Karnataka High Court
Karnataka High Court 
ಸುದ್ದಿಗಳು

ಪ್ರೊಬೇಷನರಿ ಅವಧಿ ಮುಗಿದಾಗ ಸೇವೆ ಕಾಯಂ ಮಾಡಲು ಉದ್ಯೋಗದಾತರ ಪ್ರತ್ಯೇಕ ಆದೇಶ ಅಗತ್ಯ: ಹೈಕೋರ್ಟ್‌

Bar & Bench

“ಯಾವುದೇ ವ್ಯಕ್ತಿ ಉದ್ಯೋಗಕ್ಕೆ ಸೇರಿದಾಗ ಪ್ರೊಬೇಷನರಿ ಅವಧಿ ಮುಗಿದ ಬಳಿಕ ಉದ್ಯೋಗದಾತ ಸಂಸ್ಥೆ ಸೇವೆ ಕಾಯಂ ಆದೇಶ ಹೊರಡಿಸಿದರೆ ಮಾತ್ರ ಕಾಯಂ ಆಗುತ್ತದೆ” ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಮಡಿಕೇರಿಯ ವಿರಾಜಪೇಟೆಯ ನ್ಯಾಯಾಲಯದಲ್ಲಿ ಸ್ಟೇನೋಗ್ರಾಫರ್ ಆಗಿದ್ದ ಮಹಿಳೆ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

“ಉದ್ಯೋಗಿಯ ಪ್ರೊಬೇಷನರಿ ಅವಧಿ ಮುಗಿದ ಬಳಿಕ ಸೇವೆಯಲ್ಲಿ ಮುಂದುವರಿಯಬಹುದು. ಆದರೆ, ಅವರ ಸೇವೆ ಸಹಜವಾಗಿಯೇ ಕಾಯಂ ಆಗುವುದಿಲ್ಲ. ಸೇವೆ ಕಾಯಂ ಆಗಬೇಕಾದರೆ ಅದಕ್ಕೆ ಉದ್ಯೋಗ ನೀಡುವ ಸಂಸ್ಥೆ ಪ್ರತ್ಯೇಕ ಆದೇಶ ಹೊರಡಿಸಬೇಕು. ಏಕೆಂದರೆ ನಿಯಮಗಳಲ್ಲಿ ಪ್ರೊಬೇಷನರಿ ಅವಧಿ ಮುಗಿದ ಬಳಿಕ ಸಹಜವಾಗಿಯೇ ಸೇವೆ ಕಾಯಂ ಆಗುತ್ತದೆ ಎಂದು ಉಲ್ಲೇಖಿಸಿಲ್ಲ” ಎಂದು ಪೀಠ ಹೇಳಿದೆ.

“ಉದ್ಯೋಗಿಯನ್ನು ಪ್ರೊಬೇಷನರಿಯಲ್ಲಿಡುವುದಕ್ಕೆ ಎರಡು ಕಾರಣಗಳಿವೆ. ಒಂದು ಉದ್ಯೋಗಿ ಆ ಹುದ್ದೆಗೆ ಸೂಕ್ತ ಹೌದೇ ಅಥವಾ ಇಲ್ಲವೇ ಎಂಬುದನ್ನು ಮೌಲ್ಯಮಾಪನ ಮಾಡಲು; ಎರಡು ಉದ್ಯೋಗಿ ಕೂಡ ತಾನು ಆ ಹುದ್ದೆಗೆ ಸೂಕ್ತನೇ ಎಂಬುದನ್ನು ಪರಿಶೀಲಿಸಿಕೊಳ್ಳಲು. ಪ್ರೊಬೇಷನರಿ ಅವಧಿಯಲ್ಲಿ ಇಬ್ಬರಿಗೂ ಆಯ್ಕೆಗಳಿರುತ್ತವೆ” ಎಂದು ಆದೇಶಿಸಿದೆ.

“ಅರ್ಜಿದಾರರ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ನ್ಯಾಯಾಲಯವು ನಿಯಮದಂತೆ ಪ್ರೊಬೇಷನರಿ ಅವಧಿಯ ಸೇವಾ ನಿಯಮಗಳ ವಿಚಾರದಲ್ಲಿ ಈಗಾಗಲೇ ಹಲವು ನ್ಯಾಯಾಲಯಗಳು ಸ್ಪಷ್ಟ ತೀರ್ಪು ನೀಡಿವೆ. ಅದನ್ನು ಪಾಲನೆ ಮಾಡಬೇಕು. ಈ ವಿಚಾರದಲ್ಲಿ ಅರ್ಜಿದಾರರ ಪ್ರೊಬೇಷನರಿ ಅವಧಿ ಮುಗಿದಿದ್ದರೂ ಸೇವೆಯಲ್ಲಿ ಮುಂದುವರಿದಿದ್ದಾರೆ. ಆದರೆ, ಅವರ ಸೇವೆ ಕಾಯಂ ಆದೇಶ ಹೊರಡಿಸಿಲ್ಲ. ಹಾಗಾಗಿ ಅವರ ಸೇವೆ ಸಹಜವಾಗಿಯೇ ಕಾಯಂ ಆಗಿದೆ ಎಂದು ಹಕ್ಕು ಮಂಡಿಸಲಾಗದು” ಎಂದು ಸ್ಪಷ್ಟಪಡಿಸಿದೆ.

ಅರ್ಜಿದಾರರ ಪರ ವಕೀಲರು, ತಮ್ಮ ಕಕ್ಷಿದಾರರರು ಇಲಾಖಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರೂ ಸಹ ಸೇವೆಯಿಂದ ವಜಾಗೊಳಿಸಿರುವ ಆದೇಶ ಹೊರಡಿಸಿರುವುದು ನಿಯಮ ಬಾಹಿರವಾಗಿದೆ ಎಂದು ವಾದಿಸಿದ್ದರು.