Karnataka HC and CBI 
ಸುದ್ದಿಗಳು

ಸಿಬಿಐಗೆ ಸ್ವತಂತ್ರ ಸಂವಿಧಾನ ರೂಪಿಸಲು ಕೇಂದ್ರಕ್ಕೆ ನಿರ್ದೇಶನ ಕೋರಿ ಪಿಐಎಲ್‌ ಸಲ್ಲಿಕೆ

ಎಲ್ಲಾ ತನಿಖಾ ಸಂಸ್ಥೆಗಳನ್ನು ಒಳಗೊಂಡ ಸ್ವತಂತ್ರ ಶಾಸನಬದ್ಧ ಸಂಸ್ಥೆ ರಚನೆಯ ಅಗತ್ಯತೆ ಬಗ್ಗೆ ಸಿಜೆಐ ಈಚೆಗೆ ಹೇಳಿದ್ದರು. ಇದನ್ನು ಜಾರಿಗೊಳಿಸುವ ಸಂಬಂಧ ತಕ್ಷಣ ಕ್ರಮಕೈಗೊಳ್ಳಲು ಗೃಹ ಕಾರ್ಯದರ್ಶಿಗೆ ನಿರ್ದೇಶಿಸಬೇಕು ಎಂದು ಮನವಿ ಮಾಡಲಾಗಿದೆ.

Bar & Bench

ಕೇಂದ್ರ ತನಿಖಾ ಸಂಸ್ಥೆಗೆ (ಸಿಬಿಐ) ಸ್ವತಂತ್ರ ಸಂವಿಧಾನ (ಇಂಡಿಪೆಂಡೆಂಟ್‌ ಕಾನ್‌ಸ್ಟಿಟ್ಯೂಷನ್‌) ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಈಚೆಗೆ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಲಾಗಿದೆ.

ಬೀದರ್ ನಿವಾಸಿ ಗುರುನಾಥ್ ವದ್ದೆ ಸಲ್ಲಿಸಿರುವ ಮನವಿಯಲ್ಲಿ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಮತ್ತು ಸಿಬಿಐ ನಿರ್ದೇಶಕರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಈ ಮನವಿಯನ್ನು ಮಂಗಳವಾರ ನ್ಯಾಯಮೂರ್ತಿಗಳಾದ ಬಿ ಎಂ ಶ್ಯಾಮ್ ಪ್ರಸಾದ್ ಮತ್ತು ಎಂ ಜಿ ಎಸ್ ಕಮಲ್ ಅವರಿದ್ದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು. ಅರ್ಜಿಯಲ್ಲಿ ಎತ್ತಿರುವ ಅಂಶಗಳು ಮತ್ತು ಅದರೊಂದಿಗೆ ಲಗತ್ತಿಸಿದ್ದ ದಾಖಲೆ ಪರಿಗಣಿಸಿದ ಪೀಠವು ನ್ಯಾಯಾಲಯದ ರಜಾಕಾಲ ಮುಗಿದ ನಂತರದ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಬೇಕು ಎಂದು ರಿಜಿಸ್ಟ್ರಾರ್‌ಗೆ ನಿರ್ದೇಶಿಸಿತು.

ಅರ್ಜಿಯಲ್ಲಿ ಏನಿದೆ?: ದೆಹಲಿ ಪೊಲೀಸ್‌ ಸ್ಥಾಪನಾ ಕಾಯಿದೆ (ಡಿಎಸ್‌ಪಿಇ)-1946ರ ಅಡಿಯಲ್ಲಿ ಸಿಬಿಐ ಅನ್ನು ರಚಿಸಲಾಗಿದ್ದು, ಅದು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ. ಇದರಿಂದ ಸ್ವತಂತ್ರ ಹಾಗೂ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲು ಸಿಬಿಐಗೆ ಸಾಧ್ಯವಾಗುತ್ತಿಲ್ಲ. ಕೇಂದ್ರದ ಒತ್ತಡದಲ್ಲಿಯೇ ಸಿಬಿಐ ಕಾರ್ಯ ನಿರ್ವಹಿಸಬೇಕಿದೆ. ಸಿಬಿಐ ಕೇಂದ್ರದ ನಿಯಂತ್ರಣದಲ್ಲಿದೆ ಎಂದು ರಾಜ್ಯ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳು ಆರೋಪ ಮಾಡುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಕೇಂದ್ರ ಸರ್ಕಾರವು ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಇದನ್ನು ಗಮನಿಸಿಯೇ ಸಿಬಿಐ ಅನ್ನು ಸಾರ್ವಜನಿಕರು ನಂಬುತ್ತಿಲ್ಲ. ಭ್ರಷ್ಟಚಾರ- ನಿಷ್ಪಪಕ್ಷಪಾತ ಮತ್ತು ಪಾರದರ್ಶಕವಾಗಿ ಕೆಲಸ ಮಾಡುವ ಸ್ವತಂತ್ರ ಸಂಸ್ಥೆ ಹೊಂದುವುದು ಪ್ರಜೆಗಳ ಹಕ್ಕಾಗಿದೆ. ಈಚೆಗೆ ದೊಡ್ಡ ಹಗರಣಗಳು ಬೆಳಕಿಗೆ ಬಂದಿದ್ದು, ಚುನಾವಣೆ ವೇಳೆ ಮತ್ತು ನಂತರ ರಾಜಕೀಯ ಅಪರಾಧಗಳು, ರಾಜಕೀಯ ಪ್ರೇರಿತ ಕೊಲೆಗಳು ನಡೆಯುತ್ತಿವೆ. ಜಾತಿ, ಮತ, ಭಾಷೆ ಮತ್ತು ಪ್ರಾದೇಶಿಕ ಹೆಸರಿನಲ್ಲಿ ದಂಗೆಗಳು ಹೆಚ್ಚುತ್ತಿವೆ. ಜನರು ನಿರ್ಭೀತಿ ಮತ್ತು ಸ್ವತಂತ್ರವಾದ ಜೀವನ ನಡೆಸುವುದಕ್ಕೆ ಉತ್ತಮ ವಾತಾವರಣ ರೂಪಿಸುವುದು ಸರ್ಕಾರದ ಕರ್ತವ್ಯ. ಆದ್ದರಿಂದ, ಸಿಬಿಐ ಅನ್ನು ಸ್ವತಂತ್ರ ಸಾಂವಿಧಾನಿಕ ತನಿಖಾ ಸಂಸ್ಥೆಯಾಗಿ ರೂಪಿಸುವ ನಿಟ್ಟಿನಲ್ಲಿ ಅದರದ್ದೇ ಆದ ಸಂವಿಧಾನದ ಅಗತ್ಯವಿದೆ. ಇದನ್ನು ರೂಪಿಸಲು ಕೇಂದ್ರ ಗೃಹ ಕಾರ್ಯದರ್ಶಿಗೆ ನಿರ್ದೇಶಿಸಬೇಕು ಎಂದು ಕೋರಲಾಗಿದೆ. ಈ ಸಂಬಂಧ ಕಳೆದ ಏಪ್ರಿಲ್‌ 8ರಂದು ಕೇಂದ್ರ ಗೃಹ ಕಾರ್ಯದರ್ಶಿಗೆ ಅರ್ಜಿದಾರರು ಪತ್ರವನ್ನು ಬರೆದಿದ್ದು, ಅದರಲ್ಲಿ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ವಿವರಿಸಲಾಗಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರು ಎಲ್ಲಾ ತನಿಖಾ ಸಂಸ್ಥೆಗಳನ್ನು ಒಳಗೊಂಡ ಸ್ವತಂತ್ರ ಶಾಸನಬದ್ಧ ಸಂಸ್ಥೆ ರಚನೆಯ ಅಗತ್ಯವಿದೆ ಎಂದು ಈಚೆಗೆ ಹೇಳಿದ್ದರು. ಇದನ್ನು ಜಾರಿಗೊಳಿಸುವ ಸಂಬಂಧ ತಕ್ಷಣ ಕ್ರಮಕೈಗೊಳ್ಳುವಂತೆ ಕೇಂದ್ರ ಗೃಹ ಕಾರ್ಯದರ್ಶಿಗೆ ನಿರ್ದೇಶಿಸಬೇಕು ಎಂದು ಮಧ್ಯಂತರ ಮನವಿ ಮಾಡಲಾಗಿದೆ.