ಸುದ್ದಿಗಳು

ಜ್ಞಾನವಾಪಿ ಪ್ರಕರಣದಲ್ಲಿ ಪಕ್ಷಕಾರರನ್ನಾಗಿ ಮಾಡಿಕೊಳ್ಳಲು ಆರಾಧನಾ ಸ್ಥಳ ಕಾಯಿದೆ ಪ್ರಶ್ನಿಸಿದವರಿಂದ ಸುಪ್ರೀಂಗೆ ಮನವಿ

ಕಾಯಿದೆಯ ಸಿಂಧುತ್ವ ಪ್ರಶ್ನಿಸಿ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಾರ್ಚ್ 2021ರಲ್ಲಿ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತ್ತು.

Bar & Bench

ಆರಾಧನಾ ಸ್ಥಳಗಳ (ವಿಶೇಷ ನಿಯಮಾವಳಿಗಳು) ಕಾಯಿದೆ- 1991ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಪಿಐಎಲ್‌ ಸಲ್ಲಿಸಿದ್ದ ಬಿಜೆಪಿ ನಾಯಕ, ವಕೀಲ ಅಶ್ವಿನಿ ಕುಮಾರ್‌ ಉಪಾಧ್ಯಾಯ ಅವರು ತಮ್ಮನ್ನು ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಪಕ್ಷಕಾರರನನ್ನಾಗಿ ಮಾಡಿಕೊಳ್ಳುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಪ್ರಕರಣದ ವಾಸ್ತವ- ಸನ್ನಿವೇಶಗಳ ಸೂಕ್ತ ಪರಾಮರ್ಶೆಗಾಗಿ ಈ ಮನವಿ ಸಲ್ಲಿಸುತ್ತಿರುವುದಾಗಿ ಉಪಾಧ್ಯಾಯ ಅರ್ಜಿಯಲ್ಲಿ ತಿಳಿಸಿದ್ದಾರೆ.

ರಾಮ ಜನ್ಮಭೂಮಿ ಆಂದೋಲನ ಉತ್ತುಂಗದಲ್ಲಿದ್ದಾಗ ಜಾರಿಗೆ ಬಂದ ಆರಾಧನಾ ಸ್ಥಳಗಳ (ವಿಶೇಷ ನಿಯಮಾವಳಿಗಳು) ಕಾಯಿದೆಯು ದೇಶದ ಸ್ವಾತಂತ್ರ್ಯ ಬಂದ ದಿನ, ಅಂದರೆ 1947ರ ಆಗಸ್ಟ್‌ 15ರ ನಂತರ ಯಾವ ಧಾರ್ಮಿಕ ಸ್ಥಳದಲ್ಲಿ ಯಾವ ಧರ್ಮದ ಆಚರಣೆ ಇತ್ತೋ, ಅದೇ ಆಚರಣೆ ಮುಂದೆಯೂ ನಿರಂತರವಾಗಿ ಮುಂದುವರೆಯಬೇಕು. ಅಂತಹ ಪೂಜಾ ಸ್ಥಳಗಳ ಸ್ವರೂಪದ ಬಗ್ಗೆ ವಿವಾದ ಎಬ್ಬಿಸುವ ಪ್ರಕರಣಗಳನ್ನು ನ್ಯಾಯಾಲಯಗಳು ಪುರಸ್ಕರಿಸದಂತೆ ನಿರ್ಬಂಧ ವಿಧಿಸುತ್ತದೆ.

ರಾಮ ಜನ್ಮಭೂಮಿ ಆಂದೋಲನದ ಉತ್ತುಂಗದ ಸಮಯದಲ್ಲಿ ಪರಿಚಯಿಸಲಾದ 1991 ಕಾಯಿದೆಯು ಸ್ವಾತಂತ್ರ್ಯದ ದಿನಾಂಕದಂದು ಇದ್ದಂತೆ ಎಲ್ಲಾ ಧಾರ್ಮಿಕ ರಚನೆಗಳ ಸ್ಥಾನಮಾನವನ್ನು ರಕ್ಷಿಸಲು ಸೂಚಿಸುತ್ತದೆ, ಅಂತಹ ಪೂಜಾ ಸ್ಥಳಗಳ ಸ್ವರೂಪದ ಬಗ್ಗೆ ವಿವಾದವನ್ನು ಉಂಟುಮಾಡುವ ಪ್ರಕರಣಗಳನ್ನು ನ್ಯಾಯಾಲಯಗಳು ಪುರಸ್ಕರಿಸದಂತೆ ನಿರ್ಬಂಧಿಸುತ್ತದೆ. ಅಲ್ಲದೆ ನ್ಯಾಯಾಲಯಗಳಲ್ಲಿ ಈಗಾಗಲೇ ಬಾಕಿ ಇರುವ ಇಂತಹ ಪ್ರಕರಣಗಳನ್ನು ತೆಗೆದು ಹಾಕುವಂತೆ ಅದು ಹೇಳುತ್ತದೆ. ಈ ಕಾಯಿದೆಯ ಮಾನ್ಯತೆಯನ್ನು ಅಶ್ವಿನಿ ಕುಮಾರ್‌ ಉಪಾಧ್ಯಾಯ ಈ ಹಿಂದೆ ಪ್ರಶ್ನಿಸಿದ್ದರು. ಈ ಸಂಬಂಧ 2021ರಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್ ನೀಡಿತ್ತು.

ಜ್ಞಾನವಾಪಿ ಪ್ರಕರಣದಲ್ಲಿ ತಮ್ಮನ್ನು ಪಕ್ಷಕಾರರನ್ನಾಗಿ ಮಾಡಿಕೊಳ್ಳುವಂತೆ ಕೋರಿರುವ ಅರ್ಜಿಯಲ್ಲಿ ಉಪಾಧ್ಯಾಯ ಅವರು ಈ ಕೆಳಕಂಡ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ:

  • ಆರಾಧನಾ ಸ್ಥಳಗಳನ್ನು ಸ್ಥಾಪಿಸಿದ ಅಥವಾ ನಿರ್ಮಿಸಿದ ವ್ಯಕ್ತಿಯ ವೈಯಕ್ತಿಕ ಕಾನೂನಿಗೆ ಅನುಸಾರವಾಗಿ ಸ್ಥಾಪಿಸಿದ ಅಥವಾ ನಿರ್ಮಿಸಿದ ಸ್ಥಳಗಳನ್ನು ಮಾತ್ರ ರಕ್ಷಿಸಬೇಕು. ಆದರೆ ವೈಯಕ್ತಿಕ ಕಾನೂನು ಉಲ್ಲಂಘಿಸಿರುವ ಸ್ಥಾಪಿಸಿದ ಅಥವಾ ನಿರ್ಮಿಸಿದ ಸ್ಥಳಗಳನ್ನು ʼಆರಾಧನಾ ಸ್ಥಳಗಳುʼ ಎಂದು ಕರೆಯಬಾರದು.

  • ಅನಾಗರಿಕ ಆಕ್ರಮಣಕಾರರ ಕಾನೂನುಬಾಹಿರ ಕೃತ್ಯಗಳನ್ನು ಸಕ್ರಮಗೊಳಿಸಲೆಂದೇ ಪೂಜಾ ಸ್ಥಳಗಳ (ವಿಶೇಷ ನಿಯಮಾವಳಿಗಳು) ಕಾಯಿದೆಯು ಸ್ವಾತಂತ್ರ್ಯ ದಿನವನ್ನು ನಿಗದಿಗೊಳಿಸಿಕೊಂಡಿದೆ.

  • ಕಾನುನುಬದ್ಧ ಒಡೆತನ ಹೊಂದಿಲ್ಲದ ಮೂಲ ಭೂಮಿಯಲ್ಲಿ ನಿರ್ಮಿಸಿಲ್ಲದ ಯಾವುದೇ ಮಸೀದಿಯನ್ನು ಮುಸ್ಲಿಮರು ತಮ್ಮದೆಂದು ಪ್ರತಿಪಾದಿಸುವಂತಿಲ್ಲ.

  • ಮೇಲ್ಛಾವಣಿ, ಗೋಡೆಗಳು, ಕಂಬಗಳು, ಅಡಿಪಾಯವನ್ನು ಕೆಡವಿದ ಮಾತ್ರಕ್ಕೆ ಮತ್ತು ನಮಾಜ್ ಮಾಡಿದ ಮಾತ್ರಕ್ಕೆ ದೇವಾಲಯದ ಧಾರ್ಮಿಕ ಸ್ವರೂಪವು ಬದಲಾಗುವುದಿಲ್ಲ.