ಹೆಣ್ಣು ಮಕ್ಕಳ ಕಿವಿ ಚುಚ್ಚುವುದು ಮಕ್ಕಳ ದೌರ್ಜನ್ಯವಲ್ಲ ಎಂದು ತಿಳಿಸಿರುವ ದೆಹಲಿ ಹೈಕೋರ್ಟ್ ಜನಪ್ರಿಯ ಯೂಟ್ಯೂಬರ್ ʼಫ್ಲೈಯಿಂಗ್ ಬೀಸ್ಟ್ʼ ವ್ಲಾಗ್ ಖ್ಯಾತಿಯ ಗೌರವ್ ತನೇಜಾ ಹಾಗೂ ಅವರ ಪತ್ನಿ ರಿತು ರಥಿ ಅವರ ವಿರುದ್ಧ ಬರೆದಿರುವ ಮಾನಹಾನಿಕರ ಲೇಖನವನ್ನು ತೆಗೆದುಹಾಕುವಂತೆ ಇತ್ತೀಚೆಗೆ ಮಧ್ಯಂತರ ಆದೇಶ ನೀಡಿದೆ.
ಮಕ್ಕಳ ಮೇಲಿನ ದೌರ್ಜನ್ಯದ ಆರೋಪಗಳನ್ನು ವಿವರಿಸುವ ಲೇಖನವನ್ನು ಮೇ 8ರಂದು ಮಿಂಟ್ ಪ್ರಕಟಿಸಿತ್ತು. ತನೇಜಾ ಅವರು ತಮ್ಮ ಹಿರಿಯ ಮಗಳಿಗೆ ಕಿವಿ ಚುಚ್ಚಿಸುತ್ತಿರುವ ವೀಡಿಯೊವನ್ನು ಅದರಲ್ಲಿ ಖಂಡಿಸಲಾಗಿತ್ತು.
ಹೆಣ್ಣು ಮಗುವಿನ ಕಿವಿ ಚುಚ್ಚುವುದನ್ನು ಮಕ್ಕಳ ಮೇಲಿನ ದೌರ್ಜನ್ಯ ಎಂದು ಕರೆಯಲಾಗದು. ಮಕ್ಕಳ ದುರುಪಯೋಗದ ಆರೋಪಗಳು ಗಂಭೀರ ಸ್ವರೂಪದ್ದಾಗಿರಬೇಕು. ಸೂಕ್ತ ಕಾಳಜಿ ಮತ್ತು ಪರಿಶೀಲನೆ ಇಲ್ಲದೆ ಲೇಖಕರ ಅಭಿಪ್ರಾಯ ಆಧರಿಸಿ ಆರೋಪ ಮಾಡಲಾಗದು ಎಂದು ನ್ಯಾಯಾಲಯ ಹೇಳಿದೆ.
ಲೇಖನವನ್ನು ಆಫ್‌ಲೈನ್ ಅಥವಾ ಆನ್‌ಲೈನ್ ವಿಧಾನದಲ್ಲಿ ಪ್ರಕಟಿಸದಂತೆ, ಪ್ರಸಾರ ಮಾಡದಂತೆ ಮಿಂಟ್ ಮುಖ್ಯ ಸಂಪಾದಕ ಶ್ರುತ್‌ಜಿತ್ ಕೆ ಕೆ ಅವರಿಗೆ ನ್ಯಾಯಾಲಯ ಸೂಚಿಸಿದೆ. ಅಲ್ಲದೆ ಅದಕ್ಕೆ ಸಂಬಂಧಿಸಿದ ಮಾನಹಾನಿಕರ ಟ್ವೀಟ್‌ಗಳನ್ನು ತೆಗೆದುಹಾಕುವಂತೆ ಸುದ್ದಿ ಬರೆದಿದ್ದ ಪತ್ರಕರ್ತ ಅಭಿಷೇಕ್ ಬಕ್ಷಿ ಅವರಿಗೆ ನ್ಯಾಯಮೂರ್ತಿಗಳು ನಿರ್ದೇಶಿಸಿದ್ದಾರೆ.
ಆದೇಶದ ಪ್ರತಿಯನ್ನು ಇಲ್ಲಿ ಓದಿ: