ಕಲಬೆರಕೆ ಕೆಮ್ಮಿನ ಸಿರಪ್ ಸೇವನೆ ಪರಿಣಾಮ ಮೂತ್ರಪಿಂಡ ಸೋಂಕಿಗೆ ತುತ್ತಾಗಿ ಮಧ್ಯಪ್ರದೇಶದಲ್ಲಿ 14 ಮಕ್ಕಳು ಸಾವನ್ನಪ್ಪಿದ ಪ್ರಕರಣದ ಬಗ್ಗೆ ನ್ಯಾಯಾಲಯದ ಉಸ್ತುವಾರಿಯಲ್ಲಿ ಸ್ವತಂತ್ರ ತನಿಖೆ ನಡೆಸಲು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಲಾಗಿದೆ [ವಿಶಾಲ್ ತಿವಾರಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ದೇಶದ ಔಷಧ ಸುರಕ್ಷತೆ ಕಾಯ್ದುಕೊಳ್ಳಲು ಮತ್ತು ದೋಷಯುಕ್ತ ಔಷಧಗಳನ್ನು ವಾಪಸ್ ಪಡೆಯುವುದಕ್ಕೆ ಸಂಬಂಧಿಸಿದಂತೆ ನೀತಿ ರೂಪಿಸುವಂತೆ ಅರ್ಜಿ ಕೋರಿದೆ.
ತಮಿಳುನಾಡು ಮೂಲದ ಶ್ರೀಸನ್ ಫಾರ್ಮಾ ಪ್ರೈವೇಟ್ ಲಿಮಿಟೆಡ್ ತಯಾರಿಸಿದ ಕೋಲ್ಡ್‌ರಿಫ್ ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಐದು ವರ್ಷಕ್ಕಿಂತಲೂ ಕಡಿಮೆ ವಯೋಮಾನದ 14 ಮಕ್ಕಳು ಸಾವನ್ನಪ್ಪಿದ್ದರು. ಪ್ರಯೋಗಾಲಯ ಪರೀಕ್ಷೆಗಳಲ್ಲಿ ಡೈಎಥಿಲೀನ್ ಗ್ಲೈಕಾಲ್ (ಡಿಇಜಿ) ನಿಷೇಧಿತ ರಾಸಾಯನಿಕದ ಅಂಶ ಇರುವುದು ಪತ್ತೆಯಾಗಿತ್ತು. ಮಧ್ಯಪ್ರದೇಶ ಮಾತ್ರವಲ್ಲದೆ ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿಯೂ ಔಷಧದ ಪರಿಣಾಮದ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ವಕೀಲ ವಿಶಾಲ್ ತಿವಾರಿ ಅವರು ಈ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯ ಪ್ರಮುಖಾಂಶಗಳು
ಕೋಲ್ಡ್‌ರಿಫ್ ಔಷಧ ಹಿಂಪಡೆಯಲು ಕೇಂದ್ರ ಆರೋಗ್ಯ ಸಚಿವಾಲಯವಾಗಲೀ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯಾಗಲೀ ಯೋಜನೆ ರೂಪಿಸಿಲ್ಲ.
ದೇಶದಲ್ಲಿ ಔಷಧ ಬಿಡುಗಡೆ ಪೂರ್ವ ಪರೀಕ್ಷೆ ಅಥವಾ ರಾಷ್ಟ್ರೀಯ ಔಷಧ ವಾಪಸಾತಿ ನೀತಿ ಇಲ್ಲದಿರುವುದರಿಂದ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ಔಷಧ ತಯಾರಿಸಲಾಗುತ್ತಿದೆ.
ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳು ಕಲುಷಿತ ಕೆಮ್ಮಿನ ಸಿರಪ್‌ನ ಸ್ಥಳೀಯ ಮಾರಾಟವನ್ನು ಅಂತಿಮವಾಗಿ ಸ್ಥಗಿತಗೊಳಿಸಿದರೂ, ಸಮಗ್ರ ವಾಪಸಾತಿ ನೀತಿ ಇಲ್ಲದಿರುವುದರಿಂದ ಎಲ್ಲಾ ರಾಜ್ಯಗಳಿಂದ ಆ ಔಷಧವನ್ನು ಕೂಡಲೇ ಹಿಂಪಡೆಯಲು ಸಾಧ್ಯವಾಗಿಲ್ಲ.
