Karnataka High Court 
ಸುದ್ದಿಗಳು

ಪೆರಿಫೆರಲ್ ವರ್ತುಲ ರಸ್ತೆ: ವರ್ಚುವಲ್ ಸಭೆ ಪ್ರಶ್ನಿಸಿ ಹೈಕೋರ್ಟ್ ಕದತಟ್ಟಿದ ಎನ್‌ಎಲ್‌ಯುಡಿ, ಜಿಂದಾಲ್ ವಿದ್ಯಾರ್ಥಿಗಳು

ಕೋವಿಡ್ ನಡುವೆಯೂ ಎಂಟು ಪಥದ ಪೆರಿಫೆರಲ್ ವರ್ತುಲ ರಸ್ತೆ ನಿರ್ಮಾಣ ಯೋಜನೆ ಕುರಿತಂತೆ ಆಗಸ್ಟ್ 18ರಂದು ಸಾರ್ವಜನಿಕ ಸಭೆ ನಡೆಸಲು ಆರಂಭದಲ್ಲಿ ಪ್ರಸ್ತಾಪಿಸಲಾಗಿತ್ತು. ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು.

Bar & Bench

ವರ್ಚುವಲ್ ವ್ಯವಸ್ಥೆಯ ಮೂಲಕ ಮಾತ್ರ ಪೆರಿಫೆರಲ್ ವರ್ತುಲ ರಸ್ತೆಯ ಪರಿಸರ ಪರಿಣಾಮ ಮೌಲ್ಯಮಾಪನ (ಇಐಎ)-ಸಾರ್ವಜನಿಕ ಸಮಾಲೋಚನಾ ಪ್ರಕ್ರಿಯೆ ನಡೆಸುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ನಿರ್ಧಾರವನ್ನು ಪ್ರಶ್ನಿಸಿ ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (ಎನ್‌ಎಲ್‌ಯು ದೆಹಲಿ) ಮತ್ತು ಜಿಂದಾಲ್ ಕಾನೂನು ಶಾಲೆಯ ವಿದ್ಯಾರ್ಥಿಗಳು ಜೆನಿಸಿಸ್ ಲಾ ಪಾರ್ಟನರ್‌ಗಳ ಮೂಲಕ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಬೆಂಗಳೂರಿನ ಹೊರ ವರ್ತುಲ ರಸ್ತೆಯ ಹೊರಗೆ ನಿರ್ಮಾಣಗೊಳ್ಳಲಿರುವ ಪೆರಿಫೆರಿಲ್ ವರ್ತುಲ ರಸ್ತೆಯು (ಪಿಆರ್‌ಆರ್‌) ಬೆಂಗಳೂರು ನಗರದ ಬಹುತೇಕ ಪರಿಧಿಯ ಸುತ್ತ ನಿರ್ಮಾಣವಾಗಲಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ವಿವರಿಸಲಾಗಿದೆ. ಬೆಂಗಳೂರು ನಗರದ ಟ್ರಾಫಿಕ್, ಅಂತರ ನಗರ ಸಂಪರ್ಕ ಮತ್ತು ಮಾಲಿನ್ಯ ಇತ್ಯಾದಿ ಸಮಸ್ಯೆಗಳನ್ನು ನಿಯಂತ್ರಿಸುವ ಉದ್ದೇಶದಿಂದ 65 ಕಿ.ಮೀ. ಉದ್ದದ ರಸ್ತೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಲಿದೆ.

ಕೋವಿಡ್ ನಡುವೆಯೂ ಎಂಟು ಪಥದ ಪೆರಿಫಿರಲ್ ವರ್ತುಲ ರಸ್ತೆ ನಿರ್ಮಾಣ ಯೋಜನೆ ಕುರಿತಂತೆ ಆಗಸ್ಟ್ 18ರಂದು ಸಾರ್ವಜನಿಕ ಸಮಾಲೋಚನಾ ಸಭೆ ನಡೆಸಲು ಆರಂಭದಲ್ಲಿ ಬಿಡಿಎ ಪ್ರಸ್ತಾಪಿಸಿತ್ತು. ವ್ಯಾಪಕ ಸಾರ್ವಜನಿಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಇದರ ಬೆನ್ನಿಗೆ, ಆಗಸ್ಟ್ 31ರಂದು ಕೆಎಸ್‌ಪಿಸಿಬಿಯು ಅಧಿಸೂಚನೆ ಹೊರಡಿಸಿದ್ದು, ಪರಿಸರ ಕುರಿತಾದ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಬಿಡಿಎ ಜೂಮ್ ಅಪ್ಲಿಕೇಶನ್ ಮೂಲಕ ಸೆಪ್ಟೆಂಬರ್ 23ರಂದು ನಡೆಸಲು ಉದ್ದೇಶಿದೆ ಎಂದು ಹೇಳಿದೆ. ಕೆಎಸ್‌ಪಿಸಿಬಿಯ ಅಧಿಸೂಚನೆಯ ಕುರಿತು ಗಂಭೀರ ವಿಚಾರಗಳನ್ನೊಳಗೊಂಡ ವಿಸ್ತೃತ ಮತ್ತು ಸಮಗ್ರವಾದ ಅಹವಾಲುಗಳನ್ನು ಮಂಡಳಿಗೆ ಸಲ್ಲಿಸಲಾಗಿತ್ತು. ಈ ಸಂಬಂಧ ಹಲವು ಬಾರಿ ಮಂಡಳಿಗೆ ನೆನಪಿಸಲಾಗಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಈ ಪ್ರಾಂತ್ಯದಲ್ಲಿ ಉದ್ದೇಶಿತ ಯೋಜನೆಯಿಂದ ಹಲವು ಗ್ರಾಮೀಣ ಮತ್ತು ನಗರದ ಸಮುದಾಯಗಳು ಹಾಗೂ ಜೀವವೈವಿಧ್ಯಕ್ಕೆ ಹಾನಿಯಾಗಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. “ಈ ನಿರ್ದಿಷ್ಟ ವಿಶೇಷ ಯೋಜನೆಗೆ ನಡೆಸಲಾದ ಕ್ಷಿಪ್ರ ಇಐಎ ವರದಿಯಲ್ಲಿ 63 ಹಳ್ಳಿಗಳು ಮತ್ತು ವಾಸಸ್ಥಳಗಳಿಗೆ ಯೋಜನೆಯಿಂದ ನೇರವಾಗಿ ಸಮಸ್ಯೆಯಾಲಿದೆ” ಎಂದು ಹೇಳಲಾಗಿದೆ.

“ಬಾಧಿತರ ಸಾಮಾಜಿಕ ಪರಿಸ್ಥಿತಿಯಿಂದ ಹೊರತಾಗಿ ಕಾನೂನನ್ನು ಅರ್ಥೈಸಲಾಗದು. ಕಾನೂನಿನಿಂದ ಸಂತ್ರಸ್ತರಾಗುವವರ ಅನುಭವವನ್ನು ಊಹಿಸುವುದಕ್ಕಿಂತ ಬಾಧಿತರಾಗುವವರೇ ಕಾನೂನು ರಚನೆಯ ಭಾಗವಾಗಬೇಕು… ಈ ಅಧಿಸೂಚನೆಯ ಪ್ರಕಾರ ಸಭೆಯಲ್ಲಿ ಪಾಲ್ಗೊಳ್ಳಲು ಇಂಟರ್‌ನೆಟ್ ಸೌಲಭ್ಯ ಬೇಕು. ಇದರಿಂದ ಹಲವು ಅಲ್ಪಸಂಖ್ಯಾತ ಸಮುದಾಗಳು ಕಾನೂನು ರಚನೆಯ ಪ್ರಕ್ರಿಯೆಯಿಂದ ಹೊರಗುಳಿಯಲಿದ್ದು, ಹೊರಗಿನವರು ಎಂದು ಬದಿಗೆ ಸರಿಸುವ ಸಾಧ್ಯತೆ ಇರುತ್ತದೆ. ಇದರಿಂದ ಭಾರತದಲ್ಲಿ ಸಾಮಾಜಿಕ ಸಮಾನತೆ ಸಾಧಿಸುವುದು ಸಾಧ್ಯವಾಗುವುದಿಲ್ಲ.”
ಅರ್ಜಿದಾರರು

ಅರ್ಜಿದಾರರ ಮನವಿ ಇಂತಿವೆ:

  • ಸೆಪ್ಟೆಂಬರ್ 23ರಂದು ನಡೆಸಲು ಉದ್ದೇಶಿಸಿರುವ ಆನ್‌ಲೈನ್ ಸಾರ್ವಜನಿಕ ಸಭೆ ನಡೆಸುವ ಆಗಸ್ಟ್ 31ರ ಕೆಎಸ್‌ಪಿಸಿಬಿ ಆದೇಶವನ್ನು ವಜಾಗೊಳಿಸಬೇಕು.

  • ವರ್ಚುವಲ್ ಸಭೆಯ ಜೊತೆಗೆ ಸುರಕ್ಷಿತ ಮತ್ತು ಸರಿಯಾದ ಸಂದರ್ಭದಲ್ಲಿ ವಿಷಯಕ್ಕೆ ಸಂಬಂಧಿಸಿದ ಎಲ್ಲರನ್ನೂ ಒಳಗೊಳ್ಳುವ ಭೌತಿಕ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ನಡೆಸಲು ಸಂಬಂಧಪಟ್ಟವರಿಗೆ ನಿರ್ದೇಶಿಸಬೇಕು.

  • ಆನ್‌ಲೈನ್ ಸಮಾಲೋಚನಾ ಸಭೆ ನಡೆಸುವುದಕ್ಕೂ ಮುನ್ನ ಬಾಧಿತರಿಗೆಗೆ ವರ್ಚುವಲ್ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಲು ಅಗತ್ಯವಾದ ಸೌಲಭ್ಯ ಕಲ್ಪಿಸಬೇಕು.

  • ಸದ್ಯಕ್ಕೆ ಆಗಸ್ಟ್ 31ರ ಕೆಎಸ್‌ಪಿಸಿಬಿ ಆದೇಶಕ್ಕೆ ಮಧ್ಯಂತರ ಪರಿಹಾರ ನೀಡಬೇಕು.