Karnataka HC 
ಸುದ್ದಿಗಳು

ಫಾರ್ಮಸಿ ಕೌನ್ಸಿಲ್ ನಿಯಮ ಗೆಜೆಟ್‌ ಅಧಿಸೂಚನೆ ಪ್ರಕಟ: ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್‌

ಕರ್ನಾಟಕ ರಾಜ್ಯ ಫಾರ್ಮಸಿ ಕೌನ್ಸಿಲ್ (ತಿದ್ದುಪಡಿ) ನಿಯಮ-2022ರ ಅಂತಿಮ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಈ ಕುರಿತು ನ್ಯಾಯಾಲಯಕ್ಕೆ ಅನುಪಾಲನಾ ವರದಿ ಸಲ್ಲಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದ ಸರ್ಕಾರದ ಪರ ವಕೀಲರು.

Bar & Bench

ಫಾರ್ಮಸಿ ಇನ್‌ಸ್ಪೆಕ್ಟರ್‌ಗಳ ನೇಮಕಾತಿಗೆ ಅರ್ಹತೆ ನಿಗದಿಪಡಿಸುವ ‘ಕರ್ನಾಟಕ ರಾಜ್ಯ ಫಾರ್ಮಸಿ ಕೌನ್ಸಿಲ್ (ತಿದ್ದುಪಡಿ) ನಿಯಮ-2022’ ರೂಪಿಸಿ, ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ ಎಂದು ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಮಾಹಿತಿ ನೀಡಿದನ್ನು ಪರಿಗಣಿಸಿ ನ್ಯಾಯಾಲುವು ಮನವಿ ಇತ್ಯರ್ಥಪಡಿಸಿತು.

ರಾಜ್ಯದಲ್ಲಿ ‘ಫಾರ್ಮಸಿ ಕಾಯಿದೆ-1948’ರ ನಿಯಮಗಳನ್ನು ಜಾರಿಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕೊಪ್ಪಳದ ಅಶೋಕ್ ಸ್ವಾಮಿ ಹೆರೂರು ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಸರ್ಕಾರದ ಪರ ವಕೀಲ ವಿಜಯ್ ಕುಮಾರ್ ಎ. ಪಾಟೀಲ್ ಅವರು ರಾಜ್ಯ ಫಾರ್ಮಸಿ ಕೌನ್ಸಿಲ್ (ತಿದ್ದುಪಡಿ) ನಿಯಮ ಕುರಿತು ಮೆಮೊ ಸಲ್ಲಿಸಿದರು.

ಹೈಕೋರ್ಟ್ ನಿರ್ದೇಶನದಂತೆ ಫಾರ್ಮಸಿ ಇನ್‌ಸ್ಪೆಕ್ಟರ್‌ಗಳ ನೇಮಕಾತಿಗೆ ಅರ್ಹತಾ ನಿಯಮಗಳ ಕರಡು ಅಧಿಸೂಚನೆ ಹೊರಡಿಸಿ, ಸಾರ್ವಜನಿಕರ ಆಕ್ಷೇಪಣೆ ಆಹ್ವಾನಿಸಲಾಗಿತ್ತು. ಆಕ್ಷೇಪಣೆಗಳನ್ನು ಪರಿಗಣಿಸಿದ ನಂತರ ಜೂನ್‌ 6ರಂದು ‘ಕರ್ನಾಟಕ ರಾಜ್ಯ ಫಾರ್ಮಸಿ ಕೌನ್ಸಿಲ್ (ತಿದ್ದುಪಡಿ) ನಿಯಮ-2022’ರ ಅಂತಿಮ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಈ ಕುರಿತು ನ್ಯಾಯಾಲಯಕ್ಕೆ ಅನುಪಾಲನಾ ವರದಿ ಸಲ್ಲಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಇದನ್ನು ಪರಿಗಣಿಸಿದ ಪೀಠವು ಅರ್ಜಿ ಕುರಿತು ನ್ಯಾಯಾಲಯ ಕಾಲ ಕಾಲಕ್ಕೆ ಕೆಲ ನಿರ್ದೇಶನಗಳನ್ನು ನೀಡಿತ್ತು. ಆ ನಿರ್ದೇಶನದ ಅನುಸಾರ ಸರ್ಕಾರ ಫಾರ್ಮಸಿ ಇನ್‌ಸ್ಪೆಕ್ಟರ್‌ಗಳ ನೇಮಕಾತಿಗೆ ಅರ್ಹತಾ ನಿಯಮಗಳನ್ನು ನಿಗದಿಪಡಿಸಿ, ಜೂನ್‌ 6ರಂದು ಅಂತಿಮ ಅಧಿಸೂಚನೆ ಹೊರಡಿಸಿದೆ. ಈ ಕುರಿತು ಜೂನ್‌ 7ರಂದು ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿದೆ. ಇನ್ನು ನ್ಯಾಯಾಲಯ ಪರಿಗಣಿಸಬೇಕಾದ ಯಾವ ಅಂಶಗಳೂ ಉಳಿದಿಲ್ಲ. ಆದ್ದರಿಂದ, ಅರ್ಜಿಯನ್ನು ಇತ್ಯರ್ಥಪಡಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟು ಮನವಿ ವಿಲೇವಾರಿ ಮಾಡಿತು.

ಫಾರ್ಮಸಿ ಕಾಯಿದೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವಲ್ಲಿ ಫಾರ್ಮಸಿ ಇನ್‌ಸ್ಪೆಕ್ಟರ್ ಪಾತ್ರ ಮುಖ್ಯವಾಗಿದೆ. ಫಾರ್ಮಸಿ ಕಂಪೆನಿಗಳು ಪರವಾನಗಿ ಪಡೆಯದೇ ವ್ಯಾಪಾರ ವಹಿವಾಟು ನಡೆಸುವ ಕುರಿತು ಸಲ್ಲಿಕೆಯಾಗುವ ದೂರುಗಳನ್ನು ತನಿಖೆ ನಡೆಸುವ ಅಧಿಕಾರ ಫಾರ್ಮಸಿ ಇನ್‌ಸ್ಪೆಕ್ಟರ್ ಹೊಂದಿರುತ್ತಾರೆ. ಆದ್ದರಿಂದ, ಅವರ ನೇಮಕಾತಿಗೆ ಅರ್ಹತಾ ನಿಯಮಗಳನ್ನು ರೂಪಿಸಬೇಕು ಎಂದು ಸರ್ಕಾರ ಮತ್ತು ರಾಜ್ಯ ಫಾರ್ಮಸಿ ಕೌನ್ಸಿಲ್‌ಗೆ ಹೈಕೋರ್ಟ್ ಹಿಂದೆ ನಿರ್ದೇಶಿಸಿತ್ತು.

ಫಾರ್ಮಸಿ ಇನ್‌ಸ್ಪೆಕ್ಟರ್‌ಗಳ ನೇಮಕಾತಿಗೆ ಅರ್ಹತಾ ನಿಯಮ ರೂಪಿಸುವ ವಿಚಾರದಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಫೆ.14ರಂದು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಹೈಕೋರ್ಟ್, ಸಂಬಂಧಪಟ್ಟ ಸಚಿವರನ್ನೇ ನ್ಯಾಯಾಲಯಕ್ಕೆ ಕರೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಅಲ್ಲದೇ, ಪ್ರಕರಣವನ್ನು ಮುಖ್ಯಮಂತ್ರಿಗಳ ಮುಂದೆ ಮಂಡಿಸಿ, ಶೀಘ್ರ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.