ಭಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿಯ (ಬಿಬಿಎಂಬಿ) ಕಾರ್ಯಾಚರಣೆಯ ನಿಯಂತ್ರಣದಲ್ಲಿರುವ ಭಾಕ್ರಾ ನಂಗಲ್ ಅಣೆಕಟ್ಟಿನ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡದಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಪಂಜಾಬ್ ಸರ್ಕಾರ ಮತ್ತು ಪಂಜಾಬ್ ಪೊಲೀಸರಿಗೆ ನಿರ್ದೇಶನ ನೀಡಿದೆ.
ಹರಿಯಾಣ ಮತ್ತು ರಾಜಸ್ಥಾನದ ಕೆಲವು ಭಾಗಗಳ ತುರ್ತು ಅಗತ್ಯ ಈಡೇರಿಸಲು ಹೆಚ್ಚುವರಿಯಾಗಿ 4,500 ಕ್ಯೂಸೆಕ್ ನೀರು ಹರಿಸುವಂತೆ ನೀಡಲಾಗಿದ್ದ ತೀರ್ಪು ಪಾಲಿಸುವಂತೆ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಮತ್ತು ನ್ಯಾಯಮೂರ್ತಿ ಸುಮೀತ್ ಗೋಯಲ್ ಅವರಿದ್ದ ವಿಭಾಗೀಯ ಪೀಠ ಪಂಜಾಬ್ ಸರ್ಕಾರಕ್ಕೆ ನಿರ್ದೇಶನ ನೀಡಿತು.
"ಬಿಬಿಎಂಬಿ ನಿರ್ವಹಿಸುವ ಭಾಕ್ರಾ ನಂಗಲ್ ಅಣೆಕಟ್ಟು ಮತ್ತು ಲೋಹಂದ್ ನಿಯಂತ್ರಣ ಕೊಠಡಿಯ ನೀರು ನಿಯಂತ್ರಣ ಕಚೇರಿಗಳ ದೈನಂದಿನ ಕಾರ್ಯನಿರ್ವಹಣೆ, ಕಾರ್ಯಾಚರಣೆ ಮತ್ತು ನಿಯಂತ್ರಣದಲ್ಲಿ ಪಂಜಾಬ್ ರಾಜ್ಯ ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ ಯಾರೂ ಹಸ್ತಕ್ಷೇಪ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ" ಎಂದು ನ್ಯಾಯಾಲಯ ಆದೇಶಿಸಿದೆ.
ಹರಿಯಾಣ ಹಾಗೂ ನದಿ ನೀರು ಹಂಚಿಕೆಯ ಇತರ ರಾಜ್ಯಗಳಿಗೆ 8,500 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಇತ್ತೀಚಿಗೆ ಕೈಗೊಂಡ ನಿರ್ಧಾರದ ನಂತರ ಪಂಜಾಬ್ ಪೊಲೀಸರು ಅಣೆಕಟ್ಟಿನ ಕಾರ್ಯಾಚರಣೆಯ ನಿಯಂತ್ರಣವನ್ನು ಬಲವಂತವಾಗಿ ವಹಿಸಿಕೊಂಡಿದ್ದಾರೆ ಎಂದು ಆರೋಪಿಸಿ ಬಿಬಿಎಂಬಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ನಿರ್ದೇಶನ ನೀಡಿತು.
ನಿನ್ನೆ ಈ ವಿಷಯವನ್ನು ವಿವರವಾಗಿ ನ್ಯಾಯಪೀಠ ಆಲಿಸಿತ್ತು. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿ ಹಲವು ಪ್ರವಾಸಿಗರನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ನದಿ ನೀರು ಹರಿಸದೆ ಇರಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದನ್ನು ಆಗ ಪ್ರಸ್ತಾಪಿಸಿದ್ದ ನ್ಯಾ. ನಾಗು "ನಾವು ನಮ್ಮ ಶತ್ರು ದೇಶಕ್ಕೆ ಹೀಗೆ ಮಾಡುತ್ತಿದ್ದೇವೆ. ನಮ್ಮ ರಾಜ್ಯಗಳ ನಡುವೆಯೇ ಅಂಥದ್ದು ನಡೆಯಬಾರದು" ಎಂದು ಹೇಳಿದ್ದರು.