ಯಾವುದೇ ವ್ಯಕ್ತಿ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರಗೊಂಡ ಬಳಿಕ ತನ್ನ ಹಿಂದಿನ ಧರ್ಮದಲ್ಲಿನ ಜಾತಿಯಾಧಾರಿತವಾದ ಮೀಸಲಾತಿ ಸವಲತ್ತು ಪಡೆಯಲಾಗದು ಎಂದು ಮದ್ರಾಸ್ ಹೈಕೋರ್ಟ್ ಈಚೆಗೆ ಹೇಳಿದ್ದು, ಮತಾಂತರಗೊಂಡ ಬಳಿಕ ಆ ವ್ಯಕ್ತಿಯು ಹುಟ್ಟಿನಿಂದ ಬಂದಿದ್ದ ಜಾತಿ ಅಥವಾ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ ಎಂದಿದೆ [ಯು ಅಕ್ಬರ್ ಅಲಿ ವರ್ಸಸ್ ತಮಿಳುನಾಡು ಮತ್ತು ಇತರರು].
ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡಿದ್ದ ವ್ಯಕ್ತಿಯು, ಹುಟ್ಟಿನಿಂದ ಬಂದಿದ್ದ ಸಮುದಾಯದ ಅಡಿ ಮೀಸಲಾತಿ ಸೌಲಭ್ಯ ಕಲ್ಪಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಿ ಆರ್ ಸ್ವಾಮಿನಾಥನ್ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.
ಜಾತಿ ವ್ಯವಸ್ಥೆಯನ್ನು ಪರಿಗಣಿಸದ ಧರ್ಮಕ್ಕೆ ಹಿಂದೂ ವ್ಯಕ್ತಿಯು ಮತಾಂತರಗೊಂಡರೆ, ಆ ವ್ಯಕ್ತಿಯು ತಾನು ಹುಟ್ಟಿದ ಜಾತಿಗೆ ಸೇರುವ ಅವಕಾಶ ಕಳೆದುಕೊಳ್ಳಲಿದ್ದಾನೆ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯದ ಹಲವು ತೀರ್ಪುಗಳನ್ನು ಪೀಠವು ಉಲ್ಲೇಖಿಸಿದೆ.
“ಹಿಂದೂ ಸಮುದಾಯದ ವ್ಯಕ್ತಿ ಯಾವ ಜಾತಿಗೆ ಸೇರಿದವರು ಎಂಬುದನ್ನು ಅವರ ಹುಟ್ಟು ನಿರ್ಧರಿಸುತ್ತದೆ. ಹಿಂದೂ ವ್ಯಕ್ತಿಯೊಬ್ಬರು ಜಾತಿ ವ್ಯವಸ್ಥೆಯನ್ನು ಗುರುತಿಸದ ಇಸ್ಲಾಂ ಅಥವಾ ಕ್ರಿಶ್ಚಿಯನ್ ಅಥವಾ ಬೇರಾವುದೇ ಧರ್ಮಕ್ಕೆ ಮತಾಂತರಗೊಂಡರೆ ಅದು ಆ ವ್ಯಕ್ತಿಯ ಮೂಲ ಜಾತಿ ಕಳೆದುಕೊಳ್ಳುವುದಕ್ಕೆ ಸಮನಾಗಲಿದೆ. ಇಂತಹ ಧರ್ಮಗಳಿಗೆ ಮತಾಂತರದ ಬಳಿಕ ಆ ವ್ಯಕ್ತಿಯ ಮೂಲ ಜಾತಿಯು ಮರೆಯಾಗಲಿದ್ದು, ವ್ಯಕ್ತಿಯು ಮೂಲ ಧರ್ಮಕ್ಕೆ ಮರುಮತಾಂತರಗೊಂಡ ಬಳಿಕ ಅದು ಮತ್ತೆ ಮರಳಲಿದ್ದು, ಆ ವ್ಯಕ್ತಿಯ ಜಾತಿ ಮರು ಸ್ಥಾಪನೆಗೊಳ್ಳಲಿದೆ” ಎಂದು ಕೈಲಾಶ್ ಸೋನ್ಕರ್ ವರ್ಸಸ್ ಮಾಯಾ ದೇವಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಪೀಠವು ಆಧರಿಸಿದೆ.
“ಮತಾಂತರಗೊಂಡ ಬಳಿಕವೂ ತಾನು ಹಿಂದೆ ಇದ್ದ ಸಮುದಾಯ ಅಥವಾ ಜಾತಿಗೆ ದೊರೆಯುತ್ತಿದ್ದ ಸೌಲಭ್ಯ ಪಡೆಯಲು ಅರ್ಹತೆ ಕೋರುವುದು ಇಡೀ ಸಾಮಾಜಿಕ ನ್ಯಾಯದ ಉದ್ದೇಶವನ್ನು ಸೋಲಿಸುತ್ತದೆ” ಎಂದು 2013ರಲ್ಲಿ ಮದ್ರಾಸ್ ಹೈಕೋರ್ಟ್ ಪ್ರಕರಣವೊಂದರಲ್ಲಿ ನೀಡಿರುವ ಆದೇಶವನ್ನು ನ್ಯಾಯಾಲಯವು ಆಧರಿಸಿದೆ.
