High Court of Karnataka
High Court of Karnataka  
ಸುದ್ದಿಗಳು

[ಫಾರ್ಮಸಿ ಇನ್‌ಸ್ಪೆಕ್ಟರ್‌ಗಳ ನೇಮಕಾತಿ ನಿಯಮ] ಮೂರು ವಾರದಲ್ಲಿ ಗೆಜೆಟ್‌ ಅಧಿಸೂಚನೆ: ಹೈಕೋರ್ಟ್‌ಗೆ ಸರ್ಕಾರದ ವಿವರಣೆ

Bar & Bench

ಫಾರ್ಮಸಿ ಇನ್‌ಸ್ಪೆಕ್ಟರ್‌ಗಳ ನೇಮಕಾತಿಗೆ ಅರ್ಹತೆ ನಿಗದಿಪಡಿಸಿ ಕರಡು ನಿಯಮಗಳನ್ನು ಪ್ರಕಟಿಸಲಾಗಿದ್ದು, ಮೂರು ದಿನಗಳ ಒಳಗೆ ಗೆಜೆಟ್ ಅಧಿಸೂಚನೆ ಹೊರಡಿಸಲಾಗುವುದು ಎಂದು ಗುರುವಾರ ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಫಾರ್ಮಸಿ ಕಾಯಿದೆ-1948ರ ನಿಯಮಗಳನ್ನು ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕೊಪ್ಪಳದ ಅಶೋಕ್ ಸ್ವಾಮಿ ಹೆರೂರು ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರಿದ್ದ ವಿಭಾಗೀಯ ಪೀಠವು ನಡೆಸಿತು.

ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ವಿಜಯ್ ಕುಮಾರ್ ಪಾಟೀಲ್ ಅವರು “ಫಾರ್ಮಸಿ ಇನ್‌ಸ್ಪೆಕ್ಟರ್‌ಗಳ ನೇಮಕಾತಿಗೆ ಅರ್ಹತೆ ನಿಗದಿಪಡಿಸಿ ರೂಪಿಸಲಾಗಿದ್ದ ಕರಡು ನಿಯಮಗಳನ್ನು ಮಾರ್ಚ್‌ 2ರಂದು ಪ್ರಕಟಿಸಲಾಗಿದೆ. ಮುಂದಿನ ಮೂರು ದಿನಗಳಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸಿ, ಸಾರ್ವಜನಿಕ ಆಕ್ಷೇಪಣೆ ಸಲ್ಲಿಕೆಗೆ 15 ದಿನ ಕಾಲಾವಕಾಶ ನೀಡಲಾಗುವುದು. ಎಲ್ಲಾ ಆಕ್ಷೇಪಣೆಗಳನ್ನು ಪರಿಗಣಿಸಿದ ನಂತರ ನಿಯಮಗಳನ್ನು ಅಂತಿಮಗೊಳಿಸಿ, ಗೆಜೆಟ್ ಅಧಿಸೂಚನೆ ಹೊರಡಿಸಲಾಗುವುದು. ಅದಕ್ಕಾಗಿ ಮೂರರಿಂದ ನಾಲ್ಕು ವಾರ ಕಾಲಾವಕಾಶ ನೀಡಬೇಕು” ಎಂದು ಮನವಿ ಮಾಡಿದರು.

ಇದನ್ನು ಪರಿಗಣಿಸಿ ಸರ್ಕಾರಕ್ಕೆ ಮೂರು ವಾರ ಕಾಲಾವಕಾಶ ನೀಡಿದ ಪೀಠವು ಮುಂದಿನ ವಿಚಾರಣೆ ವೇಳೆ ಅನುಪಾಲನಾ ವರದಿ ಸಲ್ಲಿಸುವಂತೆ ಸೂಚಿಸಿ, ವಿಚಾರಣೆಯನ್ನು ಏಪ್ರಿಲ್‌ 4ಕ್ಕೆ ಮುಂದೂಡಿತು.

ಕಳೆದ ವಿಚಾರಣೆಯಲ್ಲಿ ಫಾರ್ಮಸಿ ಇನ್‌ಸ್ಪೆಕ್ಟರ್‌ಗಳ ನೇಮಕಾತಿಗೆ ಅರ್ಹತಾ ನಿಯಮ ರೂಪಿಸುವ ವಿಚಾರದಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಫೆ.14ರಂದು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಹೈಕೋರ್ಟ್, ಸಂಬಂಧಪಟ್ಟ ಸಚಿವರನ್ನೇ ನ್ಯಾಯಾಲಯಕ್ಕೆ ಕರೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಅಲ್ಲದೇ, ಪ್ರಕರಣವನ್ನು ಮುಖ್ಯಮಂತ್ರಿಗಳ ಮುಂದೆ ಮಂಡಿಸಿ, ಶೀಘ್ರ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿತ್ತು.

ಫಾರ್ಮಸಿ ಕಾಯಿದೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವಲ್ಲಿ ಫಾರ್ಮಸಿ ಇನ್‌ಸ್ಪೆಕ್ಟರ್ ಪಾತ್ರ ಮುಖ್ಯವಾಗಿದೆ. ಫಾರ್ಮಾ ಕಂಪೆನಿಗಳು ಪರವಾನಗಿ ಪಡೆಯದೇ ವ್ಯಾಪಾರ ವಹಿವಾಟು ನಡೆಸುವ ಕುರಿತು ಸಲ್ಲಿಕೆಯಾಗುವ ದೂರುಗಳನ್ನು ತನಿಖೆ ನಡೆಸುವ ಅಧಿಕಾರ ಫಾರ್ಮಸಿ ಇನ್‌ಸ್ಪೆಕ್ಟರ್ ಹೊಂದಿರುತ್ತಾರೆ. ಆದ್ದರಿಂದ, ಅವರ ನೇಮಕಾತಿಗೆ ಅರ್ಹತಾ ನಿಯಮಗಳನ್ನು ರೂಪಿಸಬೇಕು ಎಂದು ಸರ್ಕಾರ ಮತ್ತು ರಾಜ್ಯ ಫಾರ್ಮಸಿ ಕೌನ್ಸಿಲ್‌ಗೆ ಹೈಕೋರ್ಟ್ ಈ ಹಿಂದೆ ನಿರ್ದೇಶಿಸಿತ್ತು.