ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯೂಎಸ್) ಸೇರಿರುವ ವಿದ್ಯಾರ್ಥಿಗಳು ದುಬಾರಿ ಬೆಲೆ ತೆತ್ತು ಖಾಸಗಿ ಪ್ರಕಾಶಕರ ಪುಸ್ತಕ, ಸಮವಸ್ತ್ರ ಮತ್ತಿತರ ಕಿಟ್‌ಗಳನ್ನು ಖರೀದಿಸುವಂತೆ ಖಾಸಗಿ ಶಾಲೆಗಳು ಒತ್ತಾಯಿಸದಂತೆ ತಡೆಯಲು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ [ಜಸ್ಮೀತ್ ಸಿಂಗ್ ಸಾಹ್ನಿ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ]
ಸಿಬಿಎಸ್ಇ-ಸಂಯೋಜಿತ ಶಾಲೆಗಳು ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಮಾತ್ರ ಬಳಸುವಂತೆ ಸೂಚಿಸಬೇಕು. ನೈಜ ಕೊರತೆ ಇರುವ ಸಂದರ್ಭಗಳಲ್ಲಿಯಷ್ಟೇ ಖಾಸಗಿ ಪ್ರಕಾಶಕರಿಂದ ಪುಸ್ತಕ ಖರೀದಿಸಬೇಕು ಎಂದು ನಿರ್ದೇಶನ ನೀಡಬೇಕು ಎಂದು ಜಗಜೀತ್ ಸಿಂಗ್ ಸಾಹ್ನಿ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ (ಪಿಐಎಲ್) ಕೋರಲಾಗಿದೆ.
ದುಬಾರಿ ಪುಸ್ತಕಗಳು, ಸಮವಸ್ತ್ರ ಹಾಗೂ ಶಾಲಾ ಸಾಮಗ್ರಿಗಳನ್ನು ಖರೀದಿಸಬೇಕು ಎಂದು ಶಾಲೆಗಳು ಬಲವಂತ ಮಾಡುವ ಮೂಲಕ ಇಡಬ್ಲ್ಯೂಎಸ್ ವಿದ್ಯಾರ್ಥಿಗಳನ್ನು ಖಾಸಗಿ ಶಾಲೆಗಳಿಂದ ವ್ಯವಸ್ಥಿತವಾಗಿ ಹೊರಗಿಡಲಾಗುತ್ತಿದೆ ಎಂದು ದೂರಲಾಗಿದೆ. ಅರ್ಜಿಯನ್ನು ಆಗಸ್ಟ್ 27ರಂದು ಆಲಿಸುವ ಸಾಧ್ಯತೆ ಇದೆ.
ಅರ್ಜಿಯ ಪ್ರಮುಖಾಂಶಗಳು
ಎನ್‌ಸಿಇಆರ್‌ಟಿ ಪುಸ್ತಕದ ಬೆಲೆ ಸರಾಸರಿ ₹65 ಮಾತ್ರ. ಆದರೆ ಖಾಸಗಿ ಶಾಲೆಗಳು ₹400–₹700 ಬೆಲೆ ತೆತ್ತು ಖಾಸಗಿ ಪ್ರಕಾಶಕರಿಂದ ಪುಸ್ತಕ ಖರೀದಿಸುವಂತೆ ಬಲವಂತ ಮಾಡುತ್ತಿವೆ.
ಏಕಸ್ವಾಮ್ಯ ತಡೆಯುವುದಕ್ಕಾಗಿ ಪುಸ್ತಕ ಅಥವಾ ಕಿಟ್ ಪೂರೈಕೆದಾರರಿಗೆ ನಿಯಮ ವಿಧಿಸಬೇಕು.
ಸಿಬಿಎಸ್ಇ-ಸಂಯೋಜಿತ ಖಾಸಗಿ ಶಾಲೆಗಳಲ್ಲಿ ಖಾಸಗಿ ಪ್ರಕಾಶಕರ ಪುಸ್ತಕ ಶಿಫಾರಸು ಮಾಡುವ ಅನಿಯಂತ್ರಿತ ಅಭ್ಯಾಸ ಶಾನಸಬದ್ಧ ನಿಯಮಗಳನ್ನು ಮತ್ತು ಮಾರ್ಗದರ್ಶನಗಳನ್ನು ಗಾಳಿಗೆ ತೂರಿದೆ.
ಈ ಮನಸೋಇಚ್ಛೆಯ ವಾಣಿಜ್ಯೀಕರಣದ ಮುಖೇನ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಭಾರೀ ಪ್ರಮಾಣದಲ್ಲಿ ಆರ್ಥಿಕವಾಗಿ ಶೋಷಿಸಲಾಗುತ್ತಿದೆ.
ಅನಿಯಂತ್ರಿತ ವಾಣಿಜ್ಯೀಕರಣ ಕುಟುಂಬಗಳಿಗೆ ಅನಗತ್ಯ ಹೊರೆ ಮಾತ್ರವಲ್ಲದೆ ಆರ್‌ಟಿಇ ಕಾಯಿದೆ, ಸಿಬಿಎಸ್ಇ ಅಂಗಸಂಸ್ಥೆ ಉಪ-ಕಾನೂನುಗಳು ಮತ್ತು ಸಂವಿಧಾನದ 14 ಮತ್ತು 21ಎ ವಿಧಿಗಳ ಮೂಲಕ ಒದಗಿಸಲಾದ ಸಾಂವಿಧಾನಿಕ ಹಕ್ಕುಗಳ ಅಕ್ಷರಶಃ ಉಲ್ಲಂಘನೆಯಾಗಿದೆ.
ಶಾಲಾ ಚೀಲದ ತೂಕ ವಿದ್ಯಾರ್ಥಿಯ ತೂಕದ ಶೇಕಡಾ 10ಕ್ಕಿಂತ ಹೆಚ್ಚಿರಬಾರದು ಎಂದು ಆದೇಶಿಸುವ 2020ರ ಶಾಲಾ ಪಾಟಿಚೀಲ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.