Karnataka HC 
ಸುದ್ದಿಗಳು

ಕನ್ನಡಿಗರಿಗೆ ಉದ್ಯೋಗ ಮೀಸಲು ಮಸೂದೆ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆ

Bar & Bench

ಕೈಗಾರಿಕೆ, ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ರಾಜ್ಯದ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ದಾಖಲಿಸಲಾಗಿದ್ದು, ಈ ಅರ್ಜಿಯ ವಿಚಾರಣೆ ಆಗಸ್ಟ್ 7ಕ್ಕೆ ನಿಗದಿಯಾಗಿದೆ.

ಬೆಂಗಳೂರಿನ ಬಿಲೇಕಹಳ್ಳಿಯ ಸೋಮೇಶ್ವರ ಲೇಔಟ್‌ನ ಲೆಕ್ಕ ಪರಿಶೋಧಕಿ ಆರ್‌ ಅಮೃತಲಕ್ಷ್ಮಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಕೋರಿ ಅವರ ಪರ ವಕೀಲರು ಬುಧವಾರ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ನೇತೃತ್ವದ ವಿಭಾಗೀಯ ಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಪೀಠವು ಆಗಸ್ಟ್‌ 7ಕ್ಕೆ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು. 

ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮಸೂದೆಯು ಸಂವಿಧಾದ 19 (1) (ಡಿ), 19 (1)(ಇ), 19 (1)(ಜಿ) ಮತ್ತು 14ನೇ ವಿಧಿಗಳಿಗೆ ವಿರುದ್ಧವಾಗಿದೆ. ಈ ಮಸೂದೆ ಅನುಷ್ಠಾನಗೊಂಡಲ್ಲಿ ಇದರಿಂದ ಸಹಜ ನ್ಯಾಯತತ್ವಗಳ ಉಲ್ಲಂಘನೆಯಾಗುತ್ತದೆ. ಅಂತೆಯೇ, ಈ ಕಾಯಿದೆಯನ್ನು ಜಾರಿಗೊಳಿಸುವ ಸಾಮರ್ಥ್ಯವನ್ನು ರಾಜ್ಯವು ಶಾಸಕಾಂಗ ಹೊಂದಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ಒಂದು ವೇಳೆ ಈ ಮಸೂದೆ ಜಾರಿಗೆ ಬಂದಲ್ಲಿ ರಾಜ್ಯದ ಕೈಗಾರಿಕಾ ವಲಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಹಲವು ಸಾಂವಿಧಾನಿಕ ಪ್ರಶ್ನೆಗಳಿಗೆ ಎಡೆಮಾಡಿಕೊಡುತ್ತದೆ. ಅಂತೆಯೇ, ಕೆಟ್ಟ ಪರಂಪರೆಗೂ ನಾಂದಿ ಹಾಡಿದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿರುವ ಅರ್ಜಿದಾರರು, ಉದ್ದೇಶಿತ ಮಸೂದೆಯನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ. 

ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.