2010ರ ವಿದೇಶಿ ದೇಣಿಗೆ (ನಿಯಂತ್ರಣ) ಕಾಯಿದೆ (ಎಫ್‌ಸಿಆರ್‌ಎ) ಅಡಿಯಲ್ಲಿ ಶಾಶ್ವತ ನೋಂದಣಿ ಮಾಡಿಸಿಕೊಂಡವರು ವಿದೇಶಿ ದೇಣಿಗೆ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ವ್ಯಕ್ತಿ ಅಥವಾ ಸಂಸ್ಥೆಯ ಪರವಾಗಿ ಯಾವುದೇ ಹಕ್ಕು ಚಲಾಯಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಮಾನಸ ಸೆಂಟರ್ ಫಾರ್ ಡೆವಲಪ್‌ಮೆಂಟ್ ಅಂಡ್ ಸೋಶಿಯಲ್ ಆಕ್ಷನ್ ಮತ್ತು ಡೆವಲಪ್‌ಮೆಂಟ್ ಕ್ರೆಡಿಟ್ ಬ್ಯಾಂಕ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರ ನಡುವಣ ಪ್ರಕರಣ].
ವಿದೇಶಿ ಮೂಲಗಳಿಂದ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವುದು ಸದಾ ಕೇಂದ್ರ ಗೃಹ ಸಚಿವಾಲಯದ ಅನುಮತಿಗೆ ಒಳಪಟ್ಟಿರುತ್ತದೆ ಎಂದು ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ತಿಳಿಸಿದರು.
"ಎಫ್‌ಸಿಆರ್‌ಎ- 2010ರ ಅಡಿಯಲ್ಲಿ ಶಾಶ್ವತ ನೋಂದಣಿ ಹೊಂದಿದ್ದ ಮಾತ್ರಕ್ಕೆ ಅರ್ಜಿದಾರರಿಗೆ ಗೊತ್ತುಪಡಿಸಿದ ಉಳಿತಾಯ ಬ್ಯಾಂಕ್ ಖಾತೆಗೆ ಮೊತ್ತ ಪಡೆಯಲು ಅನುಮತಿ ದೊರೆಯುವುದಿಲ್ಲ, ಇದು ಯಾವಾಗಲೂ ಗೃಹ ವ್ಯವಹಾರಗಳ ಸಚಿವಾಲಯದ ಪರಿಶೀಲನೆಗೆ ಒಳಪಟ್ಟಿರುತ್ತದೆ" ಎಂದು ನ್ಯಾಯಾಲಯ ವಿವರಿಸಿತು.
ಅಧಿಕಾರಿಗಳು ಕ್ಷೇತ್ರ ಅಥವಾ ಭದ್ರತಾ ಸಂಸ್ಥೆಗಳಿಂದ ಸ್ವೀಕರಿಸಿದ ಪ್ರತಿಕ್ರಿಯೆ ಅಥವಾ ಮಾಹಿತಿ ಆಧಾರದ ಮೇಲೆ ವಿದೇಶಿ ದಾನಿಯನ್ನು 'ಪೂರ್ವ ಉಲ್ಲೇಖ/ಅನುಮತಿ ವರ್ಗ'ಕ್ಕೆ ಸೇರಿಸುವ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ಭಾರತ ಸರ್ಕಾರದ ಪತ್ರವನ್ನು ನ್ಯಾಯಾಲಯ ಗಮನಿಸಿತು.
2013ರಲ್ಲಿ ಡೆವಲಪ್‌ಮೆಂಟ್ ಕ್ರೆಡಿಟ್ ಬ್ಯಾಂಕ್‌ನಲ್ಲಿ ಬಾಕಿ ಉಳಿದಿರುವ ಹಣವನ್ನು ಬಿಡುಗಡೆ ಮಾಡುವಂತೆ ಕೋರಿ ಬೆಂಗಳೂರು ಮೂಲದ ನೋಂದಾಯಿತ ಸಂಸ್ಥೆಯಾದ ಮಾನಸ ಸೆಂಟರ್ ಫಾರ್ ಡೆವಲಪ್‌ಮೆಂಟ್ ಅಂಡ್ ಸೋಶಿಯಲ್ ಆಕ್ಷನ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪಿನಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಬ್ಯಾಂಕ್ ತನ್ನ ಖಾತೆಯಲ್ಲಿ ಸಾಕಷ್ಟು ಹಣವಿದ್ದರೂ ಹಣವಿಲ್ಲ ಎಂದು ಉಲ್ಲೇಖಿಸಿ ಚೆಕ್ ನಿರಾಕರಿಸಿದೆ ಎಂದು ʼಮಾನಸʼ ದೂರಿತ್ತು.
ಇತ್ತ ಬ್ಯಾಂಕ್ “₹ 29 ಲಕ್ಷಕ್ಕೂ ಹೆಚ್ಚಿನ ಮೊತ್ತಕ್ಕೆ ಅನುಮತಿ ನೀಡುತ್ತಿಲ್ಲ. ವಿದೇಶಿ ಸಂಸ್ಥೆಯಾದ ‘ಡಾನ್ ಚರ್ಚ್ ಏಡ್ʼನಿಂದ ಸ್ವೀಕರಿಸುವ ಯಾವುದೇ ಹಣಕ್ಕೆ ಗೃಹ ಸಚಿವಾಲಯದಿಂದ ಒಪ್ಪಿಗೆ ಪಡೆದ ನಂತರವೇ ಆ ಹಣವನ್ನು ಖಾತೆಗೆ ಜಮಾ ಮಾಡಬಹುದಾಗಿದೆ ಎಂದು ತಿಳಿಸಿತ್ತು. ಆದರೆ, ಖಾತೆಯಲ್ಲಿ ಬೇರೆ ಸಂಸ್ಥೆಗಳ ಹಣ ಕೂಡ ಇದೆ ಎಂದು ಮಾನಸ ಹೇಳಿಕೊಂಡಿತ್ತು.
ʼಭಾರತದಲ್ಲಿ ಯಾವುದೇ ವ್ಯಕ್ತಿ ಅಥವಾ ಘಟಕಕ್ಕೆ ಡಾನ್ ಚರ್ಚ್ ಏಡ್‌ನಿಂದ ಹಣದ ಬರುತ್ತಿದ್ದರೆ ಅದಕ್ಕೆ ಅನುಮತಿ ನೀಡುವ ಮೊದಲು ತನ್ನ ಗಮನಕ್ಕೆ ತರಬೇಕು ಎಂದು ಗೃಹ ಸಚಿವಾಲಯ ಬರೆದಿದ್ದ ಪತ್ರ ಆಧರಿಸಿ 2013ರಲ್ಲಿ, ಬ್ಯಾಂಕುಗಳಿಗೆ ಆರ್‌ಬಿಐ ಸೂಚನೆ ನೀಡಿತ್ತು ಎಂಬುದನ್ನು ನ್ಯಾಯಾಲಯ ಗಮನಿಸಿತು.
ಬೆಂಗಳೂರಿನ ತನ್ನ ಖಾತೆಗೆ 'ಡಾನ್ ಚರ್ಚ್ ಏಡ್'ನಿಂದ ಮಾನಸ ಎರಡು ಬಾರಿ ಹಣ ಪಡೆದಿತ್ತು, ಈ ಹಿನ್ನೆಲೆಯಲ್ಲಿ ಡೆವಲಪ್‌ಮೆಂಟ್ ಕ್ರೆಡಿಟ್ ಬ್ಯಾಂಕ್ ಎಂಎಚ್‌ಎಯಿಂದ ಒಪ್ಪಿಗೆ ಕೋರಿತ್ತು. ಆದರೆ ಆದೇಶದ ಪ್ರಕಾರ ಮಾನಸ ಖಾತೆಗೆ ವಿದೇಶಿ ದೇಣಿಗೆ ಜಮಾ ಮಾಡದಂತೆ ಬ್ಯಾಂಕ್‌ಗೆ ತಿಳಿಸಲಾಗಿತ್ತು.
2013ರ ಅಕ್ಟೋಬರ್ 31ರಂದು ಬರೆದ ಪತ್ರದಲ್ಲಿ ಎಂಎಚ್‌ಎ, ಸಚಿವಾಲಯದ ಒಪ್ಪಿಗೆ ಇಲ್ಲದೆ 'ಡಾನ್ ಚರ್ಚ್ ಏಡ್' ನಿಂದ ಪಡೆದ ಮೊತ್ತವನ್ನು ಖಾತೆಗೆ ಜಮಾ ಮಾಡದಂತೆ ಬ್ಯಾಂಕ್‌ಗೆ ಸ್ಪಷ್ಟವಾಗಿ ಸೂಚಿಸಿರುವುದರಿಂದ, ಹಣ ಪಡೆಯಲು ಮಾನಸಗೆ ಅರ್ಹತೆ ಇಲ್ಲ ಎಂದ ನ್ಯಾಯಾಲಯ ಅರ್ಜಿಗೆ ಅರ್ಹತೆಯ ಕೊರತೆ ಇದೆ ಎಂದು ತಿಳಿಸಿ ಅದನ್ನು ವಜಾಗೊಳಿಸಿತು.
ಮಾನಸ ಸೆಂಟರ್ ಫಾರ್ ಡೆವಲಪ್‌ಮೆಂಟ್ ಅಂಡ್ ಸೋಶಿಯಲ್ ಆಕ್ಷನ್ ಅನ್ನು ವಕೀಲ ಸಿ ಜಿ ಮಲಾಯಿಲ್ ಪ್ರತಿನಿಧಿಸಿದ್ದರು. ಡೆವಲಪ್‌ಮೆಂಟ್ ಕ್ರೆಡಿಟ್ ಬ್ಯಾಂಕ್ ಪರವಾಗಿ ವಕೀಲ ವಿ ಎಲ್ ಶ್ರೀನಾಥ್ ವಾದ ಮಂಡಿಸಿದ್ದರು. ಉಪ ಸಾಲಿಸಿಟರ್ ಜನರಲ್ ಶಾಂತಿ ಭೂಷಣ್ ಅವರು ಕೇಂದ್ರ ಗೃಹ ಸಚಿವಾಲಯವನ್ನು ಪ್ರತಿನಿಧಿಸಿದ್ದರು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]