ಸುದ್ದಿಗಳು

ಕಾಶ್ಮೀರದ ಹೈಕೋರ್ಟ್‌ ನ್ಯಾಯಮೂರ್ತಿಯವರಿಂದ ಕರೆ: ಜಾಮೀನು ಅರ್ಜಿ ವಿಚಾರಣೆ ತಡೆಹಿಡಿದ ಸೆಷನ್ಸ್‌ ನ್ಯಾಯಾಧೀಶರು

Bar & Bench

ಮನವಿದಾರರೊಬ್ಬರಿಗೆ ಜಾಮೀನು ಮಂಜೂರು ಮಾಡಬಾರದು ಎಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ನ್ಯಾಯಮೂರ್ತಿಯೊಬ್ಬರ ಕಾರ್ಯದರ್ಶಿ ಫೋನ್‌ ಮಾಡಿ ಸೂಚನೆ ನೀಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಸಲಾಗದ ಅಸಹಾಯಕತೆಯನ್ನು ಶ್ರೀನಗರದ ಸೆಷನ್ಸ್‌ ನ್ಯಾಯಾಧೀಶರೊಬ್ಬರು ವ್ಯಕ್ತಪಡಿಸಿದ್ದಾರೆ (ಶೇಖ್‌ ಸಲ್ಮಾನ್‌ ವರ್ಸಸ್‌ ಜೆಕೆಯುಟಿ, ಎಸ್‌ಎಚ್‌ಒ ಪಿ/ಎಸ್‌ ಸದ್ದಾರ್‌, ಶ್ರೀನಗರ).

ಶೇಖ್‌ ಸಲ್ಮಾನ್‌ ಎಂಬವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಗೆ ನಿಗದಿಯಾಗಿದ್ದು, ಸೋಮವಾರ ಬೆಳಿಗ್ಗೆ 9.51ಕ್ಕೆ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ನ್ಯಾಯಮೂರ್ತಿಯಾದ ಜಾವೇದ್‌ ಇಕ್ಬಾಲ್‌ ವಾನಿ ಅವರ ಕಾರ್ಯದರ್ಶಿ ದೂರವಾಣಿ ಕರೆ ಮಾಡಿದ್ದರು ಎಂದು ಪ್ರಧಾನ ಸೆಷನ್ಸ್‌ ನ್ಯಾಯಾಧೀಶ ಅಬ್ದುಲ್‌ ರಷೀದ್‌ ಮಲಿಕ್‌ ತಮ್ಮ ಆದೇಶದಲ್ಲಿ ದಾಖಲಿಸಿದ್ದಾರೆ.

“ ಆರೋಪಿ ಶೇಖ್‌ ಸಲ್ಮಾನ್‌ ಅವರಿಗೆ ನೀವು ಯಾವುದೇ ತೆರನಾದ ಜಾಮೀನು ಮಂಜೂರು ಆಗದಂತೆ ನೋಡಿಕೊಳ್ಳಬೇಕು, ನಿರೀಕ್ಷಣಾ ಜಾಮೀನು ಅರ್ಜಿ ಬಾಕಿ ಇದ್ದರೂ ಇದೇ ನಿರ್ದೇಶನ ಅನ್ವಯವಾಗುತ್ತದೆ ಎಂದು ಗೌರವಾನ್ವಿತ ನ್ಯಾಯಮೂರ್ತಿ ಜಾವೇದ್‌ ಇಕ್ಬಾಲ್‌ ವಾನಿ ಅವರ ಸೂಚನೆಯಂತೆ ನಿಮಗೆ ತಿಳಿಸಲು ನನಗೆ ನಿರ್ದೇಶಿಸಲಾಗಿದೆ,” ಎಂದು ನ್ಯಾ. ಮಲಿಕ್‌ ಅವರು ತಮ್ಮ ಆದೇಶದಲ್ಲಿ ದಾಖಲಿಸಿದ್ದಾರೆ. ನ್ಯಾ. ವಾನಿ ಅವರ ಕಾರ್ಯದರ್ಶಿ ತಾರೀಕ್‌ ಅಹ್ಮದ್‌ ಮೋಟಾ ಅವರು ದೂರವಾಣಿ ಮೂಲಕ ತನಗೆ ಮೇಲಿನಂತೆ ನಿರ್ದೇಶಿಸಿದರು ಎಂದು ಅವರು ದಾಖಲಿಸಿದ್ದಾರೆ.

ಇದನ್ನು ಉಲ್ಲೇಖಿಸಿ ಸೆಷನ್ಸ್‌ ನ್ಯಾಯಾಧೀಶರು ಅರ್ಜಿ ವಿಚಾರಣೆಗೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಪ್ರಕರಣದಲ್ಲಿ ವ್ಯಕ್ತಿಯ ಸ್ವಾತಂತ್ರ್ಯ ಮಿಳಿತವಾಗಿರುವುದರಿಂದ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ಜುಡಿಷಿಯಲ್‌ ರಿಜಿಸ್ಟ್ರಾರ್‌ ಅವರ ಮುಂದೆ ಸಲ್ಲಿಸಿ, ಆ ಮೂಲಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರ ಮುಂದೆ ಮಡಿಸುವಂತೆ ಸೆಷನ್ಸ್‌ ನ್ಯಾಯಾಧೀಶ ಮಲಿಕ್‌ ನಿರ್ದೇಶಿಸಿದ್ದಾರೆ.

ಅದೇ ದಿನದಂದು ಶ್ರೀನಗರದಲ್ಲಿರುವ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಜುಡಿಷಿಯಲ್‌ ರಿಜಿಸ್ಟ್ರಾರ್‌ ಅವರ ಮುಂದೆ ಹಾಜರಾಗುವಂತೆ ಅರ್ಜಿದಾರರ ವಕೀಲರಿಗೆ ನ್ಯಾಯಾಲಯವು ಸೂಚನೆ ನೀಡಿತು.

ವಕೀಲ ಆತಿರ್‌ ಜಾವೇದ್‌ ಅವರ ಮೂಲಕ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 307 (ಕೊಲೆ ಪ್ರಯತ್ನ), 341 (ಕಾನೂನುಬಾಹಿರ ಒತ್ತೆಗೆ ಶಿಕ್ಷೆ), 323ರ (ಹಿಂಸೆ ನೀಡಿದ್ದಕ್ಕೆ ಶಿಕ್ಷೆ) ಅಡಿ ದೂರು ದಾಖಲಿಸಲಾಗಿದೆ.