ಸುದ್ದಿಗಳು

ಎಸ್‌ಟಿಪಿ ಸ್ವಚ್ಛಗೊಳಿಸುವಾಗ ಜೀವಹಾನಿ: ಯಾಂತ್ರೀಕರಣಗೊಳಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

“ಎಸ್‌ಟಿಪಿ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರದ ನಿಲುವೇನು? ಶಾಸನಬದ್ಧ ಕಾರ್ಯವಿಧಾನ ಇದೆಯೇ? ಸರ್ಕಾರ ಇತ್ತ ತುರ್ತಾಗಿ ಗಮನಹರಿಸಬೇಕು. ಅನೇಕರು ಇದರಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ” ಎಂದು ಹೈಕೋರ್ಟ್‌ ಕಳಕಳಿ ವ್ಯಕ್ತಪಡಿಸಿದೆ.

Bar & Bench

ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಸ್ವಚ್ಛಗೊಳಿಸುವಾಗ ಹಲವು ಜನರು ಜೀವ ಕಳೆದುಕೊಳ್ಳುತ್ತಿದ್ದು, ಅವುಗಳ ಸ್ವಚ್ಛತೆಯನ್ನು ಯಾಂತ್ರಿಕರಣಗೊಳಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತುರ್ತಾಗಿ ಗಮನಹರಿಸಬೇಕಿದೆ ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಹೇಳಿದೆ.

ಮಲ ಹೊರುವ, ತ್ಯಾಜ್ಯ ನೀರು ಸಂಸ್ಕರಣಾ ಘಟಕ, ಚರಂಡಿ, ಮೋರಿ ಮತ್ತಿತರ ಸ್ಥಳಗಳ ಸ್ವಚ್ಛತೆಯಲ್ಲಿ ಪೌರಕಾರ್ಮಿಕರ ಬಳಕೆಯನ್ನು ನಿರ್ಬಂಧಿಸುವಂತೆ ಕೋರಿ ಅಖಿಲ ಭಾರತ ಕೇಂದ್ರೀಯ ಮಂಡಳಿ ವ್ಯಾಪಾರ ಒಕ್ಕೂಟದ ಕರ್ನಾಟಕ ಘಟಕ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್‌ ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠ ನಡೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲೆ ಮೈತ್ರೇಯಿ ಕೃಷ್ಣನ್‌ ಅವರು “ಮಲ ಹೊರುವ ಪದ್ಧತಿಯಲ್ಲಿ ನಿರತರಾಗಿರುವ ವ್ಯಕ್ತಿಗಳ ಪತ್ತೆ ಮತ್ತು ಅವರಿಗೆ ಪುನರ್ವಸತಿ ಕಲ್ಪಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಮಲ ಹೊಲ ಹೊರುವ ಪದ್ಧತಿ ನಿಷೇಧ ಸಂಬಂಧದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಇತ್ಯರ್ಥಪಡಿಸಿದೆ. ದುರದೃಷ್ಟಕರ ಎಂದರೆ ವಿಭಿನ್ನ ರೀತಿಯಲ್ಲಿ ಬೆಂಗಳೂರಿನಲ್ಲಿ ಇಂದಿಗೂ ಇದು ಚಾಲ್ತಿಯಲ್ಲಿದೆ. ಎಸ್‌ಟಿಪಿಯ ಸ್ವಚ್ಛತೆಗೆ ಮನುಷ್ಯರನ್ನು ಬಳಕೆ ಮಾಡಲಾಗುತ್ತಿದೆ. ಸ್ವಚ್ಛತೆಯ ಸಂದರ್ಭದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಾಕಷ್ಟು ಸಾವುಗಳು ಸಂಭವಿಸಿವೆ. ರಾಜ್ಯದಲ್ಲಿರುವ ಎಸ್‌ಟಿಪಿಗಳ ಸಮೀಕ್ಷೆ ನಡೆಸಿ, ಮಾರ್ಗಸೂಚಿ ರೂಪಿಸುವುದಾಗಿ ಸರ್ಕಾರ ಹೇಳಿದೆ. ಯಾವೆಲ್ಲಾ ಸುರಕ್ಷತಾ ಕ್ರಮಕೈಗೊಳ್ಳಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ಮಾರ್ಗಸೂಚಿಗಳಿಲ್ಲ. ಎಸ್‌ಟಿಪಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಏನು ಕ್ರಮಕೈಗೊಂಡಿದೆ ಎಂಬುದನ್ನು ತಿಳಿಸಬೇಕಿದೆ” ಎಂದರು.

