High Court of Karnataka
High Court of Karnataka 
ಸುದ್ದಿಗಳು

ವಿಟಿಯು ಕುಲಪತಿ ನೇಮಕಾತಿ ಪ್ರಶ್ನಿಸಿ ಪಿಐಎಲ್‌ ಸಲ್ಲಿಕೆ: ಡಿ. 2ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದ ಹೈಕೋರ್ಟ್‌

Bar & Bench

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕುಲಪತಿಯನ್ನಾಗಿ ಎಸ್ ವಿದ್ಯಾಶಂಕರ್ ಅವರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಡಿಸೆಂಬರ್‌ 2ರಂದು ವಿಚಾರಣೆ ನಡೆಸಲಾಗುವುದು ಕರ್ನಾಟಕ ಹೈಕೋರ್ಟ್ ಸೋಮವಾರ ಹೇಳಿದೆ.

ಮೈಸೂರು ವಿಶ್ವವಿದ್ಯಾಲಯದ ಮಾಜಿ ಹಂಗಾಮಿ ಉಪಕುಲಪತಿ ಹಾಗೂ ನಿವೃತ್ತ ಪ್ರೊ. ಬಿ ಶಿವರಾಜ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಸೇವಾ ವಿಚಾರದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸ್ವೀಕಾರಾರ್ಹವಲ್ಲ. ಜೊತೆಗೆ ಅರ್ಜಿದಾರರು ಆ ಕುಲಪತಿ ಹುದ್ದೆಯ ಆಕಾಂಕ್ಷಿಯಲ್ಲ. ಸುಪ್ರೀಂ ಕೋರ್ಟ್‌ನ ಆದೇಶದಂತೆ ನೇಮಕದಿಂದ ಬಾದಿತರಾಗದವರು ಅದನ್ನು ಪ್ರಶ್ನಿಸುವಂತಿಲ್ಲ ಎಂದು ಹೇಳಿದ ಪೀಠವು ಡಿಸೆಂಬರ್‌ 2ಕ್ಕೆ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಹೇಳಿ ವಿಚಾರಣೆಯನ್ನು ಮುಂದೂಡಿತು.

ಅರ್ಜಿದಾರರ ಪರ ವಕೀಲರು, ವಿಟಿಯು ಕುಲಪತಿ ನೇಮಕಕ್ಕೆ ಶೋಧನಾ ಸಮಿತಿ ರಚನೆಯೇ ಅಕ್ರಮ. ಅದರಲ್ಲಿ ನಿಯಮ ಪಾಲನೆ ಮಾಡಿಲ್ಲ. ನಿಯಮದಂತೆ ಸಮಿತಿಯಲ್ಲಿ ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ (ಯುಜಿಸಿ) ಪ್ರತಿನಿಧಿಯನ್ನು ನಾಮನಿರ್ದೇಶನ ಮಾಡಿಲ್ಲ. ಸಮಿತಿಯಲ್ಲಿ ವಿಟಿಯುಗೆ ಸಂಬಂಧಿಸಿದವರೇ ಇಬ್ಬರು ಸದಸ್ಯರು ಇದ್ದರು. ನಿಯಮದಂತೆ ಆ ರೀತಿ ಯಾವ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕ ಮಾಡಲಾಗುತ್ತದೆಯೋ ಅದೇ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದವರು ಸಮಿತಿಯಲ್ಲಿ ಇರುವಂತಿಲ್ಲ ಎಂದು ಪೀಠಕ್ಕೆ ವಿವರಿಸಿದರು.

ಸರ್ಕಾರಿ ವಕೀಲರು, ಸೇವಾ ವಿಚಾರದಲ್ಲಿ ಪಿಐಎಲ್ ಸಲ್ಲಿಕೆಗೆ ಅವಕಾಶವಿಲ್ಲ. ನ್ಯಾಯಾಲಯ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದರು.