Justices DY Chandrachud and MR Shah 
ಸುದ್ದಿಗಳು

ಎಫ್‌ಐಆರ್‌ ರದ್ದು ಕೋರಿ ಮೂರನೇ ವ್ಯಕ್ತಿಯಿಂದ ಪಿಐಎಲ್‌ ಸಲ್ಲಿಕೆ ತಪ್ಪು ನಿದರ್ಶನಕ್ಕೆ ಕಾರಣವಾಗಲಿದೆ: ಸುಪ್ರೀಂ ಕೋರ್ಟ್

ಕೇಂದ್ರ ಸರ್ಕಾರದ ಕೋವಿಡ್ ಲಸಿಕೆ ನೀತಿ ಟೀಕಿಸಿ ಪ್ರಧಾನಿ ಮೋದಿ ಅವರ ವಿರುದ್ಧ ಪೋಸ್ಟರ್‌ಗಳನ್ನು ಹಾಕಿದ್ದಕ್ಕಾಗಿ ಕನಿಷ್ಠ 24 ಜನರ ವಿರುದ್ಧ ದಾಖಲಾಗಿದ್ದ ಎಫ್ಐಆರ್‌ಗಳನ್ನು ರದ್ದುಗೊಳಿಸಲು ಕೋರಿ ಮನವಿ ಸಲ್ಲಿಸಲಾಗಿತ್ತು.

Bar & Bench

ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಮೂರನೇ ವ್ಯಕ್ತಿಯೊಬ್ಬರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಪುರಸ್ಕರಿಸುವುದು ಅಪರಾಧ ಕಾನೂನಿನಲ್ಲಿ ತಪ್ಪಾದ ಪೂರ್ವ ನಿದರ್ಶನಗಳಿಗೆ ಕಾರಣವಾಗುತ್ತದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ಕೇಂದ್ರ ಸರ್ಕಾರದ ಕೋವಿಡ್ ಲಸಿಕೆ ನೀತಿಯನ್ನು ಟೀಕಿಸುವ ಪೋಸ್ಟರ್‌ಗಳನ್ನು ಹಾಕಿದ್ದಕ್ಕಾಗಿ ಕನಿಷ್ಠ 24 ಜನರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ವಕೀಲ ಪ್ರದೀಪ್ ಕುಮಾರ್ ಯಾದವ್ ಅವರು ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎಂ ಆರ್ ಶಾ ಅವರಿದ್ದ ಪೀಠ ಶುಕ್ರವಾರ ಆಲಿಸಿತು.

"ನಾವು ಮೂರನೇ ವ್ಯಕ್ತಿಯ ಮನವಿ ಮೇರೆಗೆ ಎಫ್‌ಐಆರ್ ರದ್ದುಗೊಳಿಸಲು ಸಾಧ್ಯವಿಲ್ಲ. ಎಫ್‌ಐಆರ್ ಅನ್ನು ರದ್ದುಗೊಳಿಸುವುದಕ್ಕಾಗಿ ನಾವು ಪಿಐಎಲ್‌ಗಳನ್ನು ಪುರಸ್ಕರಿಸಲಾಗದು. ಹಾಗಾದರೆ ಇದು ಕ್ರಿಮಿನಲ್ ಕಾನೂನಿನಲ್ಲಿ ತಪ್ಪಾದ ಪೂರ್ವನಿದರ್ಶನಕ್ಕೆ ಕಾರಣವಾಗುತ್ತದೆ” ಎಂದು ನ್ಯಾಯಾಲಯ ಹೇಳಿತು.

"ದಯವಿಟ್ಟು ಈ ರೀತಿಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಬೇಡಿ" ಎಂದು ಇದೇ ವೇಳೆ ನ್ಯಾಯಾಲಯ ಮನವಿ ಸಲ್ಲಿಸಿದ್ದ ವಕೀಲರಿಗೆ ಎಚ್ಚರಿಕೆ ನೀಡಿತು. ಕಡೆಗೆ ಅರ್ಜಿದಾರರು ಮನವಿ ಹಿಂಪಡೆದರು.

ದೆಹಲಿ ನಗರದ ವಿವಿಧೆಡೆ ಹಾಕಲಾಗಿದ್ದ ಪೋಸ್ಟರ್‌ಗಳಲ್ಲಿ “ಮೋದಿಜೀ ನಮ್ಮ ಮಕ್ಕಳಿಗಾಗಿ ಇದ್ದ ಲಸಿಕೆಯನ್ನು ವಿದೇಶಗಳಿಗೆ ಏಕೆ ಕಳಹಿಸಿದಿರಿ?” ಎಂಬ ಸಂದೇಶವಿತ್ತು. ತರುವಾಯ ದೆಹಲಿ ಪೊಲೀಸರು 24 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಕೋವಿಡ್‌ಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಇತ್ತೀಚೆಗೆ ನೀಡಿದ್ದ ಆದೇಶವನ್ನು ಅರ್ಜಿ ಅವಲಂಬಿಸಿತ್ತು. ಸಾಮಾಜಿಕ ಮಾಧ್ಯಮಗಳ ಮೂಲಕ ವೈದ್ಯಕೀಯ ನೆರವು ಕೋರುವ ಸಾರ್ವಜನಿಕರ ಮೇಲೆ ಯಾವುದೇ ಕ್ರಿಮಿನಲ್‌ ಪ್ರಕರಣ ದಾಖಲಿಸದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಆ ಆದೇಶದಲ್ಲಿ ತಿಳಿಸಿತ್ತು.

ಆದರೆ ಈ ಆದೇಶಕ್ಕೆ ವ್ಯತಿರಿಕ್ತವಾಗಿ ಪ್ರಧಾನಿ ವಿರುದ್ಧದ ಪೋಸ್ಟರ್‌ಗೆ ಸಂಬಂಧಿಸಿದಂತೆ ಅಧಿಕಾರಿಗಳು ಅಮಾಯಕ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸುತ್ತಿದ್ದಾರೆ. ಆಸ್ತಿ ಹಾನಿ ನಿಯಂತ್ರಣ ಕಾಯಿದೆ, ದೆಹಲಿ ವಿಪತ್ತು ನಿರ್ವಹಣಾ ಕಾಯಿದೆ, ಐಪಿಸಿಯ ಸೆಕ್ಷನ್‌ 269, ಸೆಕ್ಷನ್‌ 34 ಹಾಗೂ ಪತ್ರಿಕೆ ಮತ್ತು ಪುಸ್ತಕಗಳ ನೋಂದಣಿ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.