“ಮಲ ಸ್ಬಚ್ಛತೆಯ ಸಂದರ್ಭದಲ್ಲಿ ಸಾವನ್ನಪ್ಪಿದರೆ ನೀಡಲಾಗುತ್ತಿದ್ದ ಪರಿಹಾರವನ್ನು 10ರಿಂದ 30 ಲಕ್ಷ ರೂಪಾಯಿಗೆ ಸುಪ್ರೀಂ ಕೋರ್ಟ್‌ ಹೆಚ್ಚಿಸಿದೆ. ಎಸ್‌ಟಿಪಿ ಸರ್ವೇಯನ್ನು ಸರ್ಕಾರ ನಡೆಸುತ್ತಿದೆ. ಈ ಸಂಬಂಧ ಸರ್ಕಾರ ವರದಿ ನೀಡಿದರೆ ಅದಕ್ಕೆ ಆಕ್ಷೇಪಣೆ ಸಲ್ಲಿಸಲಾಗುವುದು. ಎಸ್‌ಟಿಪಿ ಸ್ವಚ್ಛತೆಗೆ ನಿಯಂತ್ರಣ ಕ್ರಮಕೈಗೊಳ್ಳಬೇಕು. ಸುರಕ್ಷತೆ, ಮುಂಜಾಗ್ರತಾ ಕ್ರಮಗಳು ಏನು ಇರಬೇಕು ಎಂದು ಸರ್ಕಾರ ಹೇಳಬೇಕು. ಯಂತ್ರಗಳ ಮೂಲಕ ಎಸ್‌ಟಿಪಿ ಸ್ವಚ್ಛಗೊಳಿಸುವಂತಾಗಬೇಕು. ಸುರಕ್ಷತೆಗೆ ಆದ್ಯತೆ ನೀಡಬೇಕು. ನಿಗಾ ವ್ಯವಸ್ಥೆ ಬೇಕು. ಎಸ್‌ಟಿಪಿಗಳ ಮೇಲೆ ಯಾರು ನಿಗಾ ಇಡುತ್ತಿಲ್ಲ. ಬಿಬಿಎಂಪಿ, ಬೆಂಗಳೂರು ಜಲ ಮಂಡಳಿ ನಿಗಾ ಇಡುವುದಿಲ್ಲ. ಏಕೆಂದರೆ ಎಸ್‌ಟಿಪಿಗಳು ಖಾಸಗಿ ಸಂಸ್ಥೆಗಳಲ್ಲಿರುತ್ತವೆ ಎನ್ನುತ್ತದೆ” ಎಂದರು.

ವಿಚಾರಣೆಯ ಒಂದು ಹಂತದಲ್ಲಿ ಪೀಠವು “ಮಲ ಹೊರುವ ಪದ್ಧತಿ ಇಂದಿಗೂ ಇದೆಯೇ? ಸುಪ್ರೀಂ ಕೋರ್ಟ್‌ ಇದನ್ನು ಇತ್ಯರ್ಥಪಡಿಸಿದೆಯಲ್ಲಾ?” ಎಂದಿತು.

ಮುಂದುವರಿದು, “ಎಸ್‌ಟಿಪಿ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರದ ನಿಲುವೇನು? ಶಾಸನಬದ್ಧ ಕಾರ್ಯವಿಧಾನ ಇದೆಯೇ? ಸರ್ಕಾರ ಇತ್ತ ತುರ್ತಾಗಿ ಗಮನಹರಿಸಬೇಕು. ಹಲವು ಜನರು ಇದರಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ಯಾಂತ್ರೀಕರಣಗೊಳಿಸಬೇಕಿದೆ. ಎಸ್‌ಟಿಪಿಗಳು ಮಾಲಿನ್ಯ ನಿಯಂತ್ರಣ ಮಂಡಳಿ ಅಡಿ ಬರುತ್ತವೆಯೇ? ಅವರು ಯಾವ ಕಾರ್ಯ ವಿಧಾನ ರೂಪಿಸಿದ್ದಾರೆ?” ಎಂದು ಪ್ರಶ್ನಿಸಿತು.

ವಾದ-ಪ್ರತಿವಾದ ಆಲಿಸಿದ ಪೀಠವು ರಾಜ್ಯದಾದ್ಯಂತ ಇರುವ ಖಾಸಗಿ ಮತ್ತು ಸರ್ಕಾರಿ ಆಸ್ತಿಗಳಲ್ಲಿನ ಎಸ್‌ಟಿಪಿಗಳ ಸಮಗ್ರವಾದ ಸಮೀಕ್ಷೆ ನಡೆಸಬೇಕು ಮತ್ತು ಅವುಗಳನ್ನು ಯಾಂತ್ರಿಕವಾಗಿ ಸ್ವಚ್ಛಗೊಳಿಸಬೇಕು ಎಂಬುದನ್ನು ಖಾತರಿಪಡಿಸಬೇಕು. ಕೈಯಿಂದ ಎಸ್‌ಟಿಪಿ ಸ್ವಚ್ಛಗೊಳಿಸುವವರು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕೈಪಿಡಿ ರೂಪಿಸಬೇಕು ಎಂದು ಕೋರಿರುವ ಮೆಮೊಗೆ ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಬೇಕು ಎಂದು ನ್ಯಾಯಾಲಯವು ಅರ್ಜಿಯ ವಿಚಾರಣೆಯನ್ನು ಒಂದು ತಿಂಗಳು ಮುಂದೂಡಿತು.