು ನ್ಯಾಯಾಧೀಶರ ನೇಮಕಾತಿಯನ್ನು ಮಾಡಬೇಕಿದೆ. ನಾನಂತೂ ಹೈಕೋರ್ಟ್‌ನಲ್ಲಿಯೇ ಅಗಲಿ, ಸುಪ್ರೀಂ ಕೋರ್ಟ್‌ನಲ್ಲಿಯೇ ಆಗಲಿ ಅಥವಾ ಜಿಲ್ಲಾ ನ್ಯಾಯಾಲಯಗಳಲ್ಲಿಯೇ ಆಗಲಿ ಒಂದು ಹುದ್ದೆಯನ್ನೂ ಖಾಲಿ ಇರಿಸಿಕೊಳ್ಳಲು ಬಯಸುವುದಿಲ್ಲ," ಎಂದು ಅವರು ಸ್ಪಷ್ಟಪಡಿಸಿದರು.

ನ್ಯಾಯದಾನವೆನ್ನುವುದು ಸಾಧ್ಯವಾಗುವುದು ನಾವು ಸಾಕಷ್ಟು ಸಂಖ್ಯೆಯಲ್ಲಿ ನ್ಯಾಯಾಲಯಗಳನ್ನು ನೀಡಿದಾಗ ಮಾತ್ರ. ಇದರೊಟ್ಟಿಗೆ ಮೂಲಸೌಕರ್ಯಗಳನ್ನೂ ಕಲ್ಪಿಸಬೇಕು. ಹಾಗಾದಲ್ಲಿ ಮಾತ್ರ ದಾವೆದಾರ ನ್ಯಾಯಕ್ಕಾಗಿ ನ್ಯಾಯಿಕ ಸಂಸ್ಥೆಗಳನ್ನು ಎಡತಾಕುತ್ತಾನೆ ಎಂದು ಅವರು ಹೇಳಿದರು. ಮುಂದುವರೆದು, "ನಮ್ಮ ನ್ಯಾಯಾಂಗವು ಅತಿಯಾದ ಭಾರಕ್ಕೆ ತುತ್ತಾಗಿದೆ. ಈ ಕುರಿತಾದ ಅಂಕಿ ಸಂಖ್ಯೆಗಳನ್ನು ನೀಡಿ ನಿಮ್ಮನ್ನು ಚಿಂತಿತರನ್ನಾಗಿಸುವ ಬಯಕೆ ನನಗಿಲ್ಲ," ಎಂದು ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಸಿಜೆಐ ಕನ್ನಡಿ ಹಿಡಿದರು.

ದೇಶದ ವಿವಿಧ ಭಾಗಗಳಲ್ಲಿ ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿಯು ನ್ಯಾಯಾಲಯಗಳ ಕುರಿತಾದ ವಿವರವಾದ ಸಮೀಕ್ಷೆಯೊಂದನ್ನು ಕೈಗೊಂಡಿತ್ತು. ಇದರಲ್ಲಿ ಮೂಲಸೌಕರ್ಯದ ಕೊರತೆ ಇರುವುದು ಢಾಳವಾಗಿ ಕಂಡುಬಂದಿದೆ. ಇದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಈ ವೇಳೆ ಅವರು ತಿಳಿಸಿದರು.