Supreme Court of India 
ಸುದ್ದಿಗಳು

[ಸ್ನಾತಕೋತ್ತರ ವೈದ್ಯಕೀಯ ಸೀಟು] ಇಡಬ್ಲ್ಯೂಎಸ್ ಆದಾಯ ಮಿತಿ ಬಗ್ಗೆ ವಿವರಿಸುವಂತೆ ಕೇಂದ್ರಕ್ಕೆ ಸುಪ್ರೀಂ ತಾಕೀತು

ಇಡಬ್ಲ್ಯೂಎಸ್ ಕೋಟಾ ಪಡೆಯಲು ವಾರ್ಷಿಕ ಆದಾಯ ಮಿತಿಯಾಗಿ ₹ 8 ಲಕ್ಷ ನಿಗದಿಪಡಿಸುವ ಮೊದಲು ಯಾವುದೇ ಅಧ್ಯಯನ ನಡೆಸಲಾಗಿದೆಯೇ ಎಂದು ವಿವರಿಸುವ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ಕೇಂದ್ರಕ್ಕೆ ತಾಕೀತು ಮಾಡಿತು.

Bar & Bench

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಮೂಲಕ ಆರ್ಥಿಕ ದುರ್ಬಲ ವರ್ಗಕ್ಕೆ (ಇಡಬ್ಲ್ಯೂಎಸ್‌) ಸೇರಿದವರಿಗೆ ಮೀಸಲಾತಿ ಪಡೆಯಲು ₹ 8 ಲಕ್ಷ ವಾರ್ಷಿಕ ಆದಾಯ ಮಿತಿ ನಿಗದಿಪಡಿಸಿರುವುದಕ್ಕೆ ಕಾರಣ ನೀಡಿ ಅಫಿಡವಿಟ್‌ ಸಲ್ಲಿಸುವಂತೆ ಸುಪ್ರೀಂಕೋರ್ಟ್‌ ಗುರುವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.

ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಇಡಬ್ಲ್ಯೂಎಸ್‌ಗೆ ರೂ 8 ಲಕ್ಷ ಆದಾಯ ಮಿತಿ ಇತರ ಹಿಂದುಳಿದ ವರ್ಗಗಳಿಂದ (OBC) ಕೆನೆ ಪದರ ವರ್ಗವನ್ನು ಬೇರ್ಪಡಿಸುವ ಕಟ್-ಆಫ್ ಗೆ ಸಮವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಈ ಹಿನ್ನೆಲೆಯಲ್ಲಿ ಆದಾಯಮಿತಿ ನಿಗದಿಪಡಿಸುವ ಮೊದಲು ಯಾವುದೇ ಅಧ್ಯಯನ ನಡೆಸಲಾಗಿದೆಯೇ ಎಂದು ಕೇಳಿತು.

ಕೇಂದ್ರ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್, ಸಿನ್ಹೋ ಆಯೋಗದ ವರದಿಯನ್ನು ಆಧರಿಸಿ ಮಿತಿಯನ್ನು ನಿಗದಿಪಡಿಸಲಾಗಿದೆ ಎಂದರು. ಆದರೆ ನ್ಯಾಯಾಲಯ ಇದನ್ನು ಒಪ್ಪಲಿಲ್ಲ.

ನ್ಯಾಯಾಲಯ ಅವಲೋಕನದ ಪ್ರಮುಖಾಂಶಗಳು

  • ಕೆಲ ಜನಸಂಖ್ಯಾಶಾಸ್ತ್ರೀಯ ಅಥವಾ ಸಮಾಜಶಾಸ್ತ್ರೀಯ ಇಲ್ಲವೇ ಸಮಾಜೋ ಆರ್ಥಿಕ ಮಾಹಿತಿ ನಿಮ್ಮ ಬಳಿ ಇರಬೇಕು. ರೂ 8 ಲಕ್ಷ ಆದಾಯ ಮಿತಿಯನ್ನು ಬರಿ ಶೂನ್ಯದಿಂದ ಸೃಷ್ಟಿಸಲು ಸಾಧ್ಯವಿಲ್ಲ. ನೀವು ಹೇಳುತ್ತಿರುವ ಏಕೈಕ ವಿಚಾರ ಎಂದರೆ ಒಬಿಸಿಯೊಂದಿಗೆ ಸಮಾನತೆಯಾಗಿದೆ.

  • ಆದರೆ ಒಬಿಸಿ ಮತ್ತು ಇಡಬ್ಲ್ಯೂಎಸ್‌ಗೆ ಒಂದೇ ಮಿತಿ ಅನ್ವಯಿಸುವ ಮೂಲಕ, ನೀವು ಅಸಮಾನವಾಗಿರುವವರನ್ನು ಸಮನಾಗಿ ಸಮೀಕರಿಸುತ್ತಿದ್ದೀರಿ. ಆದ್ದರಿಂದ ಈ ಬಗ್ಗೆ ವಿವರವಾದ ಅಫಿಡವಿಟ್‌ ಸಲ್ಲಿಸತಕ್ಕದ್ದು.

