Religions, Kerala HC 
ಸುದ್ದಿಗಳು

ಮತಾಂತರದ ನಂತರ ಶಾಲಾ ದಾಖಲೆಗಳಲ್ಲಿ ಅದನ್ನು ಸೇರ್ಪಡಿಸುವ ಹಕ್ಕು ಮತಾಂತರಗೊಂಡ ವ್ಯಕ್ತಿಗಿದೆ: ಕೇರಳ ಹೈಕೋರ್ಟ್‌

ಸಂವಿಧಾನದ ವಿಧಿ 25ರ ಅಡಿಯಲ್ಲಿ ಧರ್ಮವನ್ನು ಮುಕ್ತವಾಗಿ ಆಚರಿಸುವ ಹಕ್ಕು ಪ್ರಾಪ್ತವಾಗಿದ್ದು, ಇದರ ಮುಂದುವರಿಕೆಯಾಗಿ ಅಧಿಕೃತ ದಾಖಲೆಗಳಲ್ಲಿ ಆ ಬದಲಾವಣೆಯನ್ನು ದಾಖಲಿಸುವ ಹಕ್ಕು ಸಹ ಮತಾಂತರಗೊಂಡ ವ್ಯಕ್ತಿಗೆ ಇದೆ ಎಂದ ನ್ಯಾಯಾಲಯ.

Bar & Bench

ಸ್ವಇಚ್ಛೆಯಿಂದ ಮತಾಂತರಗೊಳ್ಳುವ ವ್ಯಕ್ತಿಗೆ ಸಂವಿಧಾನದ 25 ನೇ ವಿಧಿಯ ಅಡಿಯಲ್ಲಿ ಅಧಿಕೃತ ಶಾಲಾ ದಾಖಲೆಗಳಲ್ಲಿ ಆ ಬದಲಾವಣೆಯನ್ನು ದಾಖಲಿಸುವ ಹಕ್ಕಿದೆ ಎಂದು ಕೇರಳ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ [ಸುಧಿನ್ ಕೃಷ್ಣ ಸಿಎಸ್ ವಿರುದ್ಧ ಕೇರಳ ರಾಜ್ಯ].

ಸಂವಿಧಾನದ ವಿಧಿ 25ರ ಅಡಿಯಲ್ಲಿ ಧರ್ಮವನ್ನು ಮುಕ್ತವಾಗಿ ಆಚರಿಸುವ ಹಕ್ಕು ಪ್ರಾಪ್ತವಾಗಿದ್ದು, ಇದರ ಮುಂದುವರಿಕೆಯಾಗಿ ಅಧಿಕೃತ ದಾಖಲೆಗಳಲ್ಲಿ ಆ ಬದಲಾವಣೆಯನ್ನು (ಮತಾಂತರ) ದಾಖಲಿಸುವ ಹಕ್ಕು ಸಹ ಅವರಿಗಿದೆ ಎಂದು ನ್ಯಾ. ಡಿ ಕೆ ಸಿಂಗ್‌ ಅವರ ನ್ಯಾಯಪೀಠ ವಿವರಿಸಿತು.

"ಒಬ್ಬ ವ್ಯಕ್ತಿಯು ಯಾವುದೇ ಬಲವಂತ, ವಂಚನೆ, ಅನಗತ್ಯ ಪ್ರಭಾವ ಇತ್ಯಾದಿಗಳಿಲ್ಲದೆ ಸ್ವಇಚ್ಛೆಯಿಂದ ಮತಾಂತರಗೊಂಡಿದ್ದರೆ, ಅಂತಹ ಕೃತ್ಯವನ್ನು ಭಾರತದ ಸಂವಿಧಾನದ ಪೀಠಿಕೆ ಮತ್ತು ವಿಧಿ 25 ರ ಅಡಿಯಲ್ಲಿ ರಕ್ಷಿಸಲಾಗುತ್ತದೆ... ಸಾಂವಿಧಾನಿಕ ಸ್ವರೂಪದಡಿ, ಪ್ರತಿಯೊಬ್ಬ ವ್ಯಕ್ತಿಯು ತನ್ನ ಆಯ್ಕೆಯ ಧಾರ್ಮಿಕ ನಂಬಿಕೆಯ ಅನುಸರಣೆ ಮಾತ್ರವಲ್ಲದೆ ಈ ನಂಬಿಕೆ ಮತ್ತು ಆಲೋಚನೆಗಳನ್ನು ಇತರರ ಧಾರ್ಮಿಕ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸದ ರೀತಿಯಲ್ಲಿ ಪ್ರದರ್ಶಿಸುವ ಮೂಲಭೂತ ಹಕ್ಕನ್ನು ಹೊಂದಿರುತ್ತಾನೆ" ಎಂದು ತೀರ್ಪು ಹೇಳಿದೆ.

