NGT, Delhi 
ಸುದ್ದಿಗಳು

ಸ್ವಯಂಪ್ರೇರಣಾ ವಿಚಾರಣೆ ಪ್ರಧಾನ ಪೀಠದಲ್ಲಿ ಮಾತ್ರ ಎಂಬ ಎನ್‌ಜಿಟಿ ಆದೇಶ ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್‌ನಲ್ಲಿ ಪಿಐಎಲ್

ಪೀಠಗಳನ್ನು ಸ್ಥಾಪಿಸುವ ಉದ್ದೇಶವೇ ನ್ಯಾಯಲಭ್ಯತೆಯನ್ನು ಸುಗಮವಾಗಿಸುವುದಾಗಿದೆ. "ಎಲ್ಲವೂ ದೆಹಲಿಯಲ್ಲಿಯೇ ಕೇಂದ್ರೀಕೃತವಾಗಿರಬೇಕು ಎನ್ನುವುದಾದರೆ ದೆಹಲಿಯ ಆಚೆಗೆ ನೋಡುವ ಅಗತ್ಯವೇ ಇರುವುದಿಲ್ಲ” ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ.

Bar & Bench

ಅಖಿಲ ಭಾರತ ಮಟ್ಟದಲ್ಲಿ ಅಥವಾ ಅಂತರರಾಜ್ಯ ಮಟ್ಟದಲ್ಲಿ ಪರಿಣಾಮ ಬೀರುವ ಸ್ವಯಂಪ್ರೇರಣಾ ಪ್ರಕರಣಗಳ ವಿಚಾರಣೆಗಳನ್ನು ದೆಹಲಿಯಲ್ಲಿರುವ ಪ್ರಧಾನ ಪೀಠವೇ ಆಲಿಸಬೇಕು ಎನ್ನುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಕಚೇರಿ ಆದೇಶವನ್ನು (ಎನ್‌ಜಿಟಿ) ಪ್ರಶ್ನಿಸಿ ಮದ್ರಾಸ್‌ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದ್ದು ಈ ಸಂಬಂಧ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ (ಮೀನವ ತಂತೈ ಕೆ ಆರ್ ಸೆಲ್ವರಾಜ್‌ ಕುಮಾರ್‌ ವರ್ಸಸ್‌ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಪ್ರಧಾನ ಪೀಠ ಮತ್ತು ಇತರರು).

ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ಈ ಕುರಿತು ಹೊರಡಿಸಿರುವ ಕಚೇರಿ ಆದೇಶದಲ್ಲಿ ರಾಷ್ಟ್ರಮಟ್ಟದಲ್ಲಿ ಪರಿಣಾಮ ಬೀರುವ ಅಥವಾ ಅಂತರರಾಜ್ಯಕ್ಕೆ ಸಂಬಂಧಿಸಿದ ಸ್ವಯಂಪ್ರೇರಣಾ ವಿಷಯಗಳ ವಿಚಾರಣೆಯನ್ನು ದೆಹಲಿಯ ಪ್ರಧಾನ ಪೀಠದಲ್ಲಿ ಕನಿಷ್ಠ ಮೂರು ಸದಸ್ಯರಿರುವ ಪೀಠದ ಮುಂದೆ ಪಟ್ಟಿ ಮಾಡಬೇಕು ಎಂದು ಹೇಳಲಾಗಿದೆ.

ಇದನ್ನು ಪ್ರಶ್ನಿಸಿ ಸ್ವಯಂ ಸೇವಾ ಸಂಸ್ಥೆಯಾದ ‘ಮೀನವ ತಂತೈ ಕೆ ಆರ್‌ ಸೆಲ್ವರಾಜ್‌ ಕುಮಾರ್‌ ಮೀನವರ್‌ ನಾಲ ಸಂಗಂ’ ತನ್ನ ಅಧ್ಯಕ್ಷರಾದ ಆರ್‌ ತಿಯಾಗರಾಜನ್ ಅವರ ಮುಖೇನ ಪಿಐಎಲ್‌ ಸಲ್ಲಿಸಿದೆ. ಎನ್‌ಜಿಟಿಯ ದೆಹಲಿಯ ಪ್ರಧಾನ ಪೀಠದ ರಿಜಿಸ್ಟ್ರಾರ್‌ ಜನರಲ್‌ ಅವರು ಹೊರಡಿಸಿರುವ ಜೂನ್‌ 12, 2021ರ ಕಚೇರಿ ಆದೇಶವು ಎನ್‌ಜಿಟಿ ಕಾಯಿದೆ ಮತ್ತು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಮುಖ್ಯ ನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ ಮತ್ತು ನ್ಯಾ. ಸೆಂಥಿಲ್‌ಕುಮಾರ್‌ ರಾಮಮೂರ್ತಿ ಅವರಿರುವ ವಿಭಾಗೀಯ ಪೀಠವು ಕೇಂದ್ರ ಸರ್ಕಾರಕ್ಕೆ ಹಾಗೂ ವಿವಿಧ ಪಕ್ಷಕಾರರಿಗೆ ಶುಕ್ರವಾರ ನೋಟಿಸ್‌ ಜಾರಿಗೊಳಿಸಿದೆ.

ಎನ್‌ಜಿಟಿಯ ಕಚೇರಿ ಆದೇಶವು ದೆಹಲಿಯ ಹೊರಗಿರುವ ವ್ಯಾಜ್ಯಕಾರರಿಗೆ ಪರಿಹಾರಕ್ಕಾಗಿ ದೆಹಲಿಯನ್ನೇ ಎಡತಾಕಬೇಕು ಎನ್ನುವ ಅಭಿಪ್ರಾಯವನ್ನು ಮೂಡಿಸುವ ಮೂಲಕ ನ್ಯಾಯಲಭ್ಯತೆಯ ಸಮಾನ ಅವಕಾಶವನ್ನು ತಿರಸ್ಕರಿಸುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

“ಎನ್‌ಜಿಟಿಯು ದೇಶದುದ್ದಗಲಕ್ಕೂ ಹಲವು ಪೀಠಗಳನ್ನು ಸ್ಥಾಪಿಸುವ ಮೂಲಕ ನ್ಯಾಯಿಕ ವ್ಯಾಪ್ತಿಯನ್ನು ಭೌಗೋಳಿಕವಾಗಿ ಹಂಚಿಕೆ ಮಾಡಿರುವ ಉದ್ದೇಶವೇ ಅರ್ಜಿದಾರರು ಪೀಠವನ್ನು ಎಡತಾಕಲು ಸುಲಭವೂ, ಸುಗಮವೂ ಆಗಿರಬೇಕು ಹಾಗೂ ಆ ಮೂಲಕ ನ್ಯಾಯಲಭ್ಯತೆಗೆ ಹೆಚ್ಚಿನ ಆಸ್ಪದವಿರಬೇಕು ಎನ್ನುವುದಾಗಿದೆ. ಆದರೆ, ಪ್ರಶ್ನೆಗೊಳಪಟ್ಟಿರುವ ಆದೇಶವು ದೆಹಲಿಯ ಪ್ರಧಾನ ಪೀಠದಿಂದ ದೂರವಿರುವ ವ್ಯಾಜ್ಯಕಾರರಿಗೆ ಕಾನೂನಿನ ಸಮಾನ ರಕ್ಷಣೆ ಮತ್ತು ಸಮಾನ ಲಭ್ಯತೆಯನ್ನು ತಿರಸ್ಕರಿಸುವ ಮೂಲಕ ಈ ಉದ್ದೇಶವನ್ನೇ ತುಂಡರಿಸುತ್ತದೆ ಎನ್ನಲಾಗಿದೆ. ಹೀಗಾಗಿ, ಪ್ರಶ್ನಾರ್ಹವಾದ ಈ ಆದೇಶವು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ,” ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಪ್ರಕರಣದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ ಅವರು, “ಪೀಠಗಳನ್ನು ಸ್ಥಾಪಿಸುವ ಹಿಂದಿನ ಪ್ರಮುಖ ಉದ್ದೇಶವೇ ನ್ಯಾಯಿಕಲಭ್ಯತೆಯನ್ನು ಸುಗಮಗೊಳಿಸುವುದಾಗಿದೆ. ದೆಹಲಿಯಲ್ಲಿಯೇ ಎಲ್ಲವೂ ಕೇಂದ್ರೀಕೃತವಾಗುವುದಾದರೆ ದೆಹಲಿಯಾಚೆಗೆ ನೋಡುವ ಅವಶ್ಯಕತೆಯಾದರೂ ಏನಿರುತ್ತದೆ” ಎಂದರು. ಪ್ರಕರಣವು ಗಂಭೀರ ವಿಷಯಗಳನ್ನು ಎತ್ತಿದ್ದು ಅದನ್ನು ಉದ್ದೇಶಿಸುವ ಅಗತ್ಯವಿದೆ ಎಂದು ಪೀಠವು ಅಭಿಪ್ರಾಯಪಟ್ಟಿತು.

ಪ್ರಕರಣದ ಮಹತ್ವವನ್ನು ಪರಿಗಣಿಸಿ ಹೆಚ್ಚಿನ ವಿಚಾರಣೆಗಾಗಿ ಪ್ರಕರಣವನ್ನು ಮುಂದಿನ ವಾರ ಮತ್ತೆ ನ್ಯಾಯಾಲಯವು ಕೈಗೆತ್ತಿಕೊಳ್ಳಲಿದೆ. ವಕೀಲ ಎಂ ಕಾರ್ತಿಕೇಯನ್‌ ಅವರು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯದ ಪರವಾಗಿ ನೋಟಿಸ್‌ ಸ್ವೀಕರಿಸಿದ್ದಾರೆ. ಅರ್ಜಿಯ ಒಂದು ಪ್ರತಿಯನ್ನು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅವರ ಕಚೇರಿಗೂ ಕಳುಹಿಸುವಂತೆ ನ್ಯಾಯಾಲಯ ಸೂಚಿಸಿದೆ.