Allahabad High Court 
ಸುದ್ದಿಗಳು

ಸಂಗಾತಿಗೆ ದೀರ್ಘ ಕಾಲ ಲೈಂಗಿಕ ಸಂಬಂಧಕ್ಕೆ ಅವಕಾಶ ನೀಡದಿರುವುದು ಮಾನಸಿಕ ಕ್ರೌರ್ಯ: ಅಲಾಹಾಬಾದ್ ಹೈಕೋರ್ಟ್

ತನ್ನ ಪತ್ನಿ ಲೈಂಗಿಕ ಸಂಬಂಧ ಹೊಂದಲು ಮತ್ತು ತನ್ನೊಂದಿಗೆ ಸಹಬಾಳ್ವೆ ನಡೆಸಲು ನಿರಾಕರಿಸಿದ ಆಧಾರದಲ್ಲಿ ವ್ಯಕ್ತಿಯೊಬ್ಬರಿಗೆ ವಿಚ್ಛೇದನ ಪಡೆಯಲು ನ್ಯಾಯಾಲಯ ಅನುಮತಿಸಿತು.

Bar & Bench

ಸೂಕ್ತ ಕಾರಣವಿಲ್ಲದೆ ತನ್ನ ಸಂಗಾತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಲು ದೀರ್ಘ ಕಾಲದವರೆಗೆ ಅವಕಾಶ ನೀಡದಿದ್ದರೆ ಅದು ಮಾನಸಿಕ ಕ್ರೌರ್ಯಕ್ಕೆ ಸಮ ಎಂದು ಅಲಾಹಾಬಾದ್‌ ಹೈಕೋರ್ಟ್‌ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ  [ರವೀಂದ್ರ ಪ್ರತಾಪ್ ಯಾದವ್ ವಿರುದ್ಧ ಆಶಾದೇವಿ].

ಮಾನಸಿಕ ಕ್ರೌರ್ಯದ ಆಧಾರದ ಮೇಲೆ ದಂಪತಿಗಳ ವಿವಾಹವನ್ನು ವಿಸರ್ಜಿಸುವಾಗ, ನ್ಯಾಯಮೂರ್ತಿಗಳಾದ ಸುನೀತ್ ಕುಮಾರ್ ಮತ್ತು ರಾಜೇಂದ್ರ ಕುಮಾರ್-IV ಅವರಿದ್ದ ಪೀಠ “ತನ್ನ ಸಂಗಾತಿಗೆ ಸೂಕ್ತ ಕಾರಣವಿಲ್ಲದೆ ದೀರ್ಘ ಕಾಲದವರೆಗೆ ಲೈಂಗಿಕ ಸಂಭೋಗ ನಿರಾಕರಿಸುವುದು ಆಕೆಯ ಅಥವಾ ಆತನ ಮೇಲೆ ಎಸಗುವ ಮಾನಸಿಕ ಕ್ರೌರ್ಯಕ್ಕೆ ಸಮನಾಗಿರುತ್ತದೆ. ತನ್ನ ಸಂಗಾತಿಯೊಂದಿಗೆ ಜೀವನ ಪುನರಾರಂಭಿಸಲು ಒತ್ತಾಯಿಸಬಹುದಾದ ಯಾವುದೇ ಸ್ವೀಕಾರಾರ್ಹ ಕಾರಣವಿಲ್ಲದಿರುವುದರಿಂದ ಮದುವೆಗೆ ಸಂಬಂಧಿಸಿದಂತೆ ಪಕ್ಷಕಾರರನ್ನು ಶಾಶ್ವತವಾಗಿ ಒಗ್ಗೂಡಿಸುವಂತದ್ದೇನನ್ನೂ ಮಾಡಲು ಸಾಧ್ಯವಿಲ್ಲ, ವಾಸ್ತವವಾಗಿ ವೈವಾಹಿಕ ಸಂಬಂಧ ಸ್ಥಗಿತಗೊಂಡಿದೆ” ಎಂದು ಹೇಳಿದೆ.

ವಾಸ್ತವಾಂಶಗಳನ್ನು ಪರಿಶೀಲಿಸಿದ ಹೈಕೋರ್ಟ್‌ ʼಪತಿಯ ವಾದವನ್ನು ವಜಾಗೊಳಿಸಿದ ಕೌಟುಂಬಿಕ ನ್ಯಾಯಾಲಯವು ಅತಿಯಾದ ತಾಂತ್ರಿಕ ಪ್ರಕ್ರಿಯೆಗಳನ್ನು ಅನುಸರಿಸಿದೆ' ಎಂದು ಆಕ್ಷೇಪಿಸಿತು.  

“ದೀರ್ಘಕಾಲದವರೆಗೂ ಕಕ್ಷಿದಾರರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ದಾಖಲೆಯಿಂದ ಸ್ಪಷ್ವಾಗಿದ್ದು ಇಬ್ಬರೂ ವೈವಾಹಿಕ ಸಂಬಂಧದ ಬಗ್ಗೆ ಗೌರವ ಉಳಿಸಿಕೊಂಡಿಲ್ಲ. ವೈವಾಹಿಕ ಹೊಣೆಗಾರಿಕೆ ನಿಭಾಯಿಸಲು ನಿರಾಕರಿಸಿದ್ದಾರೆ. ಅವರ ಮದುವೆ ಸಂಪೂರ್ಣ ಮುರಿದು ಬಿದ್ದಿದೆ” ಎಂದು ಹೈಕೋರ್ಟ್‌ ನುಡಿಯಿತು.

ಈ ಹಿನ್ನೆಲೆಯಲ್ಲಿ ಯಾವುದೇ ಕ್ರೌರ್ಯ ನಡೆಯದೇ ಇರುವುದರಿಂದ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂಬ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್‌ ಮೇಲ್ಮನವಿ ಸಲ್ಲಿಸಿದ್ದ ಪತಿಗೆ ವಿಚ್ಛೇದನ ಪಡೆಯಲು ಅನುವು ಮಾಡಿಕೊಡುವ ತೀರ್ಪು ನೀಡಿತು.