Uddhav Thackeray, Bombay High Court
Uddhav Thackeray, Bombay High Court  
ಸುದ್ದಿಗಳು

ಉದ್ಧವ್ ಠಾಕ್ರೆ, ಸಂಜಯ್ ರಾವುತ್ ಮತ್ತಿತರರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕೋರಿ ಬಾಂಬೆ ಹೈಕೋರ್ಟ್‌ಗೆ ಪಿಐಎಲ್

Bar & Bench

ತಮಗೆ ಸರಿಹೊಂದದ ರೀತಿಯಲ್ಲಿ ತೀರ್ಪು ಪ್ರಕಟವಾಗುತ್ತಿದೆ ಎಂಬ ಕಾರಣಕ್ಕೆ ಇಡೀ ನ್ಯಾಯಾಂಗ ವ್ಯವಸ್ಥೆಯನ್ನೇ ದೂಷಿಸುವಲ್ಲಿ ನಿರತರಾಗಿರುವ ಶಿವಸೇನೆ ಹಾಗೂ ಎನ್‌ಸಿಪಿಯ ಕೆಲ ನಾಯಕರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ [ಭಾರತೀಯ ವಕೀಲರ ಸಂಘ ಮತ್ತು ಸಂಜಯ್‌ ರಾವತ್‌ ಇನ್ನಿತರರ ನಡುವಣ ಪ್ರಕರಣ].

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಶಿವಸೇನಾ ಸಂಸದ ಸಂಜಯ್ ರಾವುತ್, ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಹಾಗೂ ಶಿವಸೇನೆ ಮುಖವಾಣಿ ʼಸಾಮ್ನಾʼದ ಪ್ರಕಾಶಕರಾದ ವಿವೇಕ್‌ ಕದಮ್‌ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವಂತೆ ಭಾರತೀಯ ವಕೀಲರ ಸಂಘ ಕೋರಿದೆ.

ತಮ್ಮ ವಿರೋಧಿಗಳನ್ನು ಜೈಲಿನಲ್ಲಿಡುವ ಅಥವಾ ಅಧಿಕಾರ ಮತ್ತು ಪೊಲೀಸ್ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಂಡು ಕಿರುಕುಳ ನೀಡುವ ಪ್ರತಿವಾದಿಗಳ ಯೋಜನೆ ಬಾಂಬೆ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನ ಆದೇಶಗಳಿಂದ ವಿಫಲವಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಬಿಜೆಪಿಯ ಕಿರೀಟ್‌ ಸೋಮೈಯ ಮತ್ತು ರಾವುತ್‌ ಅವರನ್ನೊಳಗೊಂಡ ಇತ್ತೀಚಿನ ಪ್ರಕರಣ, ಹಾಗೂ ಬಿಜೆಪಿಯೊಂದಿಗೆ ಸಂಪರ್ಕ ಹೊಂದಿರುವ ಅರ್ನಾಬ್‌ ಗೋಸ್ವಾಮಿ ರೀತಿಯ ಪ್ರಕರಣಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ನ್ಯಾಯಾಧೀಶರು ನೀಡುವ ಪ್ರತಿಯೊಂದು ಆದೇಶವನ್ನು ಅವಲೋಕಿಸಿ ಅವರನ್ನು ನಿಂದಿಸಲಾಗುತ್ತಿದೆ. ಇದನ್ನು ಗಮನಿಸಿ ಪ್ರತಿವಾದಿಗಳ ವಿರುದ್ಧ ಸ್ವಯಂ ಪ್ರೇರಿತ ಮೊಕದ್ದಮೆ ದಾಖಲಿಸಬೇಕು ಎಂದು ಮನವಿ ಹೈಕೋರ್ಟನ್ನು ಕೋರಿದೆ.