ಕ್ರಿಮಿನಲ್ ಕಾನೂನುಗಳು
ಕ್ರಿಮಿನಲ್ ಕಾನೂನುಗಳು 
ಸುದ್ದಿಗಳು

ಮೂರು ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯಿದೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್

Bar & Bench

ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ ಎಂಬ ಮೂರು ಹೊಸ ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯಿದೆಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ (ವಿಶಾಲ್ ತಿವಾರಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ).

ಭಾರತೀಯ ದಂಡ ಸಂಹಿತೆ (ಐಪಿಸಿ), ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಗಳಿಗೆ ಬದಲಾಗಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ ಜಾರಿಗೆ ತರಲಾಗಿದೆ.

ಈ ಮೂರು ಕಾನೂನುಗಳು ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸಲಿದ್ದು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಲಾಗಿತ್ತು. ಬಳಿಕ ರಾಷ್ಟ್ರಪತಿಗಳ ಅಂಕಿತ ದೊರೆತಿತ್ತು.

ಈ ಬೆಳವಣಿಗೆಯನ್ನು ರಾಷ್ಟ್ರಪತಿ ಭವನದ ಜಾಲತಾಣದಲ್ಲಿ ತಿಳಿಸಲಾಗಿದೆ , ಆದರೆ ನಿಯಮಗಳನ್ನು ಇನ್ನೂ ರೂಪಿಸದ ಕಾರಣ ದೇಶದ ಗೆಜೆಟ್‌ನಲ್ಲಿ ಇನ್ನೂ ಅದನ್ನು ಪ್ರಕಟಿಸಿಲ್ಲ. ಹೀಗಾಗಿ ಮೂರು ಕಾನೂನುಗಳು ಇನ್ನೂ ಜಾರಿಗೆ ಬಂದಿಲ್ಲ.

ಈ ಕಾಯಿದೆಗಳು ಹಲವು ದೋಷ ಮತ್ತು ತಾರತಮ್ಯದಿಂದ ಕೂಡಿದ್ದು ಕಾನೂನು ಆಯೋಗದ ಶಿಫಾರಸುಗಳನ್ನು ನಿರ್ಲಕ್ಷಿಸುತ್ತವೆ ಎಂದು ವಕೀಲ ವಿಶಾಲ್ ತಿವಾರಿ ಅವರ ಅರ್ಜಿಯಲ್ಲಿ ಒತ್ತಿಹೇಳಲಾಗಿದೆ.

ಪಿಐಎಲ್‌ ಪ್ರಮುಖಾಂಶಗಳು

ಈ ಮೂರೂ ಕ್ರಿಮಿನಲ್‌ ಕಾನೂನುಗಳನ್ನು ಸಂಸತ್‌ನ ಬಹುತೇಕ ಸದಸ್ಯರು ಅಮಾನತುಗೊಂಡಿದ್ದ ವೇಳೆ ಯಾವುದೇ ಚರ್ಚೆ ನಡೆಸದೆ ಅಂಗೀಕರಿಸಿ ಜಾರಿಗೆ ತರಲಾಗಿದೆ.

ಪ್ರಸ್ತಾವಿತ ಮಸೂದೆಗಳ ಶೀರ್ಷಿಕೆಯು ಕಾಯಿದೆ ಮತ್ತು ಅವುಗಳ ಉದ್ದೇಶದ ಬಗ್ಗೆ ಮಾತನಾಡುವುದಿಲ್ಲ.

ಕಾಯಿದೆಗಳ ಪ್ರಸ್ತುತ ಹೆಸರುಗಳು ಅಸ್ಪಷ್ಟವಾಗಿವೆ.

ಭಾರತೀಯ ದಂಡ ಸಂಹಿತೆ- 1860ರ ಬಹುತೇಕ ಸೆಕ್ಷನ್‌ಗಳೇ ಭಾರತೀಯ ನ್ಯಾಯ ಸಂಹಿತೆಯಲ್ಲೂ ಉಳಿದುಕೊಂಡಿವೆ.

ಪೊಲೀಸ್‌ ಕಸ್ಟಡಿಯಲ್ಲಿದ್ದಾಗ ಜಾಮೀನು ಪಡೆಯುವುದನ್ನು ಹೊಸ ಸಿಆರ್‌ಪಿಸಿ (ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ) ಕಷ್ಟಕರವಾಗಿಸುತ್ತದೆ.

ಈ ಮೂರು ಕಾನೂನುಗಳನ್ನು ಮೊದಲು ಆಗಸ್ಟ್ 11, 2023 ರಂದು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ನಂತರ ಹೆಚ್ಚಿನ ಪರಿಶೀಲನೆಗಾಗಿ ಬ್ರಿಜ್ ಲಾಲ್ ನೇತೃತ್ವದ ಸಂಸದೀಯ ಸಮಿತಿಗೆ ಕಳುಹಿಸಲಾಯಿತು .

ಅಂತಿಮವಾಗಿ ಅವುಗಳನ್ನು ಡಿಸೆಂಬರ್20 ರಂದು ಲೋಕಸಭೆ ಅಂಗೀಕರಿಸಿತು. ಡಿಸೆಂಬರ್ 21ರಂದು ರಾಜ್ಯಸಭೆ ಅಂಗೀಕಾರದ ಮುದ್ರೆಯೊತ್ತಿತು.