“ಮತಾಂತರಗೊಂಡ ಬಳಿಕವೂ ವ್ಯಕ್ತಿಯೊಬ್ಬ ತನ್ನ ಜನ್ಮತಃ ಸಮುದಾಯದಲ್ಲಿ ಮುಂದುವರಿಯಲು ಬಯಸಲಾಗದು. ಅಂತಹ ವ್ಯಕ್ತಿಗೆ ಮತಾಂತರದ ನಂತರವೂ ಮೀಸಲಾತಿಯ ಪ್ರಯೋಜನವನ್ನು ನೀಡಬೇಕೇ ಎಂಬುದನ್ನು ಕುರಿತ ಪ್ರಕರಣವನ್ನು ಸುಪ್ರೀಂ ಕೋರ್ಟ್‌ನಲ್ಲಿ ನಿರ್ಧರಿಸಬೇಕಿದೆ. ಹೀಗಾಗಿ, ಆ ಪ್ರಕರಣವು ಸರ್ವೋಚ್ಚ ನ್ಯಾಯಾಲಯದಲ್ಲಿರುವಾಗ ಅರ್ಜಿದಾರರ ವಾದವನ್ನು ಎತ್ತಿ ಹಿಡಿಯಲಾಗದು. ಎರಡನೇ ಪ್ರತಿವಾದಿ ಆಯೋಗ ತೆಗೆದುಕೊಂಡಿರುವ ನಿಲುವು ಸರಿಯಾಗಿದೆ. ಈ ನೆಲೆಯಲ್ಲಿ ಮಧ್ಯಪ್ರವೇಶ ಅನಗತ್ಯವಾಗಿದೆ” ಎಂದು ಪೀಠ ಹೇಳಿದೆ.
ತನ್ನ ಇಚ್ಛೆಯ ಧರ್ಮ ಆರಾಧನೆಗಾಗಿ ಮೂಲಭೂತ ಹಕ್ಕನ್ನು ಚಲಾಯಿಸಿದ್ದೇನೆ ಎಂದು ಅರ್ಜಿದಾರರು ವಾದಿಸಿದ್ದರು. ಮತಾಂತರಕ್ಕೂ ಮುನ್ನ ಅತಿ ಹಿಂದುಳಿದ ವರ್ಗದ ಸೌಲಭ್ಯ ಪಡೆಯುತ್ತಿದ್ದು, ಕೆಲವು ಮುಸ್ಲಿಂ ಸಮುದಾಯಗಳನ್ನು ತಮಿಳುನಾಡಿನಲ್ಲಿ ಹಿಂದುಳಿದ ವರ್ಗಕ್ಕೆ ಸೇರಿಸಲಾಗಿದೆ. ಹೀಗಾಗಿ, ತಮಿಳುನಾಡು ಲೋಕಸೇವಾ ಆಯೋಗದ (ಟಿಎನ್‌ಪಿಎಸ್‌ಸಿ) ಪರೀಕ್ಷೆಯಲ್ಲಿ ಹಿಂದುಳಿದ ವರ್ಗದ ಅಡಿ ತನ್ನನ್ನು ಪರಿಗಣಿಸಬೇಕಿತ್ತು ಎಂದು ವಾದಿಸಿದ್ದರು.
ಇದಕ್ಕೆ ಆಕ್ಷೇಪಿಸಿದ್ದ ತಮಿಳುನಾಡು ಸರ್ಕಾರವು ಎಲ್ಲಾ ಮುಸ್ಲಿಂ ಸಮುದಾಯಗಳನ್ನು ಸರ್ಕಾರವು ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡಿಲ್ಲ ಎಂದು ವಾದಿಸಿತ್ತು.
ಪ್ರಕರಣದ ಹಿನ್ನೆಲೆ: ಅತಿ ಹಿಂದುಳಿದ ವರ್ಗಕ್ಕೆ ಸೇರಿದ್ದ ಅರ್ಜಿದಾರ ಮತ್ತು ಅವರ ಕುಟುಂಬದವರು 2008ರ ಮೇನಲ್ಲಿ ಇಸ್ಲಾಂಗೆ ಮತಾಂತರಗೊಂಡಿದ್ದರು. 2018ರಲ್ಲಿ ಅರ್ಜಿದಾರ ತಮಿಳುನಾಡು ಲೋಕಸೇವಾ ಆಯೋಗದ (ಟಿಎನ್‌ಪಿಎಸ್‌ಸಿ) ಪರೀಕ್ಷೆ ತೆಗೆದುಕೊಂಡಿದ್ದರು. ಇಲ್ಲಿ ಅವರು ಅರ್ಹತಾ ಸುತ್ತಿಗೆ ಆಯ್ಕೆಯಾಗಲು ವಿಫಲರಾಗಿದ್ದರು. ಅರ್ಜಿದಾರರನ್ನು ಟಿಎನ್‌ಪಿಎಸ್‌ಸಿಯು ಸಾಮಾನ್ಯ ವರ್ಗದ ಅಭ್ಯರ್ಥಿ ಎಂದು ಪರಿಗಣಿಸಿರುವುದಾಗಿ ಆರ್‌ಟಿಐ ಪ್ರತಿಕ್ರಿಯೆಯಲ್ಲಿ ತಿಳಿದಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.