ಇಂಡಸ್ಇಂಡ್ ಬ್ಯಾಂಕ್ ಪ್ರವರ್ತಕರಾದ ಹಿಂದುಜಾ ಗ್ರೂಪ್‌ನ ʼಅರ್ಹತೆ ಮತ್ತು ಸೂಕ್ತ ಸ್ಥಾನಮಾನʼ ಕುರಿತು ತನಿಖೆ ನಡೆಸುವಂತೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಲಾಗಿದೆ.
ಅಪರಾಧ ಅಥವಾ ಹಣಕಾಸಿನ ವಂಚನೆಯ ರುಜುವಾತಾಗಿರುವ ಕಳಂಕಿತ ಪ್ರವರ್ತಕರು ಖಾಸಗಿ ಬ್ಯಾಂಕ್‌ಗಳಲ್ಲಿ ಹೊಂದಿರುವ ಪಾಲುದಾರಿಕೆಯನ್ನು ಶೇ 26ರಷ್ಟು ಹೆಚ್ಚಿಸುವ ನೀತಿಯನ್ನು ನಿರಾಕರಿಸಲು ಆರ್‌ಬಿಐ ಗೆ ನಿರ್ದೇಶನ ನೀಡಬೇಕು ಎಂದು ಕೂಡ ಮನವಿ ಕೋರಿದೆ.
ಭಾರತೀಯ ಖಾಸಗಿ ವಲಯದ ಬ್ಯಾಂಕ್‌ಗಳ ಮಾಲೀಕತ್ವ ಮತ್ತು ಕಾರ್ಪೊರೇಟ್ ಸ್ವರೂಪದ ಕುರಿತು ಇರುವ ಮಾರ್ಗಸೂಚಿಗಳನ್ನು ಆರ್‌ಬಿಐ ರಚಿಸಿರುವ ಆಂತರಿಕ ಕಾರ್ಯಕಾರಿ ಗುಂಪು (ಐಡಬ್ಲ್ಯೂಜಿ) ಪರಿಶೀಲಿಸಿದ ಹಿನ್ನೆಲೆಯಲ್ಲಿ ವಕೀಲ ಮತ್ತು ತೆರಿಗೆ ಸಲಹೆಗಾರ ಮಹೇಕ್ ಮಹೇಶ್ವರಿ ಅವರು ಅರ್ಜಿ ಸಲ್ಲಿಸಿದ್ದಾರೆ.
ಇಂಡಸ್ ಬ್ಯಾಂಕ್‌ನಲ್ಲಿ ಪ್ರವರ್ತಕರ ಪಾಲಿನ ಹೆಚ್ಚಳವು ಸಾರ್ವಜನಿಕ ಹಣವನ್ನು ಅಕ್ರಮ ಬಳಕೆಗೆ ತಿರುಗಿಸುವುದಕ್ಕೆ, ವರ್ಗಾಯಿಸುವುದಕ್ಕೆ ಆಸ್ಪದವೀಯಲಿದೆ. ಪ್ರವರ್ತಕರು ಭಾರತೀಯ ನಾಗರಿಕರಲ್ಲದೆ ಇರುವುದರಿಂದ, ವಿದೇಶಗಳಲ್ಲಿ ನೆಲೆಸಿರುವುದರಿಂದ ಭಾರತದ ಕಾನೂನುಗಳಿಂದ ಅವರು ಹೆಚ್ಚಿನ ಸುರಕ್ಷಾಭಾವವನ್ನು ಹೊಂದಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಪಾಲು ಹೊಂದಿರುವ ಪ್ರಜಾಪ್ರಭುತ್ವ ರಾಷ್ಟ್ರವೊಂದರ ಆರ್ಥಿಕತೆಯನ್ನು ಕೆಲ ಶಕ್ತಿಶಾಲಿ ಕೈಗಾರಿಕಾ ಸಂಸ್ಥೆಗಳು ನಿಯಂತ್ರಿಸಲು ಸಾಧ್ಯವಿಲ್ಲ. ಪ್ರಮುಖ ಆರ್ಥಿಕ ವಲಯಗಳಲ್ಲಿ ಪ್ರಭಾವಿ ಶ್ರೀಮಂತರ ಹಿಡಿತ ಹೆಚ್ಚುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಎಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.