ಪ್ರಸ್ತುತ ಪ್ರಕರಣವು ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಮುಸ್ಲಿಂ ತಂದೆ ಮತ್ತು ಹಿಂದೂ ತಾಯಿಗೆ ಜನಿಸಿದ ಅರ್ಜಿದಾರ ವ್ಯಕ್ತಿಯೊಬ್ಬರಿಗೆ ಸಂಬಂಧಿಸಿದ್ದಾಗಿದೆ. ತಾಯಿಯಿಂದ ಹಿಂದೂ ಪದ್ಧತಿಗಳ ಪ್ರಕಾರ ಬೆಳೆದ ವ್ಯಕ್ತಿಯು ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ತೀರ್ಪು ನೀಡಲಾಗಿದೆ.

ವ್ಯಕ್ತಿಯ ಶಾಲಾ ದಾಖಲೆಗಳಲ್ಲಿ 'ಮೊಹಮ್ಮದ್ ರಿಯಾಜುದ್ದೀನ್ ಸಿಎಸ್' ಎಂದು ನೋಂದಾಯಿಸಲಾಗಿದ್ದು ಮತ್ತು ಅವರ ಧರ್ಮವನ್ನು 'ಇಸ್ಲಾಂ, ಮಾಪ್ಪಿಲಾ' ಎಂದು ಗುರುತಿಸಲಾಗಿತ್ತು. ಆದರೆ, ಪ್ರೌಢಾವಸ್ಥೆಯನ್ನು ತಲುಪಿದ ನಂತರ, ಅರ್ಜಿದಾರರು ತಮಗೆ ಇಸ್ಲಾಂನಲ್ಲಿ ನಂಬಿಕೆಯಿಲ್ಲ ಎನ್ನುವುದನ್ನು ಕಂಡುಕೊಂಡರು. ಈ ಹಿನ್ನೆಲೆಯಲ್ಲಿ ಅವರು ಹಿಂದೂ ಧರ್ಮವನ್ನು ಅನುಸರಿಸಲು ಬಯಸಿದರು

ಈ ನಿಟ್ಟಿನಲ್ಲಿ ಅವರು 'ಆರ್ಯ ಸಮಾಜ'ದ ಮೂಲಕ ಅಧಿಕೃತವಾಗಿ ಮತಾಂತರಗೊಂಡು ತಮ್ಮ ಹೆಸರನ್ನು 'ಸುಧಿನ್ ಕೃಷ್ಣ ಸಿ ಎಸ್' ಮತ್ತು ಧರ್ಮವನ್ನು 'ಹಿಂದೂ' ಎಂದು ಬದಲಾಯಿಸಿಕೊಂಡರು. ಈ ಕುರಿತು ಅಧಿಸೂಚನೆಯನ್ನು ಸಹ ಹೊರಡಿಸಲಾಗಿತ್ತು.

ಅರ್ಜಿದಾರರು ತಮ್ಮ ಪ್ರೌಢಶಾಲಾ ಶಿಕ್ಷಣ ಪ್ರಮಾಣ ಪತ್ರದಲ್ಲಿ (ಎಸ್‌ಎಸ್‌ಎಲ್‌ಸಿ) ಹಾಗೂ ಶಾಲಾ ದಾಖಲೆಗಳಲ್ಲಿ ಅಧಿಕೃತವಾಗಿ ಈ ಬದಲಾವಣೆಯನ್ನು ಸೇರಿಸಲು ಪ್ರಯತ್ನಿಸಿದರು. ಆದರೆ ಕೇರಳ ಶಿಕ್ಷಣ ಕಾಯ್ದೆ ಮತ್ತು ನಿಯಮಗಳಲ್ಲಿ ಶಾಲಾ ದಾಖಲೆಗಳಲ್ಲಿ ಜಾತಿ ಮತ್ತು ಧರ್ಮವನ್ನು ಬದಲಾಯಿಸಲು ಯಾವುದೇ ಅವಕಾಶವಿಲ್ಲ ಎಂಬ ಕಾರಣಕ್ಕೆ ಅವರ ವಿನಂತಿಯನ್ನು ಅಧಿಕಾರಿಗಳು ತಿರಸ್ಕರಿಸಿದರು.

ನಂತರ ಅರ್ಜಿದಾರರು ತಮ್ಮ ವಿನಂತಿಯನ್ನು ಅಧಿಕಾರಿಗಳು ತಿರಸ್ಕರಿಸುವುದು ಕೇರಳ ಶಿಕ್ಷಣ ನಿಯಮ, 1959 ರ ನಿಯಮ 3(1) ಅನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿ ಹೈಕೋರ್ಟ್‌ ಮೊರೆ ಹೋದರು. ಆದರೆ ಸರ್ಕಾರಿ ವಕೀಲರು ಅರ್ಜಿಯನ್ನು ವಿರೋಧಿಸಿದರು, ನಿಯಮ 3(1) ರ ಅಡಿಯಲ್ಲಿ ಸರ್ಕಾರವು ಜಾತಿ ಅಥವಾ ಧರ್ಮವನ್ನು ಬದಲಾಯಿಸಲು ಯಾವುದೇ ನಿರ್ದಿಷ್ಟ ಅಧಿಕಾರವನ್ನು ನೀಡಿಲ್ಲ ಎಂದು ವಾದಿಸಿದರು. ಪರೀಕ್ಷಾ ಆಯುಕ್ತರಿಗೆ ಸರ್ಕಾರಿ ಆದೇಶದ ಪ್ರಕಾರ ಜನ್ಮ ದಿನಾಂಕವನ್ನು ಸರಿಪಡಿಸಲು ಮಾತ್ರ ಅಧಿಕಾರವಿದೆ ಎಂದು ವಾದಿಸಲಾಯಿತು.

ಆದರೆ, ನ್ಯಾಯಾಲಯವು ಸರ್ಕಾರದ ಈ ವಾದವನ್ನು ತಿರಸ್ಕರಿಸಿತು, ಜನ್ಮ ದಿನಾಂಕದಲ್ಲಿನ ತಿದ್ದುಪಡಿಗಳಿಗಾಗಿ ಸೂಚಿಸಲಾದ ಸಕ್ಷಮ ಅಧಿಕಾರಿಯು ಕೇರಳ ಶಿಕ್ಷಣ ಕಾಯ್ದೆ ಮತ್ತು ನಿಯಮಗಳ ಅಡಿಯಲ್ಲಿ ಶಾಲಾ ದಾಖಲೆಗಳಲ್ಲಿ ಹೆಸರು, ಜಾತಿ ಮತ್ತು ಧರ್ಮಕ್ಕೆ ಸಂಬಂಧಿಸಿದ ಬದಲಾವಣೆಗಳನ್ನು ಮಾಡಲು ಸಹ ಸಮಾನವಾಗಿ ಅಧಿಕಾರ ಹೊಂದಿದ್ದಾರೆ ಎಂದು ಅದು ಹೇಳಿತು.

ಜನ್ಮ ದಿನಾಂಕ ಬದಲಾವಣೆಗೇ ಬೇರೆ, ಜಾತಿ ಮತ್ತು ಧರ್ಮದಲ್ಲಿನ ಬದಲಾವಣೆಗಳನ್ನು ಸೇರಿಸಲಿಕ್ಕೇ ಬೇರೆ ಅಧಿಕಾರಿ ಇರಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅದರ ಪ್ರಕಾರ, ಅರ್ಜಿದಾರರ ಹೆಸರು ಮತ್ತು ಧರ್ಮವನ್ನು ಅವರ ಕೋರಿಕೆಯಂತೆ ಶಾಲಾ ದಾಖಲೆಗಳಲ್ಲಿ ತಿದ್ದುಪಡಿ ಮಾಡಲು ಮತ್ತು ಅನುಮತಿಸಲು ನ್ಯಾಯಾಲಯವು ಪರೀಕ್ಷಾ ಆಯುಕ್ತರಿಗೆ ನಿರ್ದೇಶನ ನೀಡಿತು.