Air Purifier  
ಸುದ್ದಿಗಳು

ಏರ್ ಪ್ಯೂರಿಫೈಯರ್ ಸಾಧನಗಳ ಜಿಎಸ್‌ಟಿ ಇಳಿಸುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಪಿಐಎಲ್

ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ವಿಕೋಪಕ್ಕೆ ತಿರುಗಿರುವ ಹೊತ್ತಿನಲ್ಲಿಯೇ ಅರ್ಜಿ ಮಹತ್ವ ಪಡೆದುಕೊಂಡಿದೆ.

Bar & Bench

ರಾಷ್ಟ್ರ ರಾಜಧಾನಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಯುಮಾಲಿನ್ಯ ವಿಕೋಪಕ್ಕೆ  ಹೋಗಿರುವ ಬೆನ್ನಲ್ಲಿಯೇ ಗಾಳಿ ಶುದ್ಧೀಕರಿಸುವ ಏರ್‌ ಪ್ಯೂರಿಫೈಯರ್‌ ಯಂತ್ರಗಳನ್ನು 'ವೈದ್ಯಕೀಯ ಸಾಧನ' ಎಂದು ಘೋಷಿಸಿ, ಅದಕ್ಕೆ 18% ಜಿಎಸ್‌ಟಿ ಬದಲು 5% ಜಿಎಸ್‌ಟಿ ವಿಧಿಸುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಲಾಗಿದೆ [ಕಪಿಲ್‌ ಮದನ್‌ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ದೆಹಲಿಯಲ್ಲಿ ತೀವ್ರ ವಾಯುಮಾಲಿನ್ಯದಿಂದ ಉಂಟಾಗಿರುವ “ಅತೀ ಗಂಭೀರ ತುರ್ತು ಪರಿಸ್ಥಿತಿ ಗಮನಿಸಿ ಏರ್‌ ಪ್ಯೂರಿಫೈಯರ್‌ಗಳನ್ನು ಐಷಾರಾಮಿ ವಸ್ತುಗಳೆಂದು ವರ್ಗೀಕರಿಸಬಾರದು ಎಂದು ವಕೀಲ ಕಪಿಲ್‌ ಮದನ್‌ ಸಲ್ಲಿಸಿರುವ ಅರ್ಜಿ ತಿಳಿಸಿದೆ.

ಒಳಾಂಗಣದಲ್ಲಿ ಕನಿಷ್ಠ ಮಟ್ಟದ ಸುರಕ್ಷಿತ ಗಾಳಿ ಒದಗಿಸುವುದಕ್ಕಾಗಿ ಅವಶ್ಯಕವಾಗಿರುವ ಏರ್‌ಪ್ಯೂರಿಫೈಯರ್‌ ಮೇಲೆ ಯಥೇಚ್ಚ ಪ್ರಮಾಣದಲ್ಲಿ ಜಿಎಸ್‌ಟಿ ವಿಧಿಸಿದರೆ ಅವು ಸಮಾಜದ ಬೃಹತ್‌ ವರ್ಗದ ಜನರಿಗೆ ತಲುಪುವುದು ಅಸಾಧ್ಯವಾಗುತ್ತದೆ. ವಿವೇಚನಾರಹಿತವಾದ, ಅಸಂಗತವಾದ ಹಾಗೂ ಸಂವಿಧಾನಾತ್ಮಕವಾಗಿ ಅನುಮತಿ ಇಲ್ಲದಂತಹ ಹೊರೆ ಹೊರಿಸಿದಂತಾಗುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ.  

ಪ್ರಕರಣವನ್ನು ಬುಧವಾರ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರನ್ನೊಳಗೊಂಡ ವಿಭಾಗೀಯ ಪೀಠ ವಿಚಾರಣೆ ನಡೆಸಲಿದೆ.

ಅರ್ಜಿಯ ಪ್ರಮುಖಾಂಶಗಳು

  • ಕೇಂದ್ರ ಸರ್ಕಾರ 2020ರಲ್ಲಿ ಹೊರಡಿಸಿದ ಅಧಿಸೂಚನೆ ಪ್ರಕಾರ ಏರ್‌ ಪ್ಯೂರಿಫೈಯರ್‌ಗಳು ‘ವೈದ್ಯಕೀಯ ಸಾಧನʼ ಎನಿಸಿಕೊಳ್ಳುತ್ತವೆ.

  • ಸುರಕ್ಷಿತ ಉಸಿರಾಟಕ್ಕೆ ನೆರವಾಗುವುದು ಹಾಗೂ ಜೀವಕ್ಕೆ ಅಪಾಯಕಾರಿಯಾದ ವಾಯುಮಾಲಿನ್ಯದಿಂದ ರಕ್ಷಿಸುವ ಏರ್‌ ಪೂರಿಫೈಯರ್‌ಗಳು ವೈದ್ಯಕೀಯ ಸಾಧನಗಳಂತೆ ಕಾರ್ಯ ನಿರ್ವಹಿಸುತ್ತವೆ. ಹೀಗಾಗಿ ಅವು ರೋಗ ನಿರೋಧಕ ಮತ್ತು ಶಾರೀರಿಕ ನೆರವು ಕಾರ್ಯ ನಿರ್ವಹಿಸುವ ಸಾಧನಗಳ ವರ್ಗಕ್ಕೆ ನೇರವಾಗಿ ಸೇರುತ್ತವೆ.

  • ಇಂಥದ್ದೇ ಕಾರ್ಯ ನಿರ್ವಹಿಸುಯವ ಉಳಿದ ವೈದ್ಯಕೀಯ ಸಾಧನಗಳಿಗೆ ಶೇ 5ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದ್ದರೂ ಈ ಉಪಕರಣಕ್ಕೆ ಮಾತ್ರ ಶೇ. 18 ರಷ್ಟು ಜಿಎಸ್‌ಟಿ ವಿಧಿಸುವುದು ಅನಿಯಂತ್ರಿತ, ಅಸಮಂಜಸ ಮತ್ತು ತಾರತಮ್ಯದ ಸಂಗತಿಯಾಗುತ್ತದೆ.

  • ಇಂತಹ ವಿಭಿನ್ನ ತೆರಿಗೆ ನೀತಿ ಸಾರ್ವಜನಿಕ ಆರೋಗ್ಯ ಉದ್ದೇಶಗಳಿಗೆ ಸಂಬಂಧಿಸಿದಂತೆ ತಾರ್ಕಿಕ ನಂಟು ಹೊಂದಿಲ್ಲ.