ಆರನೇ ಕೇಂದ್ರೀಯ ವೇತನ ಆಯೋಗ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ವೇತನಕ್ಕೆ ಅನುಗುಣವಾಗಿ ನಿವೃತ್ತ ಪ್ರಾಧ್ಯಾಪಕರ ವೇತನ ಮತ್ತು ಪಿಂಚಣಿಯನ್ನು ಪರಿಷ್ಕರಿಸಬೇಕು ಮತ್ತು ಈ ಪರಿಷ್ಕೃತ ಪಿಂಚಣಿಯನ್ನು ನಾಲ್ಕು ಕಂತುಗಳಲ್ಲಿ ಅರ್ಹರಿಗೆ ಪಾವತಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಈಚೆಗೆ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ವಜಾಗೊಳಿಸಿದೆ.
ಏಕಸದಸ್ಯ ಪೀಠದ ಆದೇಶ ರದ್ದುಪಡಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಉಮೇಶ್ ಎಂ.ಅಡಿಗ ಅವರ ವಿಭಾಗೀಯ ಪೀಠ ಪುರಸ್ಕರಿಸಿದೆ.
“ನೌಕರರ ಬಗ್ಗೆ ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ ನೀಡುವ ಸಲಹೆ–ಸೂಚನೆಗಳಿಗೆ ಸರ್ಕಾರವು ಬಾಧ್ಯಸ್ಥವೇ ಹಾಗೂ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 2008ರ ಡಿಸೆಂಬರ್ 31ರಂದು ನೀಡಿರುವ ನಿರ್ದೇಶನವು ವೇತನ ಪರಿಷ್ಕರಣೆಯ ಅನುಷ್ಠಾನಗೊಳ್ಳುವ ದಿನದಂದು ನಿವೃತ್ತಿ ಹೊಂದಿದ ಪಿಂಚಣಿದಾರಾರಿಗೂ ಅನ್ವಯ ಆಗುತ್ತದೆಯೇ?” ಎಂಬ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಪೀಠ ತೀರ್ಪು ನೀಡಿದೆ.
“ರಾಜ್ಯ ಉನ್ನತ ಶಿಕ್ಷಣ ಪರಿಷತ್, ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಲಹೆಗಳನ್ನು ನೀಡಬಹುದು. ಆದರೆ, ನೌಕರರ ಸೇವಾ ಷರತ್ತುಗಳಿಗೆ ಸಂಬಂಧಪಟ್ಟಂತೆ ನೀಡುವ ಸಲಹೆ ಅಥವಾ ಸೂಚನೆಗಳು ಸರ್ಕಾರಕ್ಕೆ ಬಾಧ್ಯಸ್ಥನಲ್ಲ. ಅಂತೆಯೇ, ವೇತನ ಪರಿಷ್ಕರಣೆಯ ದಿನದಂದು ಉದ್ಯೋಗದಲ್ಲಿ ಇಲ್ಲದ ನೌಕರರಿಗೆ ವೇತನ ಪರಿಷ್ಕರಣೆಯ ಲಾಭ ದೊರಕುವುದಿಲ್ಲ” ಎಂದು ಪೀಠ ಸ್ಪಷ್ಟಪಡಿಸಿದೆ.
ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎಸ್ ಎ ಅಹಮದ್ ಅವರು “ಅರ್ಜಿದಾರರು ನಿವೃತ್ತರಾಗಿದ್ದು, ಇವರ ನಿವೃತ್ತಿ ವೇತನವು ಅರ್ಜಿದಾರರ ಕೊನೆಯ ವೇತನವನ್ನು ಆಧರಿಸಿದೆ. ಹೀಗಾಗಿ, ಹಾಲಿ ನಿಯಮ ಮತ್ತು ನಿವೃತ್ತಿ ವೇತನ ಪರಿಷ್ಕರಣೆಯಲ್ಲಿ ಯಾವುದೇ ಬದಲಾವಣೆ ಆಗಿರುವುದಿಲ್ಲ” ಎಂಬ ವಾದವನ್ನು ಪೀಠ ಪುರಸ್ಕರಿಸಿದೆ.
“ಮೈಸೂರಿನ ನಿವೃತ್ತ ಪ್ರಾಧ್ಯಾಪಕ ಕೆ ಗೋಪಾಲ್ ಸೇರಿದಂತೆ 18ಕ್ಕೂ ಹೆಚ್ಚು ಅರ್ಜಿದಾರರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠವು ಏಕರೂಪ ಪಿಂಚಣಿ ಪರಿಷ್ಕರಣೆ ನೀತಿ ರೂಪಿಸಿ ಎಂದು 2019ರ ಮಾರ್ಚ್ 23ರಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಆದರೆ, ಇದರಿಂದ ರಾಜ್ಯದ ಬೊಕ್ಕಸಕ್ಕೆ ₹477 ಕೋಟಿಗೂ ಹೆಚ್ಚಿನ ಹೊರೆಯಾಗುತ್ತದೆ” ಎಂದು ಅಹಮದ್ ಆಕ್ಷೇಪಿಸಿದ್ದರು.