ರಾಜ್ಯದಲ್ಲಿ ನಡೆಯುತ್ತಿರುವ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ‘ (ಎಸ್ಐಆರ್) ಅವಧಿಯನ್ನು ಒಂದರಿಂದ ಮೂರು ತಿಂಗಳವರೆಗೆ ವಿಸ್ತರಿಸುವಂತೆ ಕೋರಿರುವ ಅರ್ಜಿಯನ್ನು ಅವಧಿ ಪೂರ್ವವಾಗಿ ಸಲ್ಲಿಕೆ ಮಾಡಲಾಗಿರುವುದರಿಂದ ಅದನ್ನು ಪರಿಗಣಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಹೇಳಿದೆ.
ಎಸ್‌ಐಆರ್ ನಡೆಸಲು ಉದ್ದೇಶಿಸಿರುವ ಕಾಲಮಿತಿಯನ್ನು ವಿಸ್ತರಿಸುವಂತೆ ಕೋರಿ ಸಾಹಿತಿ ದೇವನೂರು ಮಹಾದೇವ, ಇತಿಹಾಸ ತಜ್ಞ ರಾಮಚಂದ್ರ ಗುಹಾ, ನಿವೃತ್ತ ಮೇಜರ್ ಜನರಲ್ ಎಸ್ ಜಿ ವಂಬಟ್ಕೆರೆ, ಲೇಖಕಿ ಸಬೀಹಾ ಭೂಮಿಗೌಡ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
“ಈ ಹಂತದಲ್ಲಿ ಅರ್ಜಿಯನ್ನು ಅವಧಿ ಪೂರ್ವಗಾಗಿ ಸಲ್ಲಿಕೆ ಮಾಡಿರುವುದರಿಂದ ಅದನ್ನು ವಿಚಾರಣೆಗೆ ಪರಿಗಣಿಸಲಾಗದು” ಎಂದು ನ್ಯಾಯಾಲಯ ಆದೇಶಿಸಿದೆ.
ಹಾಲಿ ಅರ್ಜಿಯಲ್ಲಿ ಎತ್ತಿರುವ ಎಸ್‌ಐಆರ್ ಸಂಬಂಧಿತ ವಿಚಾರಗಳು ಸುಪ್ರೀಂ ಕೋರ್ಟ್ ಪರಿಗಣನೆಯಲ್ಲಿವೆ. ಹೀಗಾಗಿ, ಈ ಹಂತದಲ್ಲಿ ಹಾಲಿ ಅರ್ಜಿಯನ್ನು ನ್ಯಾಯಾಲಯವು ಪರಿಗಣಿಸುವುದು ಸರಿಯಲ್ಲ ಎಂಬ ಅಂಶಗಳನ್ನು ಉಲ್ಲೇಖಿಸಿ ನ್ಯಾಯಾಲಯವು ಪಿಐಎಲ್ ಇತ್ಯರ್ಥಪಡಿಸಿದೆ.
“ಹಾಲಿ ಅರ್ಜಿಯಲ್ಲಿ ಎಸ್‌ಐಆರ್ ನಡೆಸುವುದಕ್ಕೆ ಅಳವಡಿಸಿಕೊಂಡಿರುವ ಪ್ರಕ್ರಿಯೆಯನ್ನು ಪ್ರಶ್ನಿಸಲಾಗಿದೆ. ಆಯೋಗವು ಎಸ್‌ಐಆರ್ ನಡೆಸಲು ವಿಶೇಷ ಸಂಸ್ಥೆಯಾಗಿದ್ದು, ಪ್ರಕ್ರಿಯೆಯಲ್ಲಿ ಎದುರಾಗುವ ಸಮಸ್ಯೆಯನ್ನು ನಿವಾರಿಸಲು ಬದ್ಧವಾಗಿಲ್ಲ ಎಂದು ಹೇಳಲು ಯಾವುದೇ ಕಾರಣವಿಲ್ಲ. ಎಸ್‌ಐಆರ್ ಪೂರ್ಣಗೊಳಿಸಲು ನಿಗದಿಪಡಿಸಿರುವ ಕಾಲಮಿತಿಯ ವಿಚಾರವು ಆಯೋಗದ ವಿಶೇಷ ವ್ಯಾಪ್ತಿಗೆ ಒಳಪಟ್ಟಿದ್ದು, ಈ ವಿಚಾರವನ್ನು ಈ ಹಂತದಲ್ಲಿ ಈ ನ್ಯಾಯಾಲಯ ನಿರ್ಧರಿಸಲಾಗದು” ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
“ಮತದಾರರ ದೃಷ್ಟಿಯನ್ನು ಕೇಂದ್ರೀಕರಿಸಿ ರಾಜ್ಯ ಸರ್ಕಾರವು ಚುನಾವಣಾ ಆಯೋಗಕ್ಕೆ ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿ ಮನವಿ ಸಲ್ಲಿಸಿದೆ. ಇದಕ್ಕೆ ಆಯೋಗವು ಸೂಕ್ತ ಗಮನ ನೀಡುವುದಿಲ್ಲ ಎಂದು ಭಾವಿಸಲು ಯಾವುದೇ ಆಧಾರವಿಲ್ಲ” ಎಂದೂ ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ.
ಇದಕ್ಕೂ ಮುನ್ನ, ಅರ್ಜಿದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ಅವರು “ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಬಿಎಲ್‌ಒಗಳಿಗೆ ಹತ್ತು ದಿನ ಮಾತ್ರ ತರಬೇತಿ ನೀಡಲಾಗಿದೆ. ಅಂಗನವಾಡಿ ಕೆಲಸಗಾರರು, ಶಿಕ್ಷಕರನ್ನು ಈ ಕೆಲಸಕ್ಕೆ ನಿಯೋಜಿಸಲಾಗಿದೆ. ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರಿಗೆ ಆಗಸ್ಟ್ ೫ರಿಂದ ಸೆಪ್ಟೆಂಬರ್ ೪ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆನಂತರ ಒಂದು ತಿಂಗಳಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಬಿಹಾರದಲ್ಲಿ ಇದೇ ನೀತಿ ಪಾಲಿಸಲಾಗಿತ್ತು. ಬಿಹಾರದಲ್ಲಿ ಚುನಾವಣೆ ಇತ್ತು. ಆದರೆ, ಕರ್ನಾಟಕದಲ್ಲಿ 2028ರಲ್ಲಿ ಚುನಾವಣೆ ನಡೆಯುತ್ತದೆ. ಹೀಗಾಗಿ, ಇಲ್ಲಿ ಕಾಲಾವಕಾಶ ನೀಡಬಹುದು” ಎಂದರು.
“ಸುಮಾರು 70 ಲಕ್ಷ ಮಂದಿ ಎಸ್‌ಐಆರ್ ಪ್ರಕ್ರಿಯೆಯಿಂದಾಗಿ ಮತದಾನದ ಹಕ್ಕಿನಿಂದ ವಂಚಿತವಾಗಲಿದ್ದಾರೆ ಎನ್ನಲಾಗಿದೆ. ಎಸ್‌ಐಆರ್ ನಗರ ಕೇಂದ್ರಿತ ಜನ ಮಾತ್ರವಲ್ಲ, ಗ್ರಾಮೀಣ, ಅನಕ್ಷರಸ್ಥರೂ ಸೇರಿದ್ದಾರೆ. ಹೀಗಾಗಿ, ಸೂಕ್ತ ಕಾಲಾವಕಾಶ ನೀಡಲು ನಿರ್ದೇಶಿಸಬೇಕು” ಎಂದು ಕೋರಿದರು.
ಭಾರತೀಯ ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ್ದ ವಕೀಲರು “ಅರ್ಜಿದಾರರು ಕರಡು ಪಟ್ಟಿ ಪ್ರಕಟವಾಗುವುದರೊಳಗೆ ಎಲ್ಲಾವನ್ನು ಮಾಡಬೇಕು ಎನ್ನುತ್ತಿದ್ದಾರೆ. ಒಂದೊಮ್ಮೆ ಅಗತ್ಯ ಎನಿಸಿದರೆ ಆಯೋಗವು ಕಾಲಮಿತಿಯನ್ನು ವಿಸ್ತರಿಸಲಿದೆ. ಕಾಲಮಿತಿ ನಿಗದಿಪಡಿಸಿರುವುದಕ್ಕೆ ಸಂಬಂಧಿಸಿದಂತೆ ಇಸಿಐ ಎಚ್ಚರಿಕೆ ವಹಿಸಿದ್ದು, ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳಿಸಲು ಸಮಸ್ಯೆಯಾದರೆ ಆಯೋಗವು ಅಗತ್ಯ ಕ್ರಮಕೈಗೊಳ್ಳಲಿದೆ. ಕರಡು ಮತಪಟ್ಟಿ ಬಿಡುಗಡೆ ಮಾಡುವುದಕ್ಕೂ ಮುನ್ನ ಹೆಸರು ಇಲ್ಲದವರಿಗೆ ನೋಟಿಸ್ ಜಾರಿಗೊಳಿಸಬೇಕು ಎಂಬುದು ಸರಿಯಲ್ಲ. ಕರಡು ಪರಿಷ್ಕತ ಮತಪಟ್ಟಿ ಬಿಡುಗಡೆಯಾದ ಬಳಿಕ ನೋಟಿಸ್ ಜಾರಿಗೊಳಿಸಲಾಗುವುದು” ಎಂದರು.
ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಸಚಿವ ಸಂಪುಟವು ಕೆಲವು ಸಲಹೆ, ಶಿಫಾರಸ್ಸುಗಳನ್ನು ಆಯೋಗಕ್ಕೆ ಮಾಡಿದೆ. ಇದುವರೆಗೆ ಆಯೋಗ ಪ್ರತಿಕ್ರಿಯೆ ನೀಡಿಲ್ಲ. ಜನರ ಮೂಲಭೂತ ಹಕ್ಕು ರಕ್ಷಿಸಬೇಕು ಎಂದು ಕೋರಲಾಗಿದೆ. ಕಾಲಮಿತಿಯ ಅನುಗುಣವಾಗಿ ಹೋಗದೆ ಜನರ ಅನುಕೂಲಕ್ಕೆ ತಕ್ಕಂತೆ ಕ್ರಮಕೈಗೊಳ್ಳುವಂತೆ ಆಯೋಗಕ್ಕೆ ಮನವಿ ಮಾಡಲಾಗಿದೆ” ಎಂದರು.
ಕೊನೆಯಲ್ಲಿ ವಿಕ್ರಮ್ ಹುಯಿಲಗೋಳ ಅವರು ಮತದಾರರ ಗುರುತಿನ ಚೀಟಿ ಇಲ್ಲದೇ ಇದ್ದರೆ ಕಲ್ಯಾಣ ಕಾರ್ಯಕ್ರಮದ ಸೌಲಭ್ಯಗಳು ಸಿಗುವುದಿಲ್ಲ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾಧ್ಯಮ ಹೇಳಿಕೆ ನೀಡಿದ್ದಾರೆ ಎಂದರು.
ಇದಕ್ಕೆ ಪೀಠವು ಈಗಲೇ ಎಲ್ಲವನ್ನೂ ನೀವು ಕಲ್ಪಿಸಿಕೊಳ್ಳುತ್ತಿದ್ದೀರಿ. ಯಾವೆಲ್ಲಾ ನಿರ್ದೇಶನಗಳು ನಿಮಗೆ ಬೇಕು ಎಂದು ನಕ್ಕಿತು. ಇದಕ್ಕೆ ಎಜಿ ಅವರು ಅರ್ಜಿದಾರರ ಎಲ್ಲಾ ಕೋರಿಕೆಗಳನ್ನು ಪರಿಗಣಿಸಬೇಕು ಎಂದು ನಕ್ಕು ಪ್ರತಿಕ್ರಿಯಿಸಿದರು.