ಕೇರಳ ಹೈಕೋರ್ಟ್, ಭಾರತ 
ಸುದ್ದಿಗಳು

'ಇಂಡಿಯಾʼ ಹೆಸರಿಗೆ ತಕರಾರು, 'ಕಮಲ' ಚಿಹ್ನೆಯ ವಿರುದ್ಧ ದೂರು: ಕೇರಳ, ಮದ್ರಾಸ್‌ ಹೈಕೋರ್ಟ್‌ಗಳಲ್ಲಿ ಪ್ರತ್ಯೇಕ ಪ್ರಕರಣ

Bar & Bench

ಪ್ರತಿಪಕ್ಷಗಳ ರಾಜಕೀಯ ಮೈತ್ರಿಕೂಟಕ್ಕೆ ಇಂಡಿಯಾ- INDIA (ʼಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿʼ) ಎಂದು ಹೆಸರಿಸಿರುವುದನ್ನು ಪ್ರಶ್ನಿಸಿ ಮತ್ತು ಧಾರ್ಮಿಕ ಚಿಹ್ನೆಯಾಗಿರುವ ಕಮಲವನ್ನು ಬಿಜೆಪಿ ರಾಜಕೀಯ ಲಾಂಛನವಾಗಿ ಬಳಸುತ್ತಿರುವುದಕ್ಕೆ ಆಕ್ಷೇಪಿಸಿ ದಕ್ಷಿಣ ಭಾರತದ ಎರಡು ಹೈಕೋರ್ಟ್‌ಗಳಲ್ಲಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಲಾಗಿದೆ.

ತನ್ನ ಚುನಾವಣಾ ಪ್ರಚಾರಕ್ಕಾಗಿ 26 ವಿರೋಧ ಪಕ್ಷಗಳನ್ನು ಒಳಗೊಂಡ ರಾಜಕೀಯ ಮೈತ್ರಿಕೂಟ 'ಇಂಡಿಯಾ' ಎಂಬ ಸಂಕ್ಷೇಪಾಕ್ಷರ ಬಳಕೆ ಮಾಡುವುದನ್ನು ತಡೆಯುವಂತೆ ಕೋರಿ ಕೇರಳ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ. ಮತ್ತೊಂದೆಡೆ ಕಮಲದ ಹೂವಿನ ಚಿಹ್ನೆಯನ್ನು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಹಂಚಿಕೆ ಮಾಡಿರುವುದನ್ನು ಪ್ರಶ್ನಿಸಿ ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಲಾಗಿದೆ.

ʼಇಂಡಿಯಾʼ ಪದವನ್ನು ವಿರೋಧ ಪಕ್ಷಗಳ ಒಕ್ಕೂಟ ಬಳಸುತ್ತಿರುವುದು ಲಾಂಛನ ಮತ್ತು ಹೆಸರುಗಳ (ಅನುಚತ ಬಳಕೆ ತಡೆ) ಕಾಯಿದೆ- 1950ರ ಉಲ್ಲಂಘನೆಯಾಗಿದೆ ಎಂದು ಕೆವಿನ್ ಪೀಟರ್ ಎಂಬುವವರು ಕೇರಳ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಕೇಂದ್ರ ಸರ್ಕಾರದ ಪೂರ್ವಾನುಮತಿಯಿಲ್ಲದೆ ಕೆಲವು ಹೆಸರುಗಳು ಮತ್ತು ಲಾಂಛನಗಳ ಬಳಕೆ ಮಾಡುವುದನ್ನು ಕಾಯಿದೆ ನಿಷೇಧಿಸುತ್ತದೆ.

"ಇಂಡಿಯಾ" ಹೆಸರಿಗೆ ಸಾಂಕೇತಿಕ ಪ್ರಾಮುಖ್ಯ ಇದ್ದು ಇದನ್ನು ರಾಷ್ಟ್ರೀಯ ಸಂಕೇತವೆಂದು ಪರಿಗಣಿಸಲಾಗಿದೆ. ವಿರೋಧ ಪಕ್ಷಗಳ ಒಕ್ಕೂಟ ಈ ಪದ ಬಳಕೆ ಮಾಡಿರುವುದು ಮತದಾರರನ್ನು ಮೋಸಗೊಳಿಸುವ ಯತ್ನ ಮಾತ್ರವಲ್ಲದೆ ರಾಜಕೀಯ ಭಿನ್ನಾಭಿಪ್ರಾಯ ಮತ್ತು ಹಿಂಸಾಚಾರದ ಸಂಭಾವ್ಯ ಮೂಲವಾಗಿದೆ ಎಂದು ಅರ್ಜಿದಾರರು ದೂರಿದ್ದಾರೆ.