  • ಒಬಿಸಿ ಮತ್ತು ಇಡಬ್ಲ್ಯೂಎಸ್‌ನಲ್ಲಿ ಕೆನೆ ಪದರವನ್ನು ನಿರ್ಧರಿಸುವ ಆದಾಯದ ಮಿತಿ ರೂ. 8 ಲಕ್ಷವಾಗಿದೆ. ಒಬಿಸಿಯಲ್ಲಿ ಈ ಮಿತಿಯನ್ನು ಆರ್ಥಿಕವಾಗಿ ಮುಂದುವರಿದವರನ್ನು ಹೊರಗಿಡಲು ಬಳಸಲಾಗಿದ್ದು ಆ ಮೂಲಕ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗಿದೆ. ಇಡಬ್ಲ್ಯುಎಸ್‌ನಲ್ಲಿ ಇದನ್ನು ವಿವಿಧ ವರ್ಗಗಳನ್ನು ಒಳಗೊಳ್ಳಲು ಬಳಸಲಾಗಿದೆ. ಹಾಗಾಗಿ ಒಂದೇ ಮಿತಿಯನ್ನು ಒಬಿಸಿಯಲ್ಲಿ ಹೊರಗಿಡಲು ಬಳಸಿದರೆ ಎಡಬ್ಲ್ಯುಎಸ್‌ನಲ್ಲಿ ಒಳಗೊಳ್ಳಲು ಬಳಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇಡಬ್ಲ್ಯುಎಸ್‌ ಹಾಗೂ ಒಬಿಸಿಗೆ ಏಕರೂಪವಾದ ಆದಾಯ ಮಿತಿಯನ್ನು ನಿಗದಿಪಡಿಸಿರುವುದು ಮನಸೋಇಚ್ಛೆಯಾಗಿದೆ.

  • ಅಫಿಡವಿಟ್ ಕೋರಿರುವ ಆದೇಶದಲ್ಲಿ ಈ ಕೆಳಗಿನ ಸಮಸ್ಯೆಗಳನ್ನು ರೂಪಿಸಲು ಮುಂದಾಗಿದೆ ಎಂದು ನ್ಯಾಯಾಲಯ ಹೇಳಿದೆ: 1. ಇಡಬ್ಲ್ಯೂಎಸ್‌ ನಿರ್ಧರಿಸುವ ಮಾನದಂಡಕ್ಕಾಗಿ ಮೊದಲು ಕೇಂದ್ರ ಸರ್ಕಾರ ಕೆಲಸ ಮಾಡಿದೆಯೇ? 2. ಉತ್ತರ ಹೌದು ಎಂದಾದದಲ್ಲಿ ಅದು, ಸಿನ್ಹೋ ಆಯೋಗದ ವರದಿಯನ್ನು ಆಧರಿಸಿದ ಮಾನದಂಡವಾಗಿದ್ದರೆ, ಆ ವರದಿಯನ್ನು ನ್ಯಾಯಾಲಯದ ಮುಂದೆ ಅಧಿಕೃತವಾಗಿ ಇರಿಸಿರಿ.

  • ಸಂಪೂರ್ಣ ದಾಖಲೆ ಮುಂದಿಡಲು ನ್ಯಾಯಾಲಯ ಕೇಂದ್ರಕ್ಕೆ ಸ್ವಾತಂತ್ರ್ಯ ನೀಡಿರುವಾಗ ಇಡಬ್ಲ್ಯೂಎಸ್‌ ಆದಾಯದ ಮಾನದಂಡವನ್ನು ಯಾವ ಆಧಾರದ ಮೇಲೆ ನಿರ್ಧರಿಸಲಾಗಿದೆ ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸಬೇಕು.

  • ನಾವು ನೀತಿಯ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಆದರೆ ಸಾಂವಿಧಾನಿಕ ತತ್ವಗಳನ್ನು ಪಾಲಿಸಲು (ಕೇಂದ್ರ ಸರ್ಕಾರ) ಮಾಹಿತಿ ಬಹಿರಂಗಗೊಳಿಸುವುದು ಅಗತ್ಯವಿದೆ.

ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಖಿಲ ಭಾರತ ಕೋಟಾ ಸೀಟುಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇ 27 ಮೀಸಲಾತಿ ಮತ್ತು ಇಡಬ್ಲ್ಯೂಎಸ್‌ಗೆ ಶೇ 10 ಮೀಸಲಾತಿ ನಿಗದಿಪಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 28ಕ್ಕೆ ನಿಗದಿಯಾಗಿದೆ.