ಸುದ್ದಿಗಳು

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷಾ ವಿಷಯಕ್ಕೆ ಅಂಕಗಳ ಬದಲಿಗೆ ಗ್ರೇಡ್‌: ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆ

ಪ್ರಸಕ್ತ ವರ್ಷದಿಂದಲೇ ದ್ವಿಭಾಷಾ ಸೂತ್ರ ಜಾರಿಗೆ ತರುವ ನಿರ್ಧಾರ ತಳೆಯುವ ಮುನ್ನ ಸಾರ್ವಜನಿಕ ಚರ್ಚೆ ನಡೆಸಿಲ್ಲ. ಸಂಪುಟದ ಅನುಮೋದನೆ ಪಡೆದಿಲ್ಲ & ತಜ್ಞರ ಸಲಹೆ ಇಲ್ಲದೇ ಶಿಕ್ಷಣ ಸಚಿವರು ಏಕಪಕ್ಷೀಯವಾಗಿ ನಿರ್ಧಾರ ಮಾಡಿದ್ದಾರೆ ಎಂಬುದು ಆಕ್ಷೇಪ.

Bar & Bench

ಕರ್ನಾಟಕ ರಾಜ್ಯ ಪೌಢ ಶಿಕ್ಷಣ ಪರೀಕ್ಷಾ ಮಂಡಳಿ (ಎಸ್‌ಎಸ್‌ಎಲ್‌ ಸಿ) ನಡೆಸುವ  ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಅಂಕಗಳ ಬದಲಿಗೆ ಗ್ರೇಡ್‌ ನೀಡುವುದಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ಪ್ರಸ್ತಾವ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ಬೆಂಗಳೂರಿನ ಎಚ್‌ ಎನ್‌ ಚಂದನಾ ಮತ್ತು ಎಸ್ ವೆಂಕಟೇಶ್ ಅವರು ಅರ್ಜಿ ಸಲ್ಲಿಸಿದ್ದು, ಶಾಲಾ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಆಯುಕ್ತರು, ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಅವರನ್ನು ಪ್ರತಿವಾದಿಗಳನ್ನಾಗಿಸಲಾಗಿದೆ. ಅರ್ಜಿಯು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ  ಹಿಂದಿ ಸೇರಿದಂತೆ ತೃತೀಯ ಭಾಷೆ ಕಡ್ಡಾಯವಲ್ಲ. ಈ ಭಾಷೆಗಳಿಗೆ ಅಂಕಗಳ ಬದಲಿಗೆ ಗ್ರೇಡ್ ನೀಡಲಾಗುತ್ತದೆ. ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ದ್ವಿಭಾಷಾ ಸೂತ್ರವನ್ನು ಜಾರಿಗೆ ತರವುದಾಗಿ ತಿಳಿಸಿದ್ದಾರೆ. ಅಲ್ಲದೆ, ಸಚಿವರು ಈ ನಿರ್ಧಾರವನ್ನು ಪ್ರಕಟಿಸುವುದಕ್ಕೂ ಮುನ್ನ ಸಾರ್ವಜನಿಕವಾಗಿ ಚರ್ಚೆ ನಡೆಸಿಲ್ಲ. ಸಚಿವ ಸಂಪುಟದ ಅನುಮೋದನೆ ಪಡೆದಿಲ್ಲ ಹಾಗೂ ಭಾಷಾ ತಜ್ಞರ ಸಲಹೆ ಇಲ್ಲದೇ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆಕ್ಷೇಪಿಸಲಾಗಿದೆ.

ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಅಂದರೆ ಮಾರ್ಚ್ 31ರಂದು ಈ ರೀತಿಯ ಹೇಳಿಕೆ ಹೊರಬಿದ್ದಿರುವುದರಿಂದ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ.  ಆದರೆ, ಈವರೆಗೂ ಈ ಕುರಿತಂತೆ ಯಾವುದೇ ಅಧಿಕೃತ ಸರ್ಕಾರಿ ಆದೇಶ ಅಥವಾ ಅಧಿಸೂಚನೆ ಹೊರಬಂದಿಲ್ಲ. ಸಚಿವರ ಈ ನಿರ್ಧಾರಕ್ಕಾಗಿ ಸಾರ್ವಜನಿಕರಿಂದ  ವ್ಯಾಪಕ ವಿರೋಧ ವ್ಯಕ್ತವಾಗಿದೆ ಎಂದು ವಿವರಿಸಲಾಗಿದೆ.

ಸಚಿವರ ಈ ನಿರ್ಧಾರ ಸಂವಿಧಾನದ 14ನೇ ವಿಧಿಯಡಿ ಸಮಾನತೆ ಹಕ್ಕಿನ ಉಲ್ಲಂಘನೆಯಾಗಿದೆ. 21ನೇ ವಿಧಿಯಡಿ ಶಿಕ್ಷಣ ಹಕ್ಕಿನ ಮೇಲೆ ಪರಿಣಾಮ ಬೀರಿದ್ದು, ವಿದ್ಯಾರ್ಥಿಗಳ ಭವಿಷ್ಯವನ್ನು ಅಸ್ಥಿರಗೊಳಿಸುತ್ತದೆ. ಸರ್ಕಾರದ ಅಧಿಕೃತ ಆದೇಶವಿಲ್ಲದೆ ನೀತಿ ಜಾರಿಗೆ ತರಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರದ ನಿರ್ಧಾರವನ್ನು ರದ್ದುಪಡಿಸುವ ನಿಟ್ಟಿನಲ್ಲಿ ಪೀಠ ಮಧ್ಯಪ್ರವೇಶಿಸಬೇಕು. ಸಚಿವರ ವಿವಾದಾತ್ಮಕ ಹೇಳಿಕೆಗೆ ತಡೆ ನೀಡಬೇಕು ಎಂದು ಕೋರಲಾಗಿದೆ.

ಸಚಿವ ಮಧು ಬಂಗಾರಪ್ಪ ಅವರು ಹಿಂದಿ ಸೇರಿದಂತೆ ಮೂರನೇ ಭಾಷಾ ವಿಷಯಗಳಿಗೆ ಹಿಂದಿನ ವರ್ಷದಂತೆ 100 ಅಂಕಗಳಿರಲಿವೆ. ಆದರೆ, ಮೌಲ್ಯಮಾಪನದ ಬಳಿಕ ಅಂಕಪಟ್ಟಿಯಲ್ಲಿ ಅಂಕ ನಮೂದಿಸದೇ ಗ್ರೇಡ್‌ ಎ, ಬಿ, ಸಿ ಮತ್ತು ಡಿ ಎಂದು ನಮೂದಿಸಲಾಗುತ್ತದೆ. ಇದುವರೆಗೂ ಮಕ್ಕಳು 625 ಅಂಕಗಳಿಗೆ ಪರೀಕ್ಷೆ ಬರೆಯುತ್ತಿದ್ದರು. ಈಗಲೂ ಅಷ್ಟೆ ಅಂಕಗಳಿಗೆ ಪರೀಕ್ಷೆ ಬರೆಯುತ್ತಾರೆ. ಆದರೆ, ತೃತೀಯ ಭಾಷೆ ಹೊರತುಪಡಿಸಿ ಉಳಿದ ವಿಷಯಗಳ ಗರಿಷ್ಠ 525 ಅಂಕಗಳನ್ನಷ್ಟೇ ಪರಿಗಣಿಸಿ, ಪ್ರತಿ ವಿದ್ಯಾರ್ಥಿಯ ಶೇಕಡಾವಾರು ಅಂಕ ಲೆಕ್ಕ ಹಾಕಲಾಗುತ್ತದೆ ಎಂದು ಹೇಳಿದ್ದರು.