ಇದಲ್ಲದೆ, ಮೈತ್ರಿಕೂಟದ ಕ್ರಮಗಳು ಚುನಾವಣೆಯ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತವೆ, ಇಂತಹ ಕ್ರಮಗಳು ವೈವಿಧ್ಯತೆಯಲ್ಲಿ ಏಕತೆ ಎಂಬ ಸಂವಿಧಾನದ ಮೂಲಭೂತ ತತ್ವವನ್ನು ವಿರೂಪಗೊಳಿಸಬಹುದು. ಇಂಡಿಯಾ ಪದ ಬಳಕೆ ಪ್ರಶ್ನಿಸಿ ಚುನಾವಣಾ ಆಯೋಗ ಮತ್ತು ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಈ ಪದ ಬಳಕೆ ತಡೆಯುವಂತೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿ ಕೋರಿದೆ.

ʼಕಮಲʼ ಪ್ರಶ್ನಿಸಿ ಅರ್ಜಿ; ನೋಟಿಸ್‌

ಮದ್ರಾಸ್ ಹೈಕೋರ್ಟ್ ಮತ್ತು ಬಿಜೆಪಿ ಕಮಲದ ಚಿಹ್ನೆ

ಇತ್ತ ಬಿಜೆಪಿಯ ಕಮಲದ ಚಿಹ್ನೆ ಪ್ರಶ್ನಿಸಿರುವ ಅರ್ಜಿದಾರರೊಬ್ಬರಿಗೆ ತನ್ನ ನಿಜಾಯಿತಿ ಸಾಬೀತುಪಡಿಸುವುದಕ್ಕಾಗಿ ₹ 20,000 ಠೇವಣಿ ಇಡುವಂತೆ ಮದ್ರಾಸ್‌ ಹೈಕೋರ್ಟ್‌ ಸೂಚಿಸಿದೆ.

ತಮಿಳುನಾಡು ಮೂಲದ ಅಹಿಂಸಾ ಸೋಷಿಯಲಿಸ್ಟ್ ಪಕ್ಷದ ಸಂಸ್ಥಾಪಕ ಟಿ.ರಮೇಶ್ ಅವರು ಡಿಸೆಂಬರ್ 18ರೊಳಗೆ ಮೊತ್ತ ಠೇವಣಿ ಇಡುವಂತೆ ಮುಖ್ಯ ನ್ಯಾಯಮೂರ್ತಿ ಎಸ್.ವಿ.ಗಂಗಾಪುರ್‌ವಾಲಾ ಮತ್ತು ನ್ಯಾಯಮೂರ್ತಿ ಡಿ.ಭರತ ಚಕ್ರವರ್ತಿ ಅವರಿದ್ದ ಪೀಠ ನಿರ್ದೇಶನ ನೀಡಿತು.

ಈಗಾಗಲೇ ಇತ್ಯರ್ಥವಾಗಿರುವ ವಿಷಯದ ಬಗ್ಗೆ ರಮೇಶ್ ಪರ ವಕೀಲರು ವಾದಿಸುತ್ತಿರುವುದು ಕಂಡುಬಂದರೆ, ಠೇವಣಿ ಇರಿಸಿದ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ನ್ಯಾಯಪೀಠ ಎಚ್ಚರಿಕೆ ನೀಡಿದೆ.

ಕಮಲದ ಹೂವು ಭಾರತದ "ರಾಷ್ಟ್ರೀಯ ಹೂವು" ಆಗಿರುವುದರಿಂದ, ಆ ಚಿಹ್ನೆಯನ್ನು ಯಾವುದೇ ರಾಜಕೀಯ ಪಕ್ಷಕ್ಕೆ ಹಂಚಿಕೆ ಮಾಡುವಂತಿಲ್ಲ. ಹಾಗೆ ಮಾಡಿದರೆ ರಾಷ್ಟ್ರೀಯ ಸಮಗ್ರತೆಗೆ ಅವಮಾನ" ಎಂದು ರಮೇಶ್ ತಮ್ಮ ಮನವಿಯಲ್ಲಿ ಹೇಳಿದ್ದಾರೆ. ಕಮಲದ ಚಿಹ್ನೆ ಧಾರ್ಮಿಕ ಮತ್ತು ರಾಷ್ಟ್ರೀಯ ಸಂಕೇತವಾಗಿದ್ದು ಅದನ್ನು ಬಿಜೆಪಿಗೆ ಹಂಚಿಕೆ ಮಾಡುವ ಮೂಲಕ, ಭಾರತದ ಚುನಾವಣಾ ಆಯೋಗ ತನ್ನದೇ ನಿಯಮ ಉಲ್ಲಂಘಿಸಿದೆ ಎಂದು ದೂರಲಾಗಿದೆ. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಡಿಸೆಂಬರ್ 18 ಕ್ಕೆ ಮುಂದೂಡಿದೆ.