Junglee Rummy, Rummy Circle and Bombay High Court 
ಸುದ್ದಿಗಳು

ಜೂಜು ಆ್ಯಪ್‌ಗಳಾದ ಜಂಗ್ಲೀ ರಮ್ಮಿ ಹಾಗೂ ರಮ್ಮಿ ಸರ್ಕಲ್ ನಿಷೇಧ ಕೋರಿ ಬಾಂಬೆ ಹೈಕೋರ್ಟ್‌ಗೆ ಪಿಐಎಲ್

ಈ ಆ್ಯಪ್‌ಗಳು ವ್ಯಸನಕಾರಿಯಾಗಿದ್ದು ಬಳಕೆದಾರರಿಗೆ ಆರ್ಥಿಕವಾಗಿ ನಷ್ಟ ಉಂಟು ಮಾಡಿದ್ದು ಕೆಲವರನ್ನು ಆತ್ಮಹತ್ಯೆಯ ಸ್ಥಿತಿಗೆ ಕೊಂಡೊಯ್ದಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Bar & Bench

ಜೂಜಾಟ ಆ್ಯಪ್‌ಗಳಾದ ಜಂಗ್ಲೀ ರಮ್ಮಿ ಮತ್ತು ರಮ್ಮಿ ಸರ್ಕಲ್ ನಿಷೇಧಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

ಆ್ಯಪ್‌ಗಳು ವಿಶೇಷವಾಗಿ ಯುವಜನರಲ್ಲಿ ತೀವ್ರ ಸಾಮಾಜಿಕ ಹಾನಿಯನ್ನುಂಟು ಮಾಡುತ್ತಿರುವುದರಿಂದ ಇವುಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸೊಲಾಪೂರ್ ಮೂಲದ ಸಮಾಜ ಸೇವಕ ಗಣೇಶ್ ರಾಣು ನಾನಾವರೆ ಎಂಬುವರು ಅರ್ಜಿ ಸಲ್ಲಿಸಿದ್ದಾರೆ.

ತಾವು ಈ ಎರಡು ಆ್ಯಪ್‌ಗಳನ್ನು ನಿಷೇಧಿಸುವಂತೆ ಕೋರಿ ಈ ಹಿಂದೆ ರಾಷ್ಟ್ರಪತಿ ಪ್ರಧಾನ ಮಂತ್ರಿ ಕಚೇರಿ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಸೇರಿದಂತೆ ವಿವಿಧ ಉನ್ನತ ಮಟ್ಟದ ಕಚೇರಿಗಳಿಗೆ ಪತ್ರ ಬರೆದಿದ್ದರೂ ಯಾರೂ ಕ್ರಮ ಕೈಗೊಳ್ಳದ ಕಾರಣ ನ್ಯಾಯಾಲಯದ ಮೊರೆ ಹೋಗಿರುವುದಾಗಿ ನಾನಾವರೆ ತಿಳಿಸಿದ್ದಾರೆ.

ಮನವಿಯ ಪ್ರಮುಖಾಂಶಗಳು

  • ಈ ಆ್ಯಪ್‌ಗಳು ವ್ಯಸನಕಾರಿಯಾಗಿದ್ದು ಬಳಕೆದಾರರಿಗೆ ಆರ್ಥಿಕವಾಗಿ ನಷ್ಟ ಉಂಟು ಮಾಡಿದ್ದು ಕೆಲವರನ್ನು ಆತ್ಮಹತ್ಯೆಯ ಸ್ಥಿತಿಗೆ ಕೊಂಡೊಯ್ದಿದೆ

  • ಈ ಅಪ್ಲಿಕೇಶನ್‌ಗಳು 1867ರ ಸಾರ್ವಜನಿಕ ಜೂಜು ಕಾಯಿದೆ, 1887ರ ಬಾಂಬೆ ಜೂಜು ತಡೆ ಕಾಯಿದೆ ಮತ್ತು 2000ನೇ ಇಸವಿಯ ಮಾಹಿತಿ ತಂತ್ರಜ್ಞಾನ ಕಾಯಿದೆ ಸೇರಿದಂತೆ ವಿವಿಧ ಕಾನೂನುಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತವೆ

  • ಅವಕಾಶದ ಆಟವೆಂದು ಪರಿಗಣಿಸಲಾದ ಮತ್ತು ಭಾರತದ ಹಲವು ಭಾಗಗಳಲ್ಲಿ ಕಾನೂನುಬಾಹಿರ ಎನಿಸಿಕೊಂಡ ಜೂಜಿಗೆ ಉತ್ತೇಜನ ನೀಡುವ ಮೂಲಕ ಭಾರತೀಯ ದಂಡ ಸಂಹಿತೆಯನ್ನು ಈ ಆ್ಯಪ್‌ಗಳು  ಉಲ್ಲಂಘಿಸುತ್ತವೆ.

  • ಅಂತಹ ಆನ್‌ಲೈನ್‌ ಜೂಜಿಗೆ ತಾನು ಅವಕಾಶ ನೀಡಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಮಾಹಿತಿ ಹಕ್ಕು ಕಾಯಿದೆಯಡಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದೆ.

  • ಖ್ಯಾತನಾಮರು ಕೂಡ ಈ ಆ್ಯಪ್‌ಗಳನ್ನು ಪ್ರಚುರಪಡಿಸಿ ಅವುಗಳ ಜನಪ್ರಿಯತೆಗೆ ಕೊಡುಗೆ ನೀಡಿದ್ದು ಆ ಮೂಲಕ ಸಾಮಾಜಿಕ ಹಾನಿ ಉಂಟುಮಾಡಿದ್ದಾರೆ.

  • ಆ್ಯಪ್‌ಗಳನ್ನು ತಡೆಹಿಡಿಯುವಂತೆ ಗೂಗಲ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ಗೆ ಈಗಾಗಲೇ ಲೀಗಲ್‌ ನೋಟಿಸ್‌ ಕಳಿಸಲಾಗಿದೆ. ಆದರೂ ಈವರೆಗೆ ಅಲ್ಲಿಂದ ಉತ್ತರ ದೊರೆತಿಲ್ಲ. ಬದಲಿಗೆ ಸರ್ವರ್‌ಗಳು ಜಂಗ್ಲೀ ರಮ್ಮಿ ಮತ್ತು ರಮ್ಮಿ ಸರ್ಕಲ್‌ನ ಕಾರ್ಯಾಚರಣೆಗೆ ಅನುವು ಮಾಡಿವೆ.

  • ಆ್ಯಪ್‌ಗಳನ್ನು ನಿಷೇಧಿಸಬೇಕು ಮತ್ತು ಗೂಗಲ್‌ ಇಂಡಿಯಾ ಈ ಆ್ಯಪ್‌ಗಳಿಗೆ ಸರ್ವರ್‌ ಸೌಲಭ್ಯ ನೀಡುವುದನ್ನು ತಡೆಯುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವ ರಿಟ್‌ ಆದೇಶ ಹೊರಡಿಸಬೇಕು.