ಜಿಲ್ಲಾ ನ್ಯಾಯಾಲಯಗಳಲ್ಲಿ ನ್ಯಾಯಮೂರ್ತಿಗಳ ಹುದ್ದೆಗೆ ವಿಕಲಚೇತನರನ್ನು ನೇಮಕ ಮಾಡದೆ ಇರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ [ಡಾ. ರೆಂಗಾ ರಾಮಾನುಜಂ ಮತ್ತು ಭಾರತೀಯ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಈ ಸಂಬಂಧ ಎಲ್ಲಾ ಹೈಕೋರ್ಟ್‌ಗಳು ಮತ್ತು ರಾಜ್ಯ ಸರ್ಕಾರಗಳಿಗೂ ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ನೋಟಿಸ್ ಜಾರಿ ಮಾಡಿದೆ.
ಗಣನೀಯ ಪ್ರಮಾಣದ ವಿಕಲ ಚೇತನರಿಗೆ ಶೇಕಡಾ 4 ರಷ್ಟು ಮೀಸಲಾತಿ ನೀಡಬೇಕು ಎಂಬ ಆದೇಶವನ್ನು ಅಸ್ತಿತ್ವದಲ್ಲಿರುವ ನ್ಯಾಯಾಂಗ ಸೇವಾ ನಿಯಮಾವಳಿ ಪಾಲಿಸದೆ ಇರುವುದು ವಿಕಲಚೇತನರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ವಿವಿಧ ರಾಜ್ಯಗಳ ನಡುವಿನ ಶೇಕಡಾವಾರು ಮೀಸಲಾತಿಯಲ್ಲಿ ಅಸಮಂಜಸತೆ ಇರುವುದನ್ನು ಕೂಡ ಅದು ಎತ್ತಿ ತೋರಿಸಿದೆ.
ವಿಕಲಚೇತನರ ಹಕ್ಕುಗಳ ಕಾಯಿದೆಗೆ ಹೊಂದಿಕೆಯಾಗದ ಅಸ್ತಿತ್ವದಲ್ಲಿರುವ ತಾರತಮ್ಯದ ನೇಮಕಾತಿ ಪದ್ಧತಿಗಳನ್ನು ರದ್ದುಗೊಳಿಸುವುದರ ಜೊತೆಗೆ ಈ ನಿಯಮಗಳನ್ನು ಪರಿಶೀಲಿಸಲು ಮತ್ತು ಪ್ರಮಾಣೀಕರಿಸಲು ಪರಿಣಿತ ಸಂಸ್ಥೆಯನ್ನು ರಚಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
“ನವ ತಂತ್ರಜ್ಞಾನದ ಬೆಂಬಲ ಪಡೆದು ಗಣನೀಯ ಪ್ರಮಾಣದ ಅಂಗವೈಕಲ್ಯ ಹೊಂದಿರುವವರು ಕೂಡ ಇತರರಿಗೆ ಸರಿ ಸಮಾನವಾಗಿ ಕೆಲಸ ಮಾಡಬಹುದು ಎಂಬುದನ್ನು ಗುರುತಿಸಲು ಪ್ರತಿವಾದಿಗಳು ವಿಫಲವಾಗಿದ್ದಾರೆ. ಒಬ್ಬ ವ್ಯಕ್ತಿಗೆ ದೃಷ್ಟಿ ಇಲ್ಲದಿದ್ದರೂ ಸಾಕ್ಷಿಯ ವರ್ತನೆಯನ್ನು ಆತ ʼಕಾಣಬಹುದುʼ ಮತ್ತು ಖಚಿತಪಡಿಸಿಕೊಳ್ಳಬಹುದು. ದೃಷ್ಟಿದೋಷವಿದ್ದರೂ ಸಾಫ್ಟ್‌ವೇರ್ ಮತ್ತಿತರ ಉಪಕರಣಗಳ ಸಹಾಯದಿಂದ ದಾಖಲೆಗಳನ್ನು ಓದಬಹುದು, ವಕೀಲರ ವಾದಗಳನ್ನು ಸಾಕ್ಷಿಗಳ ಮಾತುಗಳನ್ನು ಆಲಿಸಬಹುದು” ಎಂದು ಅರ್ಜಿ ಹೇಳಿದೆ.
ಅಲ್ಲದೆ ಮಂದ ದೃಷ್ಟಿ ಅಥವಾ ಕುರುಡುತನ ಇರುವವರನ್ನೂ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನ್ಯಾಯಮೂರ್ತಿ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗಿದೆ. ಆದರೆ ಅಂತಹವರನ್ನು ಗುರುತಿಸದೆ ಕೇಂದ್ರ ಸರ್ಕಾರ ತಾರತಮ್ಯದ ಧೋರಣೆ ಅನುಸರಿಸುತ್ತಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಅರ್ಜಿ ಸಲ್ಲಿಸಿದ್ದ ಇಬ್ಬರು ವಿಶೇಷ ಸಾಮರ್ಥ್ಯವುಳ್ಳ ಪರಿಣತರ ಪರವಾಗಿ ಹಿರಿಯ ವಕೀಲ ಸಂಜಯ್ ಪಾರಿಖ್ ವಾದ ಮಂಡಿಸಿದರು.