ಅಕ್ರಮ ಹಣ ಹೊಂದಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ದೆಹಲಿಯಿಂದ ಅಲಹಾಬಾದ್‌ಗೆ ವರ್ಗಾವಣೆಗೊಂಡ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ವಿರುದ್ಧ ಆಂತರಿಕ ತನಿಖೆ ನಡೆಯುತ್ತಿರುವುದರಿಂದ ಅವರಿಗೆ ಪ್ರಮಾಣ ವಚನ ಬೋಧಿಸುವುದನ್ನು ನಿಲ್ಲಿಸುವಂತೆ ಕೋರಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಲಾಗಿದೆ.
ನ್ಯಾಯಮೂರ್ತಿ ವರ್ಮಾ ಅವರ ವರ್ಗಾವಣೆ ಮತ್ತು ಪ್ರಸ್ತಾವಿತ ಪ್ರಮಾಣ ವಚನ ಸ್ವೀಕಾರ ಸಂವಿಧಾನವನ್ನು ಉಲ್ಲಂಘಿಸುತ್ತದೆ ಎಂದು ವಕೀಲ ವಿಕಾಸ್ ಚತುರ್ವೇದಿ ಅವರು ವಕೀಲ ಅಶೋಕ್ ಪಾಂಡೆ ಅವರ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ವಾದಿಸಲಾಗಿದೆ.
ಸಿಜೆಐ ಸಂಜೀವ್ ಖನ್ನಾ ಅವರು ನ್ಯಾಯಮೂರ್ತಿ ವರ್ಮಾ ಅವರಿಗೆ ಯಾವುದೇ ನ್ಯಾಯಾಂಗ ಕೆಲಸವನ್ನು ನಿಯೋಜಿಸದಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರಿಗೆ ಈಗಾಗಲೇ ನಿರ್ದೇಶನ ನೀಡಿರುವುದರಿಂದ ಅವರಿಗೆ ಯಾವ ಉದ್ದೇಶಕ್ಕೆ ಪ್ರಮಾಣ ವಚನ ಬೋಧಿಸಲಾಗುತ್ತಿದೆ ಎಂದು ಅರ್ಜಿದಾರರು ಪ್ರಶ್ನಿಸಿದ್ದಾರೆ.
ನ್ಯಾಯಾಧೀಶರು ತಮ್ಮ ಕಚೇರಿಯ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸುವುದಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದ್ದರಿಂದ, ಪ್ರಮಾಣ ವಚನ ಸ್ವೀಕರಿಸಿದ ನಂತರ ನ್ಯಾ. ವರ್ಮಾ ಅವರಿಂದ ನ್ಯಾಯಾಂಗ ಕೆಲಸ ತಡೆಹಿಡಿಯುವ ನಿರ್ಧಾರ ಪ್ರಮಾಣ ವಚನ ಸ್ವೀಕಾರದ ಸಾಂವಿಧಾನಿಕ ಪಾವಿತ್ರ್ಯವನ್ನು ಹಾಳು ಮಾಡುತ್ತದೆ ಮತ್ತು ಪ್ರಕ್ರಿಯೆಯನ್ನು ಕೇವಲ ಔಪಚಾರಿಕತೆಗೆ ಇಳಿಸುತ್ತದೆ.
ರಾಷ್ಟ್ರಪತಿಗಳ ಆದೇಶದ ಮೂಲಕ ನ್ಯಾಯಮೂರ್ತಿಯವರನ್ನು ಹುದ್ದೆಯಿಂದ ತೆಗೆದುಹಾಕದಿದ್ದರೆ, ಅವರ ಕೆಲಸವನ್ನು ನಿರಾಕರಿಸುವಂತಿಲ್ಲ.
ಉಳಿದ ನ್ಯಾಯಮೂರ್ತಿಗಳಂತೆಯೇ ನ್ಯಾಯಾಂಗ ಕೆಲಸ ನಿಯೋಜಿಸಲಾಗುವುದು ಎಂದು ಹೈಕೋರ್ಟ್ ಹೇಳಿದರೆ ಆಗ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಅರ್ಜಿದಾರರಾದ ನಾವು ಆಕ್ಷೇಪಿಸುವುದಿಲ್ಲ.
ಕೆಲಸ ನಿಯೋಜಿಸುವ ಜವಾಬ್ದಾರಿ ಹೈಕೋರ್ಟ್ ಸಿಜೆ ಅವರದ್ದಾಗಿರುತ್ತದೆಯೇ ವಿನಾ ಇದರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಪಾತ್ರವೇನೂ ಇರುವುದಿಲ್ಲ.
ನ್ಯಾಯಮೂರ್ತಿ ವರ್ಮಾ ಅವರನ್ನು ದೆಹಲಿಯಿಂದ ಅಲಹಾಬಾದ್‌ಗೆ ವರ್ಗಾವಣೆ ಮಾಡಿರುವುದನ್ನು ರದ್ದುಗೊಳಿಸಬೇಕು.
ಮಾರ್ಚ್ 14ರ ಸಂಜೆ ನ್ಯಾ. ವರ್ಮಾ ಅವರ ಮನೆಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿತ್ತು. ಬೆಂಕಿ ನಂದಿಸಲು ಹೋದ ಅಗ್ನಿಶಾಮಕ ಸಿಬ್ಬಂದಿಗೆ ಅವರ ಮನೆಯಲ್ಲಿ ಸುಟ್ಟು ಕರಕಲಾದ ಅಪಾರ ಪ್ರಮಾಣದ ನಗದು ದೊರೆತಿತ್ತು ಎಂಬ ಆರೋಪ ಕೇಳಿ ಬಂದಿತ್ತು.