ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ವಿಧಾನ ಪರಿಷತ್ ಸದಸ್ಯರಾದ ನಜೀರ್ ಅಹ್ಮದ್ ಮತ್ತು ಕೆ ಗೋವಿಂದರಾಜ್ ಹಾಗೂ ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರ ಸುನೀಲ್ ಕನುಗೋಳು ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ನೇಮಕಾತಿಯನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಬೆಂಗಳೂರಿನ ವಕೀಲ ಎಸ್ ಉಮಾಪತಿ ಸಲ್ಲಿಸಿರುವ ಅರ್ಜಿಯು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ. ಅರ್ಜಿಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಜೀರ್ ಅಹ್ಮದ್, ಗೋವಿಂದರಾಜ್, ಸುನೀಲ್ ಕನುಗೋಳು ಹಾಗೂ ಕೆ ವಿ ಪ್ರಭಾಕರ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ರಾಜಕೀಯ ಕಾರ್ಯದರ್ಶಿ, ಮುಖ್ಯ ಸಲಹೆಗಾರ ಮತ್ತು ಮಾಧ್ಯಮ ಸಲಹೆಗಾರ ಎಂಬ ಹುದ್ದೆಗಳನ್ನು ನಾಲ್ಕು ಮಂದಿಗೆ ಸೃಜಿಸಿ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ. ಇವರಿಗೆ ನೀಡಲಾಗುವ ಸಂಬಳ, ಸಾರಿಗೆ, ವಸತಿ, ಭತ್ಯೆ ಇತ್ಯಾದಿ ಖರ್ಚುಗಳು ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಿವೆ. ಇವೆಲ್ಲವೂ ರಾಜಕೀಯ ನೇಮಕಾತಿ ಹಾಗೂ ಏಕಪಕ್ಷೀಯ ನಿರ್ಧಾರಗಳಾಗಿವೆ. ಮುಖ್ಯಮಂತ್ರಿಗಳ ಕಚೇರಿ ಎಂಬುದು ಸಾರ್ವಜನಿಕ ಕಚೇರಿ. ಆದರೆ, ಅಲ್ಲೀಗ ಮುಖ್ಯಮಂತ್ರಿಗಳ ಬಂಧುಗಳು, ಅವರ ಹಿಂಬಾಲಕರಿಗೆ ಆಸ್ಪದ ನೀಡಲಾಗಿದೆ. ಕಾನೂನಿನಲ್ಲಿ ಇಂತಹ ಹುದ್ದೆಗಳನ್ನು ಸೃಜಿಸಲು ಅವಕಾಶವಿಲ್ಲ. ಆದ್ದರಿಂದ, ಪ್ರತಿವಾದಿಗಳ ನೇಮಕಾತಿ ಸಂವಿಧಾನ ವಿರೋಧಿಯಾಗಿದ್ದು ಕೂಡಲೇ ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.