ಸರ್ಕಾರಿ ಸಂಸ್ಥೆಗಳು ವ್ಯತಿರಿಕ್ತ ಹೇಳಿಕೆ ನೀಡಿದ್ದರಿಂದ ಔಷಧ ಹಿಂಪಡೆಯುವ ಪ್ರಕ್ರಿಯೆ ವಿಳಂಬವಾಯಿತು.
ಅನೇಕ ಸಣ್ಣ ಔಷಧ ತಯಾರಿಕಾ ಕಂಪೆನಿಗಳ ಬಳಿ ತಯಾರಿಕೆಗೆ ಬಳಸುವ ವಸ್ತುಗಳ ಪರೀಕ್ಷೆ ಹಾಗೂ ಅವುಗಳನ್ನು ಪತ್ತೆ ಹಚ್ಚುವ ಸೌಲಭ್ಯ ಇಲ್ಲ.
ಈ ಬಗೆಯ ನಿರ್ಲಕ್ಷ್ಯ ಸಂವಿಧಾನದ 21 (ಜೀವಿಸುವ ಹಕ್ಕು) ಮತ್ತು 47ನೇ (ಸಾರ್ವಜನಿಕ ಆರೋಗ್ಯ) ವಿಧಿಗಳ ಉಲ್ಲಂಘನೆ.
ಡಿಇಜಿ ಇಲ್ಲವೇ ಇಜಿಯ ಹಾನಿಕಾರಕ ರಾಸಾಯನಿಕಗಳ ಬಗ್ಗೆ ಈ ಮೊದಲೇ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದ್ದರೂ ದೇಶದಲ್ಲಿ ಔಷಧ ಬಿಡುಗಡೆ ಪೂರ್ವ ಪರೀಕ್ಷೆ ಅಥವಾ ರಾಷ್ಟ್ರೀಯ ಔಷಧ ವಾಪಸಾತಿ ನೀತಿ ಇಲ್ಲ.
ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ರಾಷ್ಟ್ರಮಟ್ಟದ ತಜ್ಞರ ಸಮಿತಿ ರಚಿಸಿ ತನಿಖೆ ನಡೆಸಬೇಕು.
ಕೋಲ್ಡ್‌ರಿಫ್‌ನ ಎಲ್ಲಾ ಬ್ಯಾಚ್‌ನ ಔಷಧಗಳನ್ನು ಹಿಂಪಡೆಯಬೇಕು.
ಶ್ರೀಸನ್ ಫಾರ್ಮಾದ ತಯಾರಿಕಾ ಪರವಾನಗಿ ಸ್ಥಗಿತಗೊಳಿಸಬೇಕು.
ಬೇರೆ ರಾಜ್ಯಗಳಲ್ಲಿಯೂ ಸಂಭವಿಸಿರುವ ಸಾವುಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕು.
ಸಿರಪ್‌ಗಳಿಗೆ ಡಿಇಜಿ/ಇಜಿ ರಾಸಾಯನಿಕ ಬಳಕೆಯಾಗುತ್ತಿದೆಯೇ ಎಂಬುದರ ತಪಾಸಣೆ ನಡೆಯಬೇಕು.
ಕೇಂದ್ರೀಕೃತ ಔಷಧ ವಾಪಸಾತಿ ಮತ್ತು ಔಷಧ ವಿಚಕ್ಷಣಾ ಮಾರ್ಗಸೂಚಿ ರೂಪಿಸಬೇಕು.
ಅದರಲ್ಲಿಯೂ ಮಕ್ಕಳ ಸಿರಪ್‌ಗೆ ಸಂಬಂಧಿಸಿದಂತೆ ಇಂತಹ ರೀತಿ ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು.