ಚುನಾವಣೆಗೂ ಮುನ್ನ ಸಾರ್ವಜನಿಕ ಹಣ ಬಳಸಿ ಅತಾರ್ಕಿಕವಾದ ಪೊಳ್ಳು ಭರವಸೆ ನೀಡುವ ಅವುಗಳನ್ನು ಹಂಚುವ ರಾಜಕೀಯ ಪಕ್ಷಗಳ ಚುನಾವಣಾ ಚಿಹ್ನೆ ವಾಪಸ್ ಪಡೆದು ಅವುಗಳ ನೋಂದಣಿ ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
ಈ ಸಂಬಂಧ ಕಾನೂನು ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿದಾರ, ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಕೋರಿದ್ದಾರೆ.
ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಉತ್ತರಪ್ರದೇಶದಲ್ಲಿ ಆಮ್ ಆದ್ಮಿ, ಶಿರೋಮಣಿ ಅಕಾಲಿದಳ, ಕಾಂಗ್ರೆಸ್ ರಾಜಕೀಯ ಪಕ್ಷಗಳು ನೀಡುತ್ತಿರುವ ಭರವಸೆಗಳ ಬಗ್ಗೆ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.
ಹಣ ಹಂಚಿಕೆ ಮತ್ತು ಪೊಳ್ಳು ಭರವಸೆಗಳು ಅಪಾಯದ ಮಟ್ಟ ತಲುಪಿವೆ. ಇದರಿಂದ ಚುನಾವಣಾ ಪ್ರಕ್ರಿಯೆಯ ಸಮಗ್ರತೆಗೆ ಧಕ್ಕೆಯಾದರೆ ಪ್ರಾತಿನಿಧ್ಯದ ಕಲ್ಪನೆಯು ಶೂನ್ಯವಾಗುತ್ತದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.
ಅರ್ಜಿಯ ಪ್ರಮುಖಾಂಶಗಳು
ಮತದಾರರನ್ನು ಸೆಳೆಯಲು ಚುನಾವಣೆಗೆ ಮುನ್ನ ಸಾರ್ವಜನಿಕ ನಿಧಿಯಿಂದ ಅತಾರ್ಕಿಕ ಪೊಳ್ಳು ಭರವಸೆ ನೀಡುವುದು ಸಂವಿಧಾನದ 14, 162, 266(3) ಮತ್ತು 282ನೇ ವಿಧಿಗಳ ಉಲ್ಲಂಘನೆಯಾಗಿದೆ. ಅಲ್ಲದೆ ಐಪಿಸಿ ಸೆಕ್ಷನ್ 171ಬಿ ಮತ್ತು 171ಸಿ ಅಡಿಯಲ್ಲಿ. ಇದು ಲಂಚ ಮತ್ತು ಅನಗತ್ಯ ಪ್ರಭಾವಕ್ಕೆ ಸಮ.
ಚುನಾವಣಾ ಚಿಹ್ನೆಗಳ ಆದೇಶ- 1968ರ ಪ್ಯಾರಾ 6ಎ, 6ಬಿ ಮತ್ತು 6ಸಿ ಯಲ್ಲಿ "ರಾಜಕೀಯ ಪಕ್ಷವು ಚುನಾವಣೆಗೆ ಮುನ್ನ ಸಾರ್ವಜನಿಕ ನಿಧಿಯಿಂದ ಅತಾರ್ಕಿಕ ಪೊಳ್ಳು ಭರವಸೆ ನೀಡಬಾರದು/ಹರಡಬಾರದು" ಎಂಬ ಹೆಚ್ಚುವರಿ ಷರತ್ತನ್ನು ಸೇರಿಸಲು ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು.
ಚುನಾವಣೆಗೂ ಮುನ್ನ ಸಾರ್ವಜನಿಕ ಹಣ ಬಳಸಿಕೊಂಡು ಅತಾರ್ಕಿಕವಾದ ಪೊಳ್ಳು ಭರವಸೆ ನೀಡುವ ಅವುಗಳನ್ನು ಹರಡುವ ರಾಜಕೀಯ ಪಕ್ಷಗಳ ಚುನಾವಣಾ ಚಿಹ್ನೆ ವಾಪಸ್ ಪಡೆದು ಅವುಗಳ ನೋಂದಣಿ ರದ್ದುಗೊಳಿಸಬೇಕು.