Indian Flag  Image for representative purpose
ಸುದ್ದಿಗಳು

ಮಸೀದಿಯ ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ನೆಟ್ಟ ವ್ಯಕ್ತಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಪಂಜಾಬ್ ಹೈಕೋರ್ಟ್

ಆರೋಪಿಯ ಆಪಾದಿತ ನಡೆ "ಗಂಭೀರ ಕೋಮು ಮತ್ತು ಸಾಂವಿಧಾನಿಕ ಪರಿಣಾಮಗಳಿಂದ ಕೂಡಿದೆ ಎಂದು ಹೈಕೋರ್ಟ್ ಹೇಳಿತು.

Bar & Bench

ಗುರುಗ್ರಾಮದ ಉಟಾನ್ ಪಟ್ಟಣದ ಮಸೀದಿಯಿಂದ ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ನೆಟ್ಟ ಆರೋಪ ಹೊತ್ತಿರುವ ವ್ಯಕ್ತಿಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದೆ [ವಿಕಾಸ್ ತೋಮರ್ @ ವಿಕಾಶ್ ತೋಮರ್ ಮತ್ತು ಹರಿಯಾಣ ಸರ್ಕಾರ ನಡುವಣ ಪ್ರಕರಣ] .

ಆರೋಪಿ ವಿಕಾಸ್ ತೋಮರ್ ವಿರುದ್ಧದ ಆರೋಪಗಳು ಅಸ್ಪಷ್ಟ ಅಥವಾ ಸಾಮಾನ್ಯ ಅಲ್ಲ, ಬದಲಿಗೆ ನಿರ್ದಿಷ್ಟವಾಗಿದ್ದು ಉಳಿದ ಆರೋಪಿಗಳ ನಡುವಿನ ಸಂಭಾಷಣೆಯಿಂದ ಇದು ದೃಢಪಟ್ಟಿದೆ ಎಂದು ನ್ಯಾಯಮೂರ್ತಿ ಮನೀಷಾ ಬಾತ್ರಾ ತಿಳಿಸಿದರು.

ಸಾರ್ವಜನಿಕ ಸುವ್ಯವಸ್ಥೆ ಮತ್ತು ಕೋಮು ಶಾಂತಿಯ ಮೇಲೆ ಕೃತ್ಯ ಬೀರುವ ಪರಿಣಾಮದ ಬಗ್ಗೆಯೂ ಗಮನಸೆಳೆದ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆಳ ಮತ್ತು ಸೂಕ್ತ ತನಿಖೆ ನಡೆಸುವ ಅಗತ್ಯವಿದೆ ಎಂದು ಹೇಳಿದೆ.

"ಈ ಹಂತದಲ್ಲಿ ಅಪರಾಧದ ಗಂಭೀರತೆ ಹಾಗೂ ಅದು ಸಾರ್ವಜನಿಕ ಸುವ್ಯವಸ್ಥೆ ಮತ್ತು ಕೋಮು ಶಾಂತಿಯ ಮೇಲೆ ಉಂಟುಮಾಡುವ ಸಂಭಾವ್ಯ ಪರಿಣಾಮವನ್ನು ಕಡೆಗಣಿಸಲಾಗುವುದಿಲ್ಲ. ಅದರಲ್ಲಿಯೂ ಆರೋಪಿಯ ಆಪಾದಿತ ನಡೆ ಗಂಭೀರ ಕೋಮು ಮತ್ತು ಸಾಂವಿಧಾನಿಕ ಪರಿಣಾಮಗಳಿಂದ ಕೂಡಿರುವಾಗ ಅರ್ಜಿದಾರ ಬಂಧನ ಪೂರ್ವ ಜಾಮೀನು ನೀಡಲು ಸಾಕಾಗುವ ಯಾವುದೇ ಅಸಾಧಾರಣ ಅಥವಾ ಅನನ್ಯವಾದ ಸಂದರ್ಭವನ್ನು ದಾಖಲಿಸಿಲ್ಲ" ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರ ಕಸ್ಟಡಿ ವಿಚಾರಣೆ ಕಡ್ಡಾಯವಾಗಿದೆ ಮತ್ತು ನಿರೀಕ್ಷಣಾ ಜಾಮೀನು ನೀಡಲು ಯಾವುದೇ ಆಧಾರವಿಲ್ಲ ಎಂದ ನ್ಯಾಯಾಲಯ ಅರ್ಜಿ ವಜಾಗೊಳಿಸಿತು.

ಪ್ರಾಸಿಕ್ಯೂಷನ್ ವಾದದ ಪ್ರಕಾರ  ಜುಲೈ 7 ರಂದು ಬಿಲಾಸ್ಪುರ ಗುರುಗ್ರಾಮದಿಂದ ಸಮಾಜ ವಿರೋಧಿ ಶಕ್ತಿಗಳು ಮಸೀದಿಯಿಂದ ರಾಷ್ಟ್ರಧ್ವಜವನ್ನು ತೆಗೆದು ಅಲ್ಲಿ ಕೇಸರಿ ಧ್ವಜವನ್ನು ಹಾಕಿವೆ ಎಂದು ದೂರು ಬಂದಿತ್ತು. ದೂರುದಾರರು ಪೊಲೀಸರಿಗೆ ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್‌ಗಳನ್ನು ಸಹ ನೀಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮತ್ತು 1971ರ ರಾಷ್ಟ್ರೀಯ ಗೌರವ ಅಪಮಾನ ತಡೆ ಕಾಯಿದೆಯ ಸೆಕ್ಷನ್ 2 ರ ವಿವಿಧ ನಿಬಂಧನೆಗಳ ಅಡಿಯಲ್ಲಿ ಬಂಧಿಸಿದ್ದರು. ಜುಲೈ 7 ರಂದು ಅವರಿಗೆ  ಜಾಮೀನು ನೀಡಲಾಯಿತಾದರೂ  ಜುಲೈ 15 ರಂದು ಸೆಷನ್ಸ್ ನ್ಯಾಯಾಲಯ ಅರ್ಜಿದಾರ ತೋಮರ್‌ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿತು.  

ವಿವಿಧ ಧರ್ಮಗಳು ಮತ್ತು ಜನಾಂಗದ ಜನರು ಒಂದೇ ಗ್ರಾಮದಲ್ಲಿ ಒಗ್ಗೂಡಿ ಬದುಕುವ ಭಾರತದಂತಹ ದೇಶದಲ್ಲಿ ಕೆಲ ಸಮಾಜ ವಿರೋಧಿಗಳು ತಮ್ಮ ನಿಮ್ನ ಗುರಿ ಸಾಧನೆ ಮತ್ತು ತಪ್ಪು ಕಲ್ಪನೆಗಳಿಗಾಗಿ ಸಮಾಜದ ಸಾಮಾಜಿಕ ರಚನೆಯನ್ನು ಹಾಳುಗೆಡವು ಯತ್ನಿಸುತ್ತವೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಂದೀಪ್ ಚೌಹಾಣ್ ತಮ್ಮ ಆದೇಶದಲ್ಲಿ ತಿಳಿಸಿದ್ದರು.

[ತೀರ್ಪಿನ ಪ್ರತಿ]

Vikas_Tomar___Vikash_Tomar__v_State_of_Haryana (1).pdf
Preview