ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯ ಮೂಲಕ ಕಲ್ಪಿಸಲಾಗಿದ್ದ ವಿಶೇಷ ಮಾನ್ಯತೆ ರದ್ದುಪಡಿಸಿದ್ದನ್ನು ಟೀಕಿಸಿದ್ದಕ್ಕೆ ಮತ್ತು ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ಶುಭಾಶಯ ಕೋರಿದ್ದಕ್ಕೆ ಕಾಲೇಜಿನ ಪ್ರಾಧ್ಯಾಪಕರೊಬ್ಬರ ವಿರುದ್ಧ ದಾಖಲಿಸಿದ್ದ ದ್ವೇಷ ಭಾಷಣ ಪ್ರಕರಣವನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾ ಮಾಡಿದೆ.
ಸಂವಿಧಾನದ 19ನೇ ವಿಧಿಯಡಿ ಪ್ರತಿಯೊಬ್ಬ ಪ್ರಜೆಗೂ ವಾಕ್ ಸ್ವಾತಂತ್ರ್ಯವು ಮೂಲಭೂತ ಹಕ್ಕಾಗಿದ್ದು, ಬೇರೆ ದೇಶಗಳ ಸ್ವಾತಂತ್ರ್ಯ ದಿನದಂದು ಶುಭಾಯಶ ಕೋರಬಹುದು. ಅದು ಐಪಿಸಿ ಸೆಕ್ಷನ್ ಅಡಿ ಅಪರಾಧವಾಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ್ ಓಕ್ ಮತ್ತು ಉಜ್ಜಲ್ ಭುಯಾನ್ ಅವರ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.
“ಪಾಕಿಸ್ತಾನದ ಸ್ವಾತಂತ್ರ್ಯ ದಿನವಾದ ಆಗಸ್ಟ್ 14ರಂದು ಅವರಿಗೆ ಭಾರತೀಯ ಪ್ರಜೆ ಶುಭಾಶಯ ಕೋರಿದರೆ ಅದರಲ್ಲಿ ತಪ್ಪೇನಿಲ್ಲ. ಅದು ಸದ್ಭಾವನೆಯ ಸಂಕೇತ. ಮೇಲ್ಮನವಿದಾರರು ನಿರ್ದಿಷ್ಟ ಧರ್ಮಕ್ಕೆ ಸೇರಿದ್ದಾರೆ ಎಂದು ಉದ್ದೇಶ ಆರೋಪಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯ ಮೂಲಕ ಕಲ್ಪಿಸಿದ್ದ ವಿಶೇಷ ಸ್ಥಾನಮಾನ ರದ್ದತಿಗೆ ಸಂಬಂಧಿಸಿದಂತೆ ಸರ್ಕಾರದ ಪ್ರತಿಯೊಂದು ಕ್ರಮ ಟೀಕಿಸುವುದು ಐಪಿಸಿ ಸೆಕ್ಷನ್ 153ಎ ಅಡಿ ಅಪರಾಧವಾಗದು ಎಂದು ನ್ಯಾಯಾಲಯ ಹೇಳಿದೆ.
“370ನೇ ವಿಧಿ ವಿರೋಧಿಸಿ ಮೇಲ್ಮನವಿದಾರರು ಸಾಮಾನ್ಯ ಪ್ರತಿಭಟನೆ ನಡೆಸಿದ್ದಾರೆ. ಸಂವಿಧಾನವು 19(1)(ಎ) ಮೂಲಕ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಖಾತರಿಪಡಿಸಿದೆ. ಇದರ ಅಡಿ 370ನೇ ವಿಧಿ ರದ್ದತಿ ಕುರಿತ ಸರ್ಕಾರದ ನಿರ್ಧಾರ ಟೀಕಿಸಲು ಪ್ರತಿಯೊಬ್ಬ ವ್ಯಕ್ತಿಗೂ ಹಕ್ಕಿದೆ. ಸರ್ಕಾರದ ನಿರ್ಧಾರದಿಂದ ತನಗೆ ಬೇಸರವಾಗಿದೆ ಎಂದು ಹೇಳಲು ಅವರಿಗೆ ಹಕ್ಕಿದೆ” ಎಂದು ನ್ಯಾಯಾಲಯ ಹೇಳಿದೆ.
“ಸಂವಿಧಾನದ 19(1)(ಎ) ಅಡಿ ಕಲ್ಪಿಸಲಾಗಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಅದರ ಮೇಲಿನ ಸಕಾರಣದ ನಿರ್ಬಂಧ ಕುರಿತು ಪೊಲೀಸರಲ್ಲಿ ಅರಿವು ಮೂಡಿಸಲು ಇದು ಸಕಾಲವಾಗಿದೆ. ಸಂವಿಧಾನದಡಿ ಪ್ರಜಾಸತ್ತಾತ್ಮಕ ಮೌಲ್ಯಗಳ ಕುರಿತು ಪೊಲೀಸರಿಗೆ ಅರಿವು ಮೂಡಿಸಬೇಕಿದೆ” ಎಂದು ನ್ಯಾಯಾಲಯ ಹೇಳಿದೆ.
“ನಮ್ಮ ದೇಶವು 75 ವರ್ಷಗಳಿಂದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿದೆ. ನಮ್ಮ ಜನರಿಗೆ ಪ್ರಜಾಸತ್ತಾತ್ಮಕ ಮೌಲ್ಯಗಳ ಮಹತ್ವದ ಬಗ್ಗೆ ಅರಿವಿದೆ. ಹೀಗಾಗಿ, ಬಳಕೆ ಮಾಡಿರುವ ಪದಗಳು ಅಶಾಂತಿ ಅಥವಾ ಎರಡು ಸಮುದಾಯಗಳ ನಡುವೆ ದ್ವೇಷ ಬಿತ್ತಲಿದೆ ಎಂದು ಹೇಳಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರು ಮಹಾರಾಷ್ಟ್ರದ ಕೊಲ್ಹಾಪುರದ ಸಂಜಯ್ ಘೋದವತ್ ಕಾಲೇಜಿನ ಪ್ರಾಧ್ಯಾಪಕರಾಗಿದ್ದು, ಉದ್ಯೋಗ ಅರಸಿ ಅವರು ಕೊಲ್ಹಾಪುರಕ್ಕೆ ಬಂದಿದ್ದರು. ಇದಕ್ಕೂ ಮುನ್ನ ಅವರು ಕಾಶ್ಮೀರದ ಬಾರಮುಲ್ಲಾದ ಕಾಯಂ ನಿವಾಸಿಯಾಗಿದ್